ಮೈಸೂರಿನ ಅತ್ಯಂತ ಜನನಿಬಿಡ ಸಯ್ಯಾಜಿರಾವ್ ರಸ್ತೆಯಲ್ಲಿ ನಂಜೆ ಕತ್ತಲಲ್ಲಿ ಹಳೆ ಪುಸ್ತಕ ಮಾರುವವನ ಹತ್ತಿರ ಪುಸ್ತಕ ನೋಡುತ್ತಾ ನಿಂತಿದ್ದೆ. ಯಾರೋ ಕರೆದ ಹಾಗಾಯಿತು, ನೋಡಿದರೆ ನಮ್ಮ ಸುತ್ತ ರಸ್ತೆ ಬದಿಯಲ್ಲಿ, ಟ್ರಾಫಿಕ್ ಸಿಗ್ನಲ್‌ಗಳಲ್ಲಿ ಕಾಣಸಿಗುವ, ನಾವು ಯಾವತ್ತೂ ತಲೆ ಕೆಡಿಸಿಕೊಳ್ಳಲು ಹೋಗದ ಭಿಕ್ಷುಕ ಹುಡುಗಿ, ಜೊತೆಯಲ್ಲಿ ಆಗ ತಾನೆ ನಡೆಯಲು ಕಲಿತ ಮಗು. ಏನು ಬೇಕು ಅಂತ ಕೇಳಿದೆ. ನನ್ನನ್ನು ವಿಚಿತ್ರವಾಗಿ ನೋಡಿದ ಅವಳು, ದುಡ್ಡು ಅಂದಳು. ಅಪ್ಪ-ಅಮ್ಮ ಎಲ್ಲಿ, ಈ ಕತ್ತಲಲ್ಲಿ ಎಲ್ಲಿ ಇರ್ತೀಯ ಅಂತ ಕೇಳಿದೆ. ಅಮ್ಮ, ಅಪ್ಪ ಇಬ್ರೂ ಹಳ್ಳೀಲಿ ಇದಾರೆ, ಇಲ್ಲೇ ಸ್ವಲ್ಪ ದೂರದಲ್ಲಿ ಅರ್ಧ ಕಟ್ಟಿರೋ ಬಿಲ್ಡಿಂಗ್‌ನಲ್ಲಿ ನಾನಿರೋದು, ಅಂದಳು. ಶಾಲೆಗೆ ಹೋಗಲ್ವಾ ಅಂತ ಕೇಳಿದ್ದಕ್ಕೆ ಇಲ್ಲ, ಅಮ್ಮಂಗೆ ದುಡ್ಡು ಕಳಿಸಬೇಕು ಅಂದಳು. ನಮ್ಮ ಮಕ್ಕಳು ಸ್ಕೂಲಿಂದ ಮನೆಗೆ ಬರೋದು ಅರ್ಧ ಗಂಟೆ ತಡ ಆದರೆ ಚಡಪಡಿಸುವ ನಾವು ಈ ಪುಟ್ಟ ಮಕ್ಕಳು ಅಪ್ಪ, ಅಮ್ಮಂದಿರನ್ನು ಬಿಟ್ಟು ಬೇರೆ ಯಾವುದೋ ಊರಿಗೆ ಒಂಟಿಯಾಗಿ ಬಂದು ಭಿಕ್ಷೆ ಬೇಡುವಾಗ ಬೈದು ಓಡಿಸ್ತೀವಲ್ಲ ಅಂತ ಬೇಜಾರಾಯಿತು. ಇನ್ನೊಂದು ದಿನ ಸಿಟಿ ಬಸ್ ನಿಲ್ದಾಣದಲ್ಲಿ ಭಿಕ್ಷೆ ಬೇಡಲು ಬಂದ ಹುಡುಗನನ್ನು ಅಲ್ಲಿನ ಅಧಿಕಾರಿಗಳು ಹೊಡೆದು ಓಡಿಸಿದ್ದು ನೆನಪಾಯಿತು. ಜೊತೆಗೆ ಹೋಟೆಲ್‌ನಲ್ಲಿ ಮಾಸಿದ ಬಟ್ಟೆ ಹಾಕಿಕೊಂಡು, ಬಳಲಿದ ಮುಖ ಹೊತ್ತುಕೊಂಡು ಮಾಲಿಕನ ಕೈಲಿ ಬೈಸಿಕೊಂಡು ಟೇಬಲ್ ಒರೆಸಲು ಬಂದ ಹುಡುಗ, ಪಾರ್ಕಿನಲ್ಲಿ ಪೋಲೀಸರು ಹಿಡಿಯುತ್ತಾರೆ ಎಂದು ಓಡಿಹೋದ ಭಿಕ್ಷೆ ಬೇಡುತ್ತಿದ್ದ ಹುಡುಗರು.
ಇವರೆಲ್ಲ ಯಾವಾಗ ದಿನಾ ಬೆಳಿಗ್ಗೆ ನಮ್ಮ ಮಕ್ಕಳ ತರ ಯೂನಿಫಾರ್ಮ್ ಹಾಕಿಕೊಂಡು, ಕೈಯಲ್ಲಿ ಸ್ಕೂಲ್ ಬ್ಯಾಗ್ ಹಿಡಿದುಕೊಂಡು, ಇವತ್ತು ಹೋಮ್‌ವರ್ಕ್ ಮಾಡಿದೀಯಾ ಅಂತ ಗೆಳೆಯರ ಜೊತೆ ಚರ್ಚೆ ಮಾಡಿಕೊಂಡು ಶಾಲೆಗೆ ಹೋಗೋದು? ಬಹುಶ ಸಾಧ್ಯವಿಲ್ಲ ಅನ್ನಿಸುತ್ತಿದೆ. ಮಕ್ಕಳನ್ನು ಪ್ರಾಥಮಿಕ ಶಿಕ್ಷಣದ ಕಡೆಗೆ ಸೆಳೆಯುವ ನಮ್ಮ ಸರಕಾರಗಳ ಬಣ್ಣಬಣ್ಣದ ಯೋಜನೆಗಳಲ್ಲಿ ಹೆಚ್ಚಿನವು ಇಲ್ಲಿವರೆಗೆ ತೀರಾ ಬಡವರ್ಗದವರನ್ನು ಮುಟ್ಟಿಲ್ಲ, ಮುಟ್ಟುವುದೂ ಇಲ್ಲ. ಇದೇ ನಿಟ್ಟಿನಲ್ಲಿ ಇಂತಹ ಮಕ್ಕಳನ್ನು ಮನಸ್ಸಿನಲ್ಲಿಟ್ಟುಕೊಂಡು ಕೇಂದ್ರ ಸರಕಾರ ಹೊರತಂದ ಮೂಲಭೂತ ಶಿಕ್ಷಣ ಹಕ್ಕು ಕಾಯಿದೆ (Right to Education Act) ಕೂಡ ಬಹುಶ ಅಂತಹ ಅರೆಬೆಂದ ಯೋಜನೆಗಳ ಮಧ್ಯೆ ಕಳೆದುಹೋಗಬಹುದು. ದೇಶದ ಎಲ್ಲಾ ಮಕ್ಕಳಿಗೂ ಉಚಿತ ಮೂಲಭೂತ ಶಿಕ್ಷಣವನ್ನು ಸುಪ್ರೀಂಕೋರ್ಟ್ ಪ್ರತಿಪಾದಿಸಿದ 17 ವರ್ಷಗಳ ನಂತರ ಬಂದ ಈ ಕಾಯಿದೆ ಅತಿ ಮುಖ್ಯವಾಗಿ ತಲುಪಬೇಕಾಗಿರುವುದು ದನ ಕಾಯುವ, ಹೋಟೆಲ್‌ಗಳಲ್ಲಿ ಕೆಲಸ ಮಾಡುವ, ಮನೆಗೆಲಸ ಮಾಡುವ ಮತ್ತು ಮುಖ್ಯವಾಗಿ ಬಾಲ್ಯ ವಿವಾಹವಾಗುವ ಇಂತಹ ’ಅಗೋಚರ’ ಮಕ್ಕಳ ಹತ್ತಿರ, ಶಾಲೆಗೆ ಹೋಗಿಯೂ ತಿಂಗಳೊಳಗೆ ತಿರುಗಿ ಕೆಲಸಕ್ಕೆ ಮರಳುವ ಮಕ್ಕಳ ಮತ್ತು ಬಡವರೆಂಬ ಒಂದೇ ಕಾರಣಕ್ಕೆ ಬುದ್ದಿವಂತರಿದ್ದರೂ ಯಾವ ಸೌಕರ್ಯಗಳೂ ಇಲ್ಲದ, ಶಿಕ್ಷಕರಿಲ್ಲದ ಸರಕಾರಿ ಶಾಲೆಗಳಲ್ಲಿ ಪರದಾಡುವ ಮಕ್ಕಳ ಹತ್ತಿರ.
"...ನಮ್ಮ ಸಂವಿಧಾನದ ಪ್ರತಿಪಾದಕರು ಜೋಪಡಿಗಳನ್ನು ಕಟ್ಟಿ, ಮಕ್ಕಳಿಗೆ ಅಲ್ಲಿ ಅನುಭವವಿಲ್ಲದ ಶಿಕ್ಷಕರನ್ನು ಕೊಟ್ಟು, ಕೆಟ್ಟ ಪಠ್ಯಪುಸ್ತಕಗಳನ್ನು ಓದಲು ಕೊಟ್ಟು, ಆಟವಾಡಲು ಮೈದಾನ ಕೊಡದೆ ಪ್ರಾಥಮಿಕ ಶಿಕ್ಷಣ ಬೆಳೆಯುತ್ತಿದೆ ಎಂದು ಹೇಳಿಕೊಳ್ಳಲು ಇಚ್ಚಿಸಲಿಲ್ಲ... ಅವರು ಆರರಿಂದ ಹದಿನಾಲ್ಕು ವರ್ಷದ ಮಕ್ಕಳಿಗೆ ನಿಜವಾದ ಶಿಕ್ಷಣ ಕೊಡಬೇಕೆಂದು ಅಂದುಕೊಂಡರು," ಎಂದು ಹೇಳುತ್ತದೆ RTE Act ಸಮಿತಿಯ ಒಂದು ವರದಿ.
ಆದರೆ ನಿಜವಾದ ಶಿಕ್ಷಣ ಅಂದರೆ ಏನು? ಮೂಲಭೂತ ಶಿಕ್ಷಣ ಕಾಯಿದೆ ಪ್ರಕಾರ ಒಂದು ಮಗುವಿನ ಕಲಿಕೆ ಭಯ ಮುಕ್ತ ವಾತಾವರಣದಲ್ಲಿ, ಅಂದರೆ ಶಿಕ್ಷೆಗಳಿಂದ ಮುಕ್ತ ಪರಿಸರದಲ್ಲಿ ನಡೆಯಬೇಕು, ಮೂರು ವರ್ಷಗಳಲ್ಲಿ ಸರಕಾರ ಪ್ರತಿ ಕಿಲೋಮೀಟರ್‌ಗೂ ಒಂದು ಶಾಲೆ ತೆರೆಯಬೇಕು, ಆಯಾ ಪ್ರದೇಶದ ಸಾಮಜಿಕ ಹಾಗೂ ಸಾಂಸ್ಕೃತಿಕ ಅಡೆತಡೆಗಳು ಮಕ್ಕಳ ಶಿಕ್ಷಣಕ್ಕೆ ಅಡ್ಡಿಯುಂಟು ಮಾಡದ ಹಾಗೆ ಸರಕಾರ ನೋಡಿಕೊಳ್ಳಬೇಕು, ಪ್ರತಿ 30 ಮಕ್ಕಳಿಗೆ ಒಬ್ಬ ಶಿಕ್ಷಕ ಇರಲೇಬೇಕು, ಇದೆಲ್ಲದರ ಜೊತೆಗೆ ತಮ್ಮ ಮಕ್ಕಳು ಉಚಿತ ಕಲಿಕೆಯಿಂದ ವಂಚಿತರಾದರೆ ಹೆತ್ತವರು ಕೇಸ್ ಹಾಕಬಹುದು, ಹೀಗೆ ಹತ್ತು ಹಲವು...
ಆದರೆ ಇವೆಲ್ಲ ಅನುಷ್ಟಾನಕ್ಕೆ ಬರುವುದು ಯಾವಾಗ? ಯಾರಿಂದ? ನಾವೆಷ್ಟೇ ಭಾರತೀಯ ಶಿಕ್ಷಣ ಪದ್ಧತಿ ಶ್ರೇಷ್ಠ ಎಂದು ಬೀಗಿದರೂ ಇಲ್ಲಿರುವಷ್ಟು ಸಾಮಾಜಿಕ, ಶೈಕ್ಷಣಿಕ ಅರಾಜಕತೆ ಇನ್ನೆಲ್ಲೂ ಇಲ್ಲ. ಹಳ್ಳಿಗಳಲ್ಲಿ ಇನ್ನೂ ಮರದ ಕೆಳಗೆ ಪಾಠ ನಡೆಯುತ್ತಿದೆ, ಶಾಲಾ ಕಟ್ಟಡಗಳು ದನ, ಕುರಿ ದೊಡ್ಡಿಗಳಾಗಿವೆ. ಇನ್ನು ನಮ್ಮ ರಾಜ್ಯದ ಶಾಲೆಗಳಿಗೆ 35,೦೦೦ರಿಂದ 50,000 ಶೌಚಾಲಯಗಳ ಅಗತ್ಯವಿದೆ. ಇವತ್ತಿಗೂ ಹೆಣ್ಣುಮಕ್ಕಳಿಗೆ ಅಲ್ಲಿ ಬಯಲು, ಪೊದೆಗಳೇ ಶೌಚಾಲಯಗಳು. ಇದು ಸರಕಾರಿ ಶಾಲೆಗಳ ಗತಿಯಾದರೆ ಖಾಸಗಿ ಶಾಲೆಗಳೇನು ಕಮ್ಮಿಯಿಲ್ಲ. ಬೆಂಗಳೂರಿನ ಗಲ್ಲಿ ಗಲ್ಲಿಯಲ್ಲಿ, ಬಹುಮಹಡಿ ಕಟ್ಟಡದ ಮೇಲಂತಸ್ತಿನಲ್ಲಿ ಶಾಲೆಗಳಿವೆ. ಮಕ್ಕಳಿಗೆ ಬೇಕಾದ basic infrastructure ಅಲ್ಲಿಲ್ಲ, ಕೆಳಗೆ ನೋಡಿದರೆ ರಸ್ತೆ, ವಾಹನಗಳ ಸದ್ದು. ದೊಡ್ಡಿ ತರ ನೂರಾರು ಮಕ್ಕಳನ್ನು ಒಂದೇ ತರಗತಿಗೆ ತುಂಬಿರುತ್ತಾರೆ. ಇನ್ನು ಆಟದ ಮೈದಾನಗಳ ಬಗ್ಗೆ ಕೇಳುವುದೇ ಬೇಡ. Central Finance Commission ಈ ಕಾಯಿದೆ ಜಾರಿಗೆ ತರಲು ಬಿಡುಗಡೆ ಮಾಡಿದ 25,000 ಕೋಟಿ ರೂ. ಮತ್ತು ಕೇಂದ್ರ ಕೊಡುತ್ತಿರುವ 15,000 ಕೋಟಿ ರೂ. ಇಡೀ ದೇಶದ ಸರಕಾರಿ ಶಾಲೆಗಳಿಗೆ ಏನೇನೂ ಸಾಲದು. ಯಾಕೆಂದರೆ ಮೊದಲು ಅಲ್ಲಿನ ಮೂಲಭೂತ ಸೌಕರ್ಯಗಳನ್ನು ಸರಿಪಡಿಸಬೇಕು, ಆಮೇಲೆ ತಾನೆ ಮಕ್ಕಳನ್ನು ಶಾಲೆಗೆ ಕರೆತರಲು ಸಾಧ್ಯ? ಒಂದು ಸಂತಸದ ವಿಷಯವೆಂದರೆ ಈಗ ಸರಕಾರಿ ಶಾಲೆಗಳಲ್ಲಿ ಶಿಕ್ಷಣದ ಗುಣಮಟ್ಟ ಖಾಸಗಿ ಶಾಲೆಗಳಿಗಿಂತ ಚೆನ್ನಾಗಿದೆ. ಇದಕ್ಕೆ ಉದಾಹರಣೆ ಈ ಸಲದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಕರ್ನಾಟಕದಲ್ಲಿ ಶೇಕಡಾ ಸೊನ್ನೆ ತೆಗೆದ 86 ಶಾಲೆಗಳಲ್ಲಿ ಕೇವಲ 2 ಸರಕಾರಿ ಶಾಲೆಗಳು.
ಕರ್ನಾಟಕವೊಂದರಲ್ಲೇ ಸರಕಾರಿ ಪ್ರಾಥಮಿಕ ಶಾಲೆಗಳಲ್ಲಿ 50,000 ಶಿಕ್ಷಕರ ಅಗತ್ಯ ಇದೆ. ಮೂಲಭೂತ ಶಿಕ್ಷಣ ಕಾಯಿದೆ ಪ್ರಕಾರ 30 ಮಕ್ಕಳಿಗೆ ಒಬ್ಬ ಶಿಕ್ಷಕ ಇರಬೇಕೆಂದರೆ 1.5 ಲಕ್ಷ ಶಿಕ್ಷಕರ ಮತ್ತು ಸರ್ವ ಶಿಕ್ಷಣ ಅಭಿಯಾನದ ಕೆಳಗೆ ಇನ್ನೂ 2.25 ಲಕ್ಷ ಶಿಕ್ಷಕರ ನೇಮಕ ಮಾಡಿಕೊಳ್ಳಬೇಕು. ಈ ನೇಮಕಾತಿಯಿಂದ ನಮ್ಮ ಶಾಲೆಗಳ, ಅಲ್ಲಿ ಸಿಗುವ ಶಿಕ್ಷಣದ ಗುಣಮಟ್ಟ ಹೆಚ್ಚಾಗುವುದಿಲ್ಲ. ಆದರೆ ಶಿಕ್ಷಕರಿಲ್ಲದೆ ಪರದಾಡುವ ಮಕ್ಕಳ ಪರಿಪಾಟಲು ಕಡಿಮೆಯಾಗುತ್ತದೆ, ಇರುವ ಕೆಲವೇ ಶಿಕ್ಷಕರ ಮೇಲಿರುವ ಭಾರ ಕಡಿಮೆಯಾಗುತ್ತದೆ. UNESCOದ ಭಾರತೀಯ ಶಿಕ್ಷಣದ ಮೇಲಿನ ಒಂದು ಅಧ್ಯಯನದ ಪ್ರಕಾರ ನಾವು ಶಿಕ್ಷಣದಲ್ಲಿನ ಭ್ರಷ್ಟತೆಯಲ್ಲಿ (Corruption in education) ಇಡೀ ಪ್ರಪಂಚದಲ್ಲಿ ಎರಡನೆ ಸ್ಥಾನದಲ್ಲಿದ್ದೇವೆ, ಉಗಾಂಡದ ನಂತರ; ಅದಕ್ಕೆ ಮುಖ್ಯ ಕಾರಣ ಶಾಲೆಗಳಲ್ಲಿ ಶಿಕ್ಷಕರ ಗೈರುಹಾಜರು. ಇದಕ್ಕೆ ಒತ್ತು ಕೊಟ್ಟಂತೆ ನೇಮಕಾತಿ, ವರ್ಗಾವಣೆಯಲ್ಲಿ ರಾಜಕೀಯ, ಶಿಕ್ಷಕರೇ ನಡೆಸುವ ಖಾಸಗಿ ಟ್ಯೂಷನ್‌ಗಳು. ಜೊತೆಗೆ ಪರೀಕ್ಷೆಯಲ್ಲಿ ನಡೆಯುವ ಅವ್ಯವಹಾರ; ಒಂದು ಮೆಡಿಕಲ್, ಮ್ಯಾನೇಜ್‌ಮೆಂಟ್, ಇಂಜಿನಿಯರಿಂಗ್ ಎಂಟ್ರೆನ್ಸ್ ಟೆಸ್ಟ್‌ನಲ್ಲಿ ಓದದೆ ಪಾಸಾಗಬೇಕಾದರೆ ಈಗ ಐದು ಸಾವಿರದಿಂದ ಲಕ್ಷಗಟ್ಟಲೆ ಹಣ ಬಿಚ್ಚಬೇಕು. ಇದನ್ನೆಲ್ಲ ತಡೆಯಬೇಕೆಂದರೆ ಶಿಕ್ಷಕರ ಬಡ್ತಿಯಲ್ಲಿ ಏಕನೀತಿಯಿರಬೇಕು, ಅವರಿಗೆ ಸಂಬಳ ಸರಿಯಾಗಿ ತಲುಪಬೇಕು, 20-30 ವರ್ಷಗಳಿಂದ ತಾತ್ಕಾಲಿಕವಾಗಿ ಕೆಲಸ ಮಾಡುತ್ತಿರುವ ಶಿಕ್ಷಕರನ್ನು ಖಾಯಂ ಮಾಡಬೇಕು. ಎಲ್ಲಕಿಂತ ಮೊದಲು ನಮ್ಮ ಶಿಕ್ಷಕರು ಪಾಠ ಮಾಡುವ ರೀತಿಯಿಂದ ಮಕ್ಕಳನ್ನು ಶಾಲೆಯ ಕಡೆಗೆ ಆಕರ್ಷಿಸಬೇಕು, ಅವರ ಪಾಠ ಮಕ್ಕಳಿಗೆ ಮನೆಯಲ್ಲಿ ಅಜ್ಜಿ ಹೇಳುವ ಕಥೆಯಷ್ಟು ಆಕರ್ಷಕವಾಗಿರಬೇಕು. ಈ ಟೀಚರ‍್ಗೆ ಮೈ ಹುಷಾರಿಲ್ಲದೆ ಇವತ್ತು ರಜೆ ತೊಗೊಳ್ಳಲಿ ಅಂತ ಯಾವ ಮಕ್ಕಳಿಗೂ ಅನ್ನಿಸಬಾರದು. ಅದು ಸಾಧ್ಯವಾಗುವುದು ಕೇವಲ ಪ್ರೀತಿಯಿಂದ ಆಸಕ್ತಿಯಿಂದ ಕಲಿಸುವ ಶಿಕ್ಷಕರಿಂದ. ನನಗಿನ್ನೂ ನೆನಪಿದೆ, ನಮ್ಮ ಮಿಸ್ ನಾವು ಹೈಸ್ಕೂಲ್ ಮುಗಿಸಿದ ಕೊನೆ ದಿನ ನನ್ನ ಬಿಟ್ಟು ಹೋಗ್ತೀರಾ ಅಂತ ಅತ್ತಿದ್ದರು, ನಾವು ಹೋಗುತ್ತಿದ್ದುದು ಅಲ್ಲೆ ಪಕ್ಕದಲ್ಲಿದ್ದ ಅದೇ ಶಾಲೆಗೆ ಸೇರಿದ ಕಾಲೇಜಿಗಾದರೂ. ಅಲ್ಲಿ ಕೇವಲ ಪಠ್ಯದ ಕಲಿಕೆ ಇರಲಿಲ್ಲ, ನಮ್ಮ ಶಿಕ್ಷಣ ಪದ್ಧತಿಯಲ್ಲಿ ಮರೆಯಾಗಿರುವ critical thinkingಗೆ ಕೂಡ ಸ್ವತಂತ್ರ ಅವಕಾಶವಿತ್ತು, ಜೊತೆಗೆ ಇವರು ನಮ್ಮ ಮಕ್ಕಳು ಅನ್ನುವ ಪ್ರೀತಿಯಿತ್ತು.
ಶಿಕ್ಷಣದ ವೆಚ್ಚ -- ಪುಸ್ತಕಗಳ ಮತ್ತಿತರ ಪರಿಕರಗಳ ವೆಚ್ಚ, ಟ್ಯೂಷನ್ ಇತ್ಯಾದಿ-- ಎಂಟು ವರ್ಷಗಳಲ್ಲಿ ಶೇ. 160 ಜಾಸ್ತಿಯಾಗಿದೆ. ಒಂದು ಮಗುವಿನ ವಾರ್ಷಿಕ ಶಾಲಾ ವೆಚ್ಚ ಮೂರು ಪಟ್ಟು ಹೆಚ್ಚಾದರೆ, ಆ ಕುಟುಂಬದ ವಾರ್ಷಿಕ ಆದಾಯ ಬರೀ ಶೇ. 30ರಷ್ಟು ಜಾಸ್ತಿಯಾಗಿದೆ. ಆದರೂ ಎಷ್ಟೇ ಕಷ್ಟಪಟ್ಟು ಮಕ್ಕಳನ್ನು ಓದಿಸಿದರೂ ಶಿಕ್ಷಣದ ಗುಣಮಟ್ಟ ಎಷ್ಟು ಕುಸಿದಿದೆ ಅಂದರೆ ಐದನೇ ತರಗತಿಯ ಶೇ. 52.8ರಷ್ಟು ಮಕ್ಕಳಿಗೆ ಎರಡನೇ ತರಗತಿಯ ಮಕ್ಕಳಿಗೆ ಇರಬೇಕಾದ ಸಾಮಾನ್ಯ ಜ್ಞಾನವೂ ಇಲ್ಲ. ನಮ್ಮ ಶಾಲೆಗಳಿಂದ, ಕಾಲೇಜುಗಳಿಂದ ಹೊರಬರುವ ಮಕ್ಕಳಲ್ಲಿ ಅರ್ಧದಷ್ಟು unemployable, ಅಂದರೆ ಯಾವ ಉದ್ಯೋಗಕ್ಕೂ ಸೇರುವ ನಿಪುಣತೆ ಇಲ್ಲದವರು. ಇನ್ನು ಪ್ರತಿ ವರ್ಷ ನಮ್ಮ ದೇಶದ 490 ವಿಶ್ವವಿದ್ಯಾಲಯಗಳು, ಸುಮಾರು 20,769 ಕಾಲೇಜುಗಳಿಂದ ಹೊರಬರುವ ಲಕ್ಷಾಂತರ ವಿದ್ಯಾರ್ಥಿಗಳು ಎಲ್ಲಿ ಹೋಗುತ್ತಾರೆ? ತಾವು ಓದಿದ ವಿಷಯಕ್ಕೆ ಸಂಬಂಧವಿಲ್ಲದ, ತಮ್ಮ ಮನಸ್ಸಿಗೆ ಹತ್ತಿರವಿಲ್ಲದ ಯಾವುದೋ ಕೆಲಸ ಮಾಡುತ್ತಾರೆ. ಇದರಿಂದ ಮಾನವ ಸಂಪನ್ಮೂಲ ನಷ್ಟ ಆಗುವುದು ದೇಶಕ್ಕೇ. ಇದಕ್ಕೆ ಒಂದೇ ಪರಿಹಾರ. ಮಕ್ಕಳು ಸರಕಾರಿ ಅಥವಾ ಖಾಸಗಿ ಯಾವ ಶಾಲೆಯಲ್ಲೇ ಓದಲಿ, ಅಲ್ಲಿನ ಶಿಕ್ಷಣದಿಂದ ಮಕ್ಕಳ practical ಜ್ಞಾನ ವೃದ್ಧಿಯಾಗಬೇಕು, ಆ ಜ್ಞಾನದಿಂದ ಎಲ್ಲಾ ಸ್ಥರಗಳಲ್ಲೂ ಸಾಮಾಜಿಕ, ಆರ್ಥಿಕ ಸ್ಥಿರತೆ ಬರಬೇಕು. ಯಾಕೆಂದರೆ ಸರಕಾರ ಎಷ್ಟು ಕಾಯಿದೆಗಳನ್ನು, ಆಕರ್ಷಕ ಯೋಜನೆಗಳನ್ನು ಹೊರತಂದರೂ, ಕೊನೆಗೆ ಮಕ್ಕಳು ಮತ್ತು ಅವರ ಮನೆಯವರು ಮೊದಲು ಯೋಚಿಸುವುದು ಒಂದೇ-- ನಾಳೆ ಬೆಳಗ್ಗಿನ ಊಟದ ಚಿಂತೆ. ಅದು ಬಗೆಹರಿಯದೆ ನಾವೆಷ್ಟೇ incentives ಕೊಟ್ಟರೂ ಅದು ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ ಜುಟ್ಟಿಗೆ ಮಲ್ಲಿಗೆ ಹೂ ತಂದು ಕೊಟ್ಟ ಹಾಗೆ. ಅಷ್ಟಕ್ಕೂ ಯಾರೋ ಹೇಳಿದ ಹಾಗೆ ಜ್ಞಾನವನ್ನು ಐಶ್ವರ್ಯವಾಗಿ ಮತ್ತು ಸಾಮಾಜಿಕ ಹಿತಕ್ಕಾಗಿ ಪರಿವರ್ತಿಸುವ ಒಂದು ದೇಶದ ಸಾಮರ್ಥ್ಯ ಅದರ ಭವಿಷ್ಯವನ್ನು ನಿರ್ಣಯಿಸುತ್ತದೆ.
Sunday, May 23, 2010
Subscribe to:
Posts (Atom)