Pages

Subscribe:

Ads 468x60px

Tuesday, October 12, 2010

ಮಿಗ್ ವಿಮಾನಗಳು ’ಹಾರಾಡುವ ಶವಪೆಟ್ಟಿಗೆ’ಗಳಾಗೇ ಉಳಿಯಬೇಕೆ?

ಸೆಪ್ಟೆಂಬರ್ 23 ಬಂದು ಹೋಯಿತು. ನಲವತ್ತೈದು ವರ್ಷಗಳ ಹಿಂದೆ (1965) ಭಾರತ-ಪಾಕಿಸ್ತಾನ ಯುದ್ಧ ಮುಗಿದ ಆ ಘಳಿಗೆ ಯಾರಿಗೂ ನೆನಪಾಗಲಿಲ್ಲ. ಮೈಕ್ ಕೈಗೆ ಸಿಕ್ಕಿದ ಕೂಡಲೆ ದೇಶಪ್ರೇಮದ ಭಾಷಣ ಬಿಗಿಯುವ ರಾಜಕಾರಣಿಗಳಿಗೂ, ಸುದ್ದಿಯೇ ಅಲ್ಲದಿದ್ದನ್ನೂ ಗಂಟೆಗಟ್ಟಲೆ ತೋರಿಸುವ ಟಿವಿ ಚಾನಲ್‌ಗಳಿಗೂ, ಪತ್ರಿಕೆಯವರಿಗೂ ಆ ಯುದ್ಧ ಮರೆತುಹೋಗಿತ್ತು. ಅಂದು 1,800sq.km ನೆಲವನ್ನು ಆಕ್ರಮಿಸಿಕೊಂಡಿದ್ದರೂ ಭಾರತ 550sq.km ಆಕ್ರಮಿಸಿಕೊಂಡಿದ್ದ ಪಾಕ್‌ಗಿಂತ ತಂತ್ರಜ್ಞಾನದಲ್ಲಿ ಹಿಂದಿತ್ತು. ಆದರೂ ನಾವು ಗೆದ್ದಿದ್ದು ಮೆಷಿನ್‌ಗಳ ಸಹಾಯದಿಂದಲ್ಲ, ಅವಡುಗಚ್ಚಿ ಕಾದಾಡಿದ ಯೋಧರಿಂದ. 1962ರಲ್ಲಿ ಭಾರತದ ಸೈನಿಕರು ಚೀನಾ ವಿರುದ್ಧ ಹೋರಾಡುತ್ತಿದಾಗ ಅವರ ಕೈಯಲ್ಲಿದ್ದುದು ಕೇವಲ ಶತಮಾನದಷ್ಟು ಹಳೆಯ .303 ಲೀ ಎನ್‌ಫೀಲ್ಡ್ ರೈಫಲ್‌ಗಳು. ಆದರೆ ಚೀನಿಯರ ಕೈಯಲ್ಲಿ ಸೆಮಿ-ಆಟೊಮ್ಯಾಟಿಕ್‌ಗಳಿದ್ದವು. ನಮ್ಮ ಗನ್ ತಯಾರಿಸುವ ಫ್ಯಾಕ್ಟರಿಗಳು ಕಾಫಿ ಮೇಕರ್‌ಗಳನ್ನು ತಯಾರಿಸುವುದರಲ್ಲಿ ಮಗ್ನರಾಗಿದ್ದವು. ನಮ್ಮ ಸೈನಿಕರಿಗೆ ಆಗ ಇದ್ದ ಆಧುನಿಕ ಆಯುಧಗಳ, ಉತ್ತಮ ಗುಣಮಟ್ಟದ ವಾಹನಗಳ, ವಿಮಾನಗಳ ಕೊರತೆ ಈಗಲೂ ಕಮ್ಮಿಯಾಗಿಲ್ಲ. ಒಂದೇ ವ್ಯತ್ಯಾಸವೆಂದರೆ ಆಗ ನಮ್ಮ ವಾಯು ಸೇನೆಯ ಸೈನಿಕರು ಯುದ್ಧದಲ್ಲಿ ಸಾಯುತ್ತಿದ್ದರು, ಈಗ ಶಾಂತಿಯ ಸಮಯದಲ್ಲಿ ತಮ್ಮ ವಿಮಾನದಲ್ಲಿನ ತಾಂತ್ರಿಕ ದೋಷಗಳಿಂದಾಗಿ ಸಾಯುತ್ತಿದ್ದಾರೆ.


ಇದೆಲ್ಲ ನೆನಪಾಗಿದ್ದು ಮೊನ್ನೆ ಅದೇ ಸೆಪ್ಟೆಂಬರ್ 23ರಂದು ಒಂದೇ ದಿನದಲ್ಲಿ ನಾಲ್ಕು ಮಿಗ್ ವಿಮಾನಗಳು (ಮೂರು ಮಿಗ್-21, ಒಂದು ಮಿಗ್-29 ) ಮೂರು ದೇಶಗಳಲ್ಲಿ ಪತನವಾದಾಗ. ಮಿಗ್-27 ವಿಮಾನ ಪಶ್ಚಿಮ ಬಂಗಾಳದ ಕಾಲೈಕುಂಡ ವಾಯು ನೆಲೆಯ ಹತ್ತಿರ ಅವಘಡಕ್ಕೀಡಾಯಿತು. ಸಮಾಧಾನದ ಸಂಗತಿಯೆಂದರೆ ಅದರಲ್ಲಿದ್ದ ಪೈಲಟ್ ಸ್ಕ್ವಾಡ್ರನ್ ಲೀಡರ್ ಮಹಾಪಾತ್ರ ಪ್ಯಾರಾಚೂಟ್ ಮೂಲಕ ಕೆಳಗೆ ಹಾರಿ ಜೀವ ಉಳಿಸಿಕೊಂಡರು. ಇದು ನಮ್ಮ ದೇಶದಲ್ಲಿ ಈ ವರ್ಷದ ಮೂರನೇ ಮಿಗ್-27 ಅಪಘಾತ. ಫೆಬ್ರವರಿಯಲ್ಲಿ ನಡೆದ ಮತ್ತೊಂದು ಮಿಗ್-27 ಪತನದಲ್ಲಿ ಅದರ ಪೈಲಟ್ ಸಾವನ್ನಪ್ಪಿದರು, ಜುಲೈನ ಅಪಘಾತದಲ್ಲಿ ಒಬ್ಬರು ಸತ್ತು, ಪೈಲಟ್ ಸಾಕೇತ್ ವರ್ಮ ಸೇರಿದಂತೆ ಹತ್ತು ಜನ ಗಾಯಗೊಂಡರು. ಮಿಗ್ ಅಪಘಾತ ಸರಣಿಯಲ್ಲಿ ಇದು ಮೊದಲೂ ಅಲ್ಲ, ಬಹುಶ ಕೊನೆಯೂ ಅಲ್ಲ. ಇಂತಹ ಹೆಚ್ಚಿನ ಅವಘಡಗಳಿಗೆ ವರ್ಷಗಳಿಂದ ಸರಕಾರ ಕೊಡುತ್ತಿರುವ ಕಾರಣ ತಾಂತ್ರಿಕ ವೈಫಲ್ಯ ಅಥವಾ pilot error. ಒಂದು ಉದಾಹರಣೆ ಏಪ್ರಿಲ್ 4, 1996ರಂದು ಆದ ಮಿಗ್ ಪತನ. ವಿಂಗ್ ಕಮಾಂಡರ್ ಎನ್. ಕೆ. ರಾವ್ ನಡೆಸುತ್ತಿದ್ದ ಮಿಗ್-21FL ವಿಮಾನ ಇಂಜಿನ್ ತೊಂದರೆಯಿಂದಾಗಿ ಕೆಳಗುರುಳಿತು. ಕೆಳಗೆ ಬೀಳುವ ಮುನ್ನ ತನ್ನ ಸೀಟ್‌ನಿಂದ ಹೊರಗೆ ಬರಲು ರಾವ್ ಯತ್ನಿಸಿದಾಗ ತಾಂತ್ರಿಕ ತೊಂದರೆಯಿಂದಾಗಿ ಅಲ್ಲೇ ಸಿಕ್ಕಿ ಹಾಕಿಕೊಂಡು ವಿಮಾನದ ಜೊತೆಗೆ ಸುಟ್ಟುಹೋದರು. ದುರಂತದ ಇನ್ನಿತರ ತಾಂತ್ರಿಕ ಕಾರಣಗಳಲ್ಲಿ ಒಂದು, ಪೈಲಟ್ ಸೀಟು ಯಾವುದೋ ಹಳೇ ದುರಂತಕ್ಕೀಡಾದ ವಿಮಾನದಿಂದ ತೆಗೆದು ಅಳವಡಿಸಲಾಗಿತ್ತು ಮತ್ತು ಅಪಘಾತದ ಸಮಯದಲ್ಲಿ ಮೊದಲೇ ಹಳತಾಗಿದ್ದ ಸೀಟು ಅರ್ಧ ಮುರಿದುಹೋಗಿ ಪೈಲಟ್ ಅಲ್ಲೇ ಸಿಕ್ಕಿಹಾಕಿಕೊಳ್ಳುವುದಕ್ಕೆ ಕಾರಣವಾಯ್ತು.

ಮಾರ್ಚ್ 1, 2007ರಂದು ಸ್ಕ್ವಾಡ್ರನ್ ಲೀಡರ್ ಸ್ವಪ್ನಿಲ್ ಸಾಕಾರ್ ಪಾಂಡೆ, ತಾನು ಅಭ್ಯಾಸಕ್ಕೆಂದು ನಡೆಸುತ್ತಿದ್ದ ಮಿಗ್-21 ವಿಮಾನದಲ್ಲಿ ಕಂಡ ತಾಂತ್ರಿಕ ದೋಷದಿಂದ ಜನನಿಬಿಡ ಪ್ರದೇಶದಲ್ಲಿ ವಿಮಾನ ಬೀಳುವುದನ್ನು ತಪ್ಪಿಸಲು ಹೋಗಿ ಕಾಡಿನಲ್ಲಿ ಅಪ್ಪಳಿಸಿ ತಾನೂ ಸಾವಿಗೀಡಾದರು. ಇಂತಹ ತಾಂತ್ರಿಕ ಕಾರಣಗಳು, ಮಿಗ್ ವಿಮಾನಗಳಿಗೆ ಅಳವಡಿಸುವ ಕಡಿಮೆ ಗುಣಮಟ್ಟದ ಹಳೆ ಬಿಡಿ ಭಾಗಗಳು ಕೇವಲ ಅಪಘಾತಗಳಿಗೆ ದಾರಿ ಮಾಡಿಕೊಡುತ್ತಿಲ್ಲ, ನೂರಾರು ಜನರ, ಜೊತೆಗೆ ನಮ್ಮ ವಾಯು ಸೇನೆಯ ನುರಿತ ಸೈನಿಕರೂ, ಆಗ ತಾನೆ ಹೊಸ ಕನಸುಗಳನ್ನು ಇಟ್ಟುಕೊಂಡು ವಾಯು ಸೇನೆ ಸೇರುವ ಯುವ ಪೈಲಟ್‌ಗಳೂ ಕಾರಣವಿಲ್ಲದೆ ಬಲಿಯಾಗುತ್ತಿದ್ದಾರೆ.

ಇಂತಹ ಮಿಗ್ ಅಪಘಾತಗಳಲ್ಲಿ ಅನ್ಯಾಯವಾಗಿ ಸಾವಿಗೀಡಾದ ಪೈಲಟ್‌ಗಳ ನೆನಪಿಗಾಗಿ ಹುಟ್ಟಿದ್ದು ಅಭಿಜಿತ್ ಏರ್ ಸೇಫ್ಟಿ ಫೌಂಡೇಷನ್. 2001ರಲ್ಲಿ ಮಿಗ್ ಪತನವಾಗಿ ಸಾವಿಗೀಡಾದ ಫ್ಲೈಟ್‌ ಲೆಫ್ಟಿನೆಂಟ್‌ ಅಭಿಜಿತ್ ಅನಿಲ್ ಗಾಡ್ಗಿಲ್ ತಾಯಿ ಕವಿತಾ ಗಾಡ್ಗಿಲ್ ಅದರ ಸಂಸ್ಥಾಪಕಿ. ತನ್ನ ಮಗನ ತಪ್ಪಿನಿಂದಾಗಿಯೇ ಅವರ ವಿಮಾನ ಕೆಳಗುರುಳಿತು ಎಂದು ವಾಯು ಸೇನೆ ರಿಪೋರ್ಟ್ ಕೊಟ್ಟಾಗ ಅದನ್ನು ಒಪ್ಪದ ಕವಿತಾ ತನ್ನ ಮಗನಂತೆಯೇ ಅನಾವಶ್ಯಕವಾಗಿ ವಿಮಾನ ಅವಘಡಗಳಲ್ಲಿ ಸಾವನ್ನಪ್ಪಿದವರ ಪರ ಹೋರಾಡಲು ಸ್ಥಾಪಿಸಿದ ಸಂಸ್ಥೆ ಇದು. ಈ ಸಂಸ್ಥೆಯ ಹೋರಾಟ ಮಿಗ್ ವಿಮಾನಗಳ ಬಳಕೆಯ ವಿರುದ್ಧ ಒಂಬತ್ತು ವರ್ಷಗಳಿಂದ ನಿರಂತರವಾಗಿ ನಡೆಯುತ್ತಿದೆ.

ಮಿಗ್ ವಿಮಾನಗಳು ಎರಡನೇ ಮಹಾಯುದ್ಧದ ಕಾಲದಿಂದ ತುಂಬಾ ಒಳ್ಳೆಯ fighter jetಗಳೆಂದು ಖ್ಯಾತಿ ಗಳಿಸಿದ್ದವು. ಅವುಗಳ credibility ಕಡಿಮೆಯಾಗುತ್ತಾ ಹೋದದ್ದು 1991ರ ಅಮೇರಿಕಾ-ರಷ್ಯಾ ಶೀತಲ ಯುದ್ಧ ಮುಗಿದ ನಂತರ. ರಷ್ಯನ್ ವಾಯು ಸೇನೆಯ ಬಳಿಯಿರುವ ಇನ್ನೂರು ಮಿಗ್-29 ವಿಮಾನಗಳಲ್ಲಿ ತೊಂಬತ್ತು ವಿಮಾನಗಳಲ್ಲಿ ಲೋಹ ಸವೆಯುವಿಕೆ (metal corrosion) ಕಂಡು ಮಿಗ್ ವಿಮಾನಗಳ ಹಾರಾಟವನ್ನು ನಿಲಿಸಿದೆ. ಭಾರತದಲ್ಲಿ ಇದ್ದ ನೂರರಷ್ಟು ಮಿಗ್-27 ವಿಮಾನಗಳ ರಷ್ಯನ್-ವಿನ್ಯಾಸದ ಇಂಜಿನ್‌ಗಳಲ್ಲಿ ತಾಂತ್ರಿಕ ದೋಷಗಳು ಕಂಡಾಗ ಅವುಗಳ ಹಾರಾಟವನ್ನು ಎರಡು ವರ್ಷಗಳ ಕಾಲ ನಿಲ್ಲಿಸಲಾಯಿತು. ಹೀಗಿರುವಾಗ ಇಲ್ಲಿಯವರೆಗೆ ನಮ್ಮ ದೇಶದಲ್ಲಿ ನಾನೂರಕ್ಕೂ ಹೆಚ್ಚು ಅವಗಢಗಳಿಗೆ ತುತ್ತಾಗಿರುವ, ನೂರಾರು ಪೈಲಟ್‌ಗಳ ಸಾವಿಗೆ ಕಾರಣವಾಗಿರುವ ಮತ್ತು ಹಾರಾಡುವ ಶವಪೆಟ್ಟಿಗೆ (flying coffin) ಎಂದೇ ಕರೆಸಿಕೊಳ್ಳುತ್ತಿರುವ ರಷ್ಯನ್ ಮಿಗ್‍-21 ಆಗಲೀ ಅಥವಾ ಅದರ ಬೇರೆ ಅವತರಣಿಕೆಗಳಾದ ಮಿಗ್-23, 27 ಇತ್ಯಾದಿ ವಿಮಾನಗಳ ಆಮದನ್ನು ಇನ್ನೂ ಯಾಕೆ ನಮ್ಮ ವಾಯು ಸೇನೆ ನಿಲ್ಲಿಸಿಲ್ಲ?

ಮಿಗ್ ವಿಮಾನ ದುರಂತಗಳನ್ನು ತನಿಖೆ ಮಾಡಲೆಂದೇ ಸರಕಾರ ಆರು ಸಮಿತಿಗಳನ್ನು ರಚಿಸಿ ಇಪ್ಪತ್ತು ವರ್ಷಗಳಾದವು. ಆದರೂ ಯಾವುದೇ ನಿರ್ದಿಷ್ಟವಾದ ಕ್ರಮಗಳನ್ನು ಇನ್ನೂ ತೆಗೆದುಕೊಳ್ಳಲಾಗಿಲ್ಲ. 1982ರಲ್ಲಿ ಲಾ ಫಾಂಟೇನ್ ಸಮಿತಿ ವರದಿ ಪ್ರಕಾರ ಮಿಗ್ ಅಪಘಾತಗಳಿಗೆ ಮುಖ್ಯ ಕಾರಣ ಪೈಲಟ್ ತರಬೇತಿಯಲ್ಲಿರುವ ಕೊರತೆ. ವಾಯು ಸೇನೆಯ ಹತ್ತಿರ ಮಿಗ್‌ನಂತಹ ಆಧುನಿಕ ಅತಿ ವೇಗದ ಜೆಟ್‌ಗಳನ್ನು ನಡೆಸಲು ಹೊಸ ಪೈಲಟ್‌ಗಳಿಗೆ ತರಬೇತಿ ಕೊಡಲು ಸರಿಯಾದ ವಿಮಾನಗಳಿಲ್ಲ. ಈಗ ನಮ್ಮ ಸೇನೆಯ ಮುಂದೆ ಮಿಗ್ ವಿಮಾನಗಳಿಗೆ ಸರಿಸಾಟಿಯಾಗಿ ನಿಲ್ಲಬಲ್ಲ ಆಯ್ಕೆಗಳು ಅಮೇರಿಕಾದ F-16, F/A-18 Hornets. ಅಮೇರಿಕಾದ ಜೆಟ್‌ಗಳು ತುಂಬಾ ದುಬಾರಿ ಮಾತ್ರವಲ್ಲದೆ ಅವುಗಳ ಬಿಡಿ ಭಾಗಗಳಿಗೆ ಅಮೇರಿಕಾವನ್ನೇ ನೆಚ್ಚಿಕೊಳ್ಳಬೇಕಾಗುತ್ತದೆ, ಅದರ ಅಂಕೆಗೊಳಗಾಗಬೇಕಾಗುತ್ತದೆ. ಅದಕ್ಕಾಗಿಯೇ ಭಾರತೀಯ ವಾಯು ಸೇನೆ ಮಿಗ್-35 ಮತ್ತು Mirage 2000-9 ವಿಮಾನಗಳನ್ನೇ ನಂಬಿಕೊಂಡಿದೆ. ಆದರೆ ಇಲ್ಲಿವರೆಗೆ ಮಿಗ್ ಅಪಘಾತಗಳಿಂದಾಗಿಯೇ ವಾಯು ಸೇನೆ ಹತ್ತರಿಂದ ಇಪ್ಪತ್ತು ಸಾವಿರ ಕೋಟಿ ರೂಪಾಯಿ ನಷ್ಟ ಅನುಭವಿಸಿದೆ. ಈಗ ಸೇನೆ Search and Rescue System (SRS) ಎನ್ನುವ ಅಪಘಾತಕ್ಕೀಡಾದ ವಿಮಾನಗಳ ಅವಶೇಷಗಳು ಮತ್ತು ಪೈಲಟ್‌ಗಳನ್ನು ಪತ್ತೆ ಹಚ್ಚುವ ಸಾಧನವನ್ನು ಖರೀದಿಸುತ್ತಿದೆ. ಇದರಿಂದಾದರೂ ತಕ್ಷಣ ಸಹಾಯ ದೊರಕದೆ ಸಾಯುವ ಪೈಲಟ್‌ಗಳ ಸಂಖ್ಯೆ ಕಡಿಮೆಯಾಗಬಹುದೇನೋ.

"ಭಾರತ ಬಾಂಬ್ ತಯಾರಿಸಿದರೆ, ಹುಲ್ಲು, ಸೊಪ್ಪು ತಿಂದಾದರೂ, ಉಪವಾಸ ಬಿದ್ದಾದರೂ ಸರಿ ನಾವೂ ಬಾಂಬನ್ನು ತಯಾರಿಸುತ್ತೇವೆ." ಇದನ್ನು ಹೇಳಿದ್ದು ಪಾಕ್‌ ಪ್ರಧಾನಿಯಾಗಿದ್ದ ಜುಲ್ಫಿಕರ್ ಅಲಿ ಭುಟ್ಟೋ. ಭಾರತದ ಶತ್ರುಗಳು ಈ ತರ ನಮ್ಮ ಮೇಲೆ ಮುಗಿಬೀಳಲು, ನಮ್ಮ ಸರಿಸಮ ಬರಲು ಕಾಯುತ್ತಿರುವಾಗ ನಮ್ಮೊಳಗಿನ ತೊಂದರೆಗಳನ್ನು ನಾವೇ ಆದಷ್ಟು ಬೇಗ ಸರಿಪಡಿಸಿಕೊಳ್ಳಬೇಕಲ್ಲವೇ?