Pages

Subscribe:

Ads 468x60px

Tuesday, November 23, 2010

ಅತಿಥಿ ದೇವೋಭವ ಎಂಬುದು ಬರೀ ಹೇಳಿಕೆಯ ಮಾತಾಗುತ್ತಿದೆಯೇ?

"ನಾನು ಕಾಲೇಜಿನಿಂದ ಮನೆಗೆ ನಡೆದುಕೊಂಡು ಬರುತ್ತಿರುವಾಗ ಅವನು ನನ್ನ ಹಿಂದೇನೇ ಸೈಕಲ್‌ನಲ್ಲಿ ಬಂದ. ನಾನು ಮನೆ ಒಳಗೆ ಹೋದಾಗ ಹೊರಗೆ ನಿಂತು ಕಾಯ್ತಾ ಇದ್ದ. ಸ್ವಲ್ಪ ಹೊತ್ತಾದ ಮೇಲೆ ಬಂದು ಬಾಗಿಲು ತಟ್ಟಿದ. ಒಬ್ಬಂಟಿಯಾಗಿದ್ದ ನಾನು ಕಿಟಕಿಯಿಂದಲೇ ಏನೆಂದು ಕೇಳಿದಾಗ ಮನೆ ಓನರ್‌ ವಿಳಾಸ ಕೇಳಿದ, ವಿಳಾಸ ಕೊಟ್ಟ ಮೇಲೆ ನೀರು ಬೇಕು ಎಂದ. ಕೊಡಲು ಒಳಗೆ ಹೋದಾಗ ಹಿಂದಿನಿಂದ ಮನೆ ಒಳಗೆ ಬಂದು ಮೈಮುಟಿದ, ಅಸಭ್ಯವಾಗಿ ವರ್ತಿಸಲು ಆರಂಭಿಸಿದ. ಕೂಗಿಕೊಂಡಾಗ ಪಕ್ಕದ ಮನೆಯವರೆಲ್ಲ ಬಂದು ಅವನಿಗೆ ಹೊಡೆದು ಪೋಲೀಸರಿಗೆ ಒಪ್ಪಿಸಿದರು. ಅವರೆಲ್ಲ ಬರದಿದ್ದರೆ..." ಆಕೆ ನಡುಗುತ್ತಾ ಅಳುತ್ತಾ ಹೇಳುತ್ತಿದ್ದಳು. ಆಕೆಗೆ ಹೇಗೆ ಸಮಾಧಾನ ಹೇಳುವುದು ಎಂದು ತಿಳಿಯದೆ ಸುಮ್ಮನೆ ಕುಳಿತಿದ್ದೆ. ಬರೆಯಲೆಂದು ಇಟ್ಟುಕೊಂಡಿದ್ದ ಪೇಪರ್‌ ಖಾಲಿಯಾಗಿಯೇ ಇತ್ತು. ಪೆನ್ನು ಹಾಗೇ ಕೈಯಲ್ಲಿ ಮರೆತುಹೋಗಿತ್ತು. ಪಕ್ಕದಲ್ಲಿದ್ದ ಅವಳ ಗಂಡ ಅವಳನ್ನು ಸಮಾಧಾನ ಮಾಡಲು ಯತ್ನಿಸುತ್ತಾ ನಡೆದದ್ದನ್ನು ಮತ್ತೆ ಹೇಳತೊಡಗಿದರು. "ಪೋಲೀಸರು ಅವನನ್ನು ಅರೆಸ್ಟ್ ಮಾಡಿದರೆಂದು ನಾವು ಸಮಾಧಾನದಿಂದಿದ್ದೆವು. ಆದರೆ ಈಗ ಅವನನ್ನು ಜಾಮೀನಿನ ಮೇಲೆ ಬಿಟ್ಟಿದ್ದಾರೆ. ಮತ್ತೆ ಅವನು ನಮಗೆ ಏನು ಮಾಡುತ್ತಾನೆಂದು ಹೆದರಿಕೆಯಾಗುತ್ತಿದೆ. ಇವಳು ಹೆದರಿಕೆಯಿಂದ ಬೆಚ್ಚಿಬೀಳುತ್ತಿರುತ್ತಾಳೆ. ನಾಳೆ ನಮ್ಮ ದೇಶಕ್ಕೆ ವಾಪಾಸು ಹೋಗುತ್ತಿದ್ದೇವೆ. ಆಮೇಲೆ ನೋಡೊಣ," ಎನ್ನುತ್ತಿದ್ದ ಆ ಫ್ರೆಂಚ್ ದಂಪತಿಯ ಮುಖದ ಮೇಲೆ ಹೆದರಿಕೆ ಸ್ಪಷ್ಟವಾಗಿತ್ತು.
"ನಮಗೆ ಭಾರತ ಅಂದರೆ ತುಂಬಾ ಇಷ್ಟ. ಇಲ್ಲೇ ಇರಬೇಕೆಂದು ಬಂದವರು. ಅದಕ್ಕೇ ಇಲ್ಲೇ ಕಾಲೇಜಿಗೆ ಲೆಕ್ಚರರ್‌ ಆಗಿ ಸೇರಿಕೊಂಡೆ. ಇಲ್ಲಿನ ಜನ ತುಂಬಾ ಒಳ್ಳೆಯವರು. ನಾವು ಮತ್ತೆ ಇಲ್ಲಿಗೆ ಬರುತ್ತೇವೆ, ಇಲ್ಲೇ ಇರುತ್ತೇವೆ. ಆದರೆ ಈಗ ಇಲ್ಲಿರಲು ಭಯ ಕಾಡುತ್ತಿದೆ. ಯಾವಾಗಲೂ ಅಕ್ಕಪಕ್ಕದವರು ಸಹಾಯಕ್ಕೆ ಬರಲು ಸಾಧ್ಯವಾಗದೇ ಇರಬಹುದು. ಇವಳೊಬ್ಬಳೇ ಇರುವಾಗ ಅವನು ಮತ್ತೆ ಬರಬಹುದು..." ಹೀಗೆ ಹೇಳುತ್ತಾ ಹೋದ ಆ ದಂಪತಿ ಫ್ರಾನ್ಸ್‌ನಿಂದ ಮೈಸೂರಿಗೆ ಇಲ್ಲೇ ನೆಲೆಸುವ ಉದ್ದೇಶದಿಂದ ಬಂದವರು. ಹೆಂಡತಿ ಮೈಸೂರು ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ವಿದ್ಯಾರ್ಥಿಯಾದರೆ, ಗಂಡ ಕಾಲೇಜೊಂದರಲ್ಲಿ ಲೆಕ್ಚರರ್. ತಮ್ಮಷ್ಟಕ್ಕೆ ಭಾರತವನ್ನು ಪ್ರೀತಿಸುತ್ತಾ, ಇಲ್ಲಿನ ಸಂಸ್ಕೃತಿಯನ್ನು ಇಷ್ಟಪಡುತ್ತಾ, ಈ ದೇಶ ನಮ್ಮದು ಎಂದುಕೊಂಡು ನೆಮ್ಮದಿಯಾಗಿ ಬದುಕುತ್ತಿದ್ದವರನ್ನು ಅದೊಂದು ದಿನ ಇಲ್ಲಿನ ಪ್ರಖ್ಯಾತ ಸಾಫ್ಟ್‌ವೇರ್‌ ಕಂಪೆನಿಯ ಉದ್ಯೋಗಿಯೊಬ್ಬ ಇಲ್ಲಿನ ಜನರ ಮೇಲೆ ಅಸಹ್ಯ ಹುಟ್ಟಿಸುವ, ಇಲ್ಲಿನ ಸಂಸ್ಕೃತಿಯನ್ನೇ ಪ್ರಶ್ನಿಸುವ ಮನಸ್ಥಿತಿಗೆ ತಂದಿಟ್ಟ, ಆ ವಿದೇಶಿ ಮಹಿಳೆಯ ಮನೆಗೇ ನುಗ್ಗಿ, ಅವಳ ಮೇಲೆ ಅತ್ಯಾಚಾರಕ್ಕೆ ಪ್ರಯತ್ನಿಸಿ.
ಭಾರತೀಯ ಗಂಡಸರೆಲ್ಲ ಕೆಟ್ಟವರೆಂದು ನಾನು ಹೇಳುತ್ತಿಲ್ಲ. ನಮ್ಮ ದೇಶ ಮಾತ್ರವಲ್ಲ, ಯಾವ ದೇಶವೂ ಬರಿ ಸಭ್ಯ, ಸೌಮ್ಯ ಜನರಿಂದ ಕೂಡಿಲ್ಲ. ಆದರೆ ಇಲ್ಲಿಯವರಿಗೆ ವಿದೇಶೀಯರೆಂದರೆ ಏನೋ ಆಕರ್ಷಣೆ. ತಮ್ಮಷ್ಟಕ್ಕೆ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವ ಬಿಳಿ ಚರ್ಮದ ಹುಡುಗಿಯರಿಗೆ ತಮ್ಮ ಭಾಷೆಯಲ್ಲಿ ಛೇಡಿಸುತ್ತಾ, ಅವಕಾಶ ಸಿಕ್ಕಿದಾಗ ಮೈಮುಟ್ಟಿಕೊಂಡು ಹೋಗುವವರಿಗೇನು ಕಮ್ಮಿಯಿಲ್ಲ. ವಿದೇಶೀಯರೆಂದರೆ ಎಲ್ಲರೂ ನಾಚಿಕೆ ಬಿಟ್ಟವರು ಅನ್ನುತ್ತಾ, ಅವರು ಹಾಕಿಕೊಳ್ಳುವ ಬಟ್ಟೆಯ ಮೇಲೆ ಅವರ ಗುಣ ಅಳೆಯುವ ನಮ್ಮ ಜನ ಸಾಮಾನ್ಯವಾಗಿ ಅಂದುಕೊಳ್ಳುವ ಮಾತೊಂದೆ- they are easy.
"ಕೀನ್ಯಾ, ತಾಂಜಾನಿಯಾದ ಹತ್ತು ವಿದ್ಯಾರ್ಥಿಗಳನ್ನು ಹೋದ ವರ್ಷ ಮೈಸೂರಿನಲ್ಲಿ ಬಂಧಿಸಲಾಯಿತು. ಈ ಘಟನೆ ಎಲ್ಲ ಆಫ್ರಿಕಾದ ವಿದ್ಯಾರ್ಥಿಗಳಲ್ಲಿ ಆತಂಕ ಹುಟ್ಟಿಸಿದೆ. ಮಾಧ್ಯಮಗಳಲ್ಲಿ ಬರುವುದೆಲ್ಲ ಸತ್ಯವಲ್ಲ... ಏನೇನು ಘಟನೆಗಳು ನಡೆದರೂ ನಾವೇ ಕಾರಣ ಎಂದು ಸುತ್ತಮುತ್ತಲಿನ ಜನ ನಂಬುತ್ತಾರೆ. ಒಬ್ಬ ಆಫ್ರಿಕನ್ ಮತ್ತು ಭಾರತೀಯನ ಮಧ್ಯೆ ಜಗಳ ನಡೆದರೆ ಯಾವುದೇ ತನಿಖೆಯಿಲ್ಲದೆ ಅದರಲ್ಲಿ ಆಫ್ರಿಕನ್ ವಿದ್ಯಾರ್ಥಿಯೇ ತಪ್ಪಿತಸ್ಥನೆಂದು ಅರ್ಥೈಸಲಾಗುತ್ತದೆ. ಒಬ್ಬ ಭಾರತೀಯ ವ್ಯಕ್ತಿ ಮತ್ತು ಆಫ್ರಿಕನ್ ವಿದ್ಯಾರ್ಥಿಯ ಮಧ್ಯೆಯ ರಸ್ತೆ ಅಪಘಾತದಲ್ಲಿ ಭಾರತೀಯ ಸತ್ತಾಗ, ಇಲ್ಲಿನ ಪತ್ರಿಕೆಗಳೆಲ್ಲ 'ವಿದೇಶೀಯನಿಂದ ಭಾರತೀಯನ ಕೊಲೆ' ಎಂದು ಬರೆದವು. ಅಪಘಾತಗಳು ಕರಿಯ, ಬಿಳಿಯ ಎನ್ನುವ ಬೇಧ ತೋರುವುದಿಲ್ಲ ಎಂದು ಜನ ಮರೆತರು.
ಇಲ್ಲಿ ನಾವಿರುವವರೆಗೆ ನಮ್ಮ ಸಂಸ್ಕೃತಿಯನ್ನು ಮರೆತು ಇಲ್ಲಿನ ಸಂಸ್ಕೃತಿಯನ್ನು ಅನುಸರಿಸಬೇಕೆಂದು ಇಲ್ಲಿಯ ಜನ ಬಯಸುತ್ತಾರೆ. ಇಪ್ಪತ್ತೊಂದನೇ ಶತಮಾನದಲ್ಲಿ, ಪ್ರಪಂಚವೆಲ್ಲ ಒಂದು ದೊಡ್ಡ ಹಳ್ಳಿಯಾಗುತ್ತಿರುವಾಗ, ದೇಶ ಭಾಷೆಯ ಗಡಿಯಿಲ್ಲದೆ ಜನರು ಒಟ್ಟಿಗೆ ಬದುಕುತ್ತಿರುವಾಗ, ಇಂತಹ ಸಾಂಸ್ಕೃತಿಕ ಸಂಘರ್ಷಗಳು ಸಾಮಾನ್ಯ. ನಾವು ಕೇಳುತ್ತಿರುವುದು ಕೇವಲ ಘನತೆಯಿಂದ ಬದುಕಲು ಒಂದು ಅವಕಾಶ. ಇಷ್ಟು ವರ್ಷಗಳಾದರೂ, ಪ್ರಪಂಚದೆಲ್ಲೆಡೆ ಆ ಪದ ನಿಷೇಧಿಸಲ್ಪಟ್ಟರೂ ಭಾರತೀಯರು ನಮ್ಮನ್ನು ಇನ್ನೂ ನೀಗ್ರೋಗಳೆಂದು ಕರೆಯುತ್ತಾರೆ. ನೀವು ಬೇರೆ ದೇಶಗಳಲ್ಲಿ ನಿಮ್ಮ ಮೇಲಾಗುವ ಜನಾಂಗೀಯ ನಿಂದನೆಗಳನ್ನು ತೀವ್ರವಾಗಿ ಪ್ರತಿಭಟಿಸುತ್ತೀರಿ. ಆದರೆ ಅದನ್ನು ಹುಡುಕಲು ಬೇರೆಲ್ಲೂ ಹೋಗಬೇಕಾಗಿಲ್ಲ, ಜಾತೀಯತೆಯನ್ನು ಅತಿಯಾಗಿ ಪಾಲಿಸುವ ನಿಮ್ಮ ದೇಶದಲ್ಲೇ ಜನಾಂಗೀಯ ಘರ್ಷಣೆಗಳನ್ನು ಕಾಣಬಹುದು.
ಇಲ್ಲಿನ ಲೈಬ್ರರಿಯೊಂದರಲ್ಲಿ ಸದಸ್ಯನಾಗಲು ಕಾರ್ಡ್ ಕೊಡಲು ಕೇಳಿದಾಗ ಅವರು, 'ನಿಮ್ಮಂತವರಿಗೆ ಕಾರ್ಡ್ ಕೊಡುವುದಿಲ್ಲ' ಅಂದರು. ನಮ್ಮಂತವರು ಅಂದರೆ ವಿದೇಶೀಯರಿಗಾ ಅಂತ ಕೇಳಿದ್ದಕ್ಕೆ, 'ಇಲ್ಲ ಆಫ್ರಿಕನ್ನರಿಗೆ' ಅಂದರು. ನೀವು ನಮ್ಮ ಜೊತೆ ಈ ರೀತಿ ವರ್ತಿಸಲು ಕಾರಣ ಅವರಿಗೆ ಗೊತ್ತು ನಮ್ಮ ಸಹಾಯಕ್ಕೆ ಇಲ್ಯಾರೂ ಇಲ್ಲ ಅಂತ. ನಾವಿಲ್ಲಿ ಅನಾಥರು, ಅಪ್ಪ-ಅಮ್ಮಂದಿರನ್ನು ಸಾವಿರಾರು ಮೈಲಿ ಆಚೆ ಬಿಟ್ಟು ಬಂದಿದ್ದೇವೆ. ನನ್ನ ಗೆಳೆಯ ಒಂದು ಸಾರಿ ಹೇಳಿದ್ದ, ನಾವು ಮಾಡಿರುವ ಅಪರಾಧ, ಕರಿಯರಾಗಿ ಹುಟ್ಟಿದ್ದು ಅಂತ." ಇದು ತಾಂಜಾನಿಯಾದಿಂದ ಇಲ್ಲಿಗೆ ಓದಲು ಬಂದ ವಿಂಗಾ ಮುಂಗ್ವೆ ಅನ್ನುವ ಒಬ್ಬ ವಿದ್ಯಾರ್ಥಿ ಬರೆದಿರುವ ಒಂದು ಸುದೀರ್ಘ ಪತ್ರದ ತುಣುಕು.
ಭಾರತದಲ್ಲಿ ಮಾತ್ರ ವಿದೇಶೀಯರ ಮೇಲೆ ಅಪರಾಧಗಳು ನಡೆಯುತ್ತಿಲ್ಲ. ಆದರೆ ಇಷ್ಟು ದೊಡ್ಡ ದೇಶದಲ್ಲಿ ಎಲ್ಲೇ ಅಪರೂಪಕ್ಕೊಮ್ಮೆ ಅಂತಹ ಘಟನೆಗಳು ಸಂಭವಿಸಿದರೂ ವಿದೇಶೀ ಮಾಧ್ಯಮಗಳು ಬೊಟ್ಟು ಮಾಡಿ ತೋರಿಸುವುದು ಇಡೀ ದೇಶದ ಕಡೆಗೆ; ಭಾರತದಂಥ 'third world' ದೇಶದಲ್ಲಿ ವಿದೇಶೀಯರಿಗೆ ರಕ್ಷಣೆಯಿಲ್ಲ, ಗೋವಾ ಅತ್ಯಾಚಾರಿಗಳ, ಗೂಂಡಾಗಳ ತಾಣ. ಹಂಪೆ ಡ್ರಗ್ ಅಡಿಕ್ಟ್‌ಗಳ ನೆಲೆ. ಭಾರತದಲ್ಲಿ ಬೇರೆ ದೇಶದ ಪ್ರವಾಸಿಗಳು ತುಂಬ ಎಚ್ಚರದಿಂದಿರಬೇಕು ಎಂದೆಲ್ಲಾ ವಿದೇಶೀ ಮಾಧ್ಯಮಗಳು ಬೊಬ್ಬಿಡುತ್ತವೆ. ಅದಕ್ಕೆ ಸರಿಯಾಗಿ ಗೋವಾದಲ್ಲಿ ರಷ್ಯನ್ ಹೆಂಗಸಿನ ಮೇಲೆ ಅತ್ಯಾಚಾರವಾದಾಗ ಅಲ್ಲಿನ ಲೋಕಸಭಾ ಸದಸ್ಯ ಶಾಂತಾರಾಮ್ ನಾಯಕ್ "ಅಪರಿಚಿತರ ಜೊತೆ ದಿನಗಟ್ಟಲೆ ರಾತ್ರಿಯಲ್ಲೂ ತಿರುಗುವ ಮಹಿಳೆಯ ಅತ್ಯಾಚಾರವನ್ನು ಬೇರೆಯೇ ದೃಷ್ಟಿಕೋನದಿಂದ ನೋಡಬೇಕಾಗುತ್ತದೆ" ಅನ್ನುವ ಅವಿವೇಕದ ಹೇಳಿಕೆ ಕೊಟ್ಟರು. ಇಂತಹ ಹೇಳಿಕೆಗಳು ನಮ್ಮ ಜನರ ಬಗ್ಗೆ ಹೊರಗಿನವರಲ್ಲಿ ಇನ್ನೂ ಅಪನಂಬಿಕೆ ಹುಟ್ಟಿಸುತ್ತವೆ.
ವಿದೇಶೀಯರು ಎಲ್ಲೇ ಬರಲಿ ನಾವು ಅವರಿಗೆ ಯಾವ್ಯಾವ ರೀತಿಯಲ್ಲಿ ಮೋಸ ಮಾಡಲು ಸಾಧ್ಯ ಎಂದು ಎಣಿಸಲು ಪ್ರಾರಂಭಿಸುತ್ತೇವೆ. ಅವರ ಹತ್ತಿರ ದುಡ್ದು ಕೊಳೆಯುತ್ತಾ ಬಿದ್ದಿರುತ್ತದೆ ಎಂದೇ ಅಂದುಕೊಳ್ಳುತ್ತೇವೆ. ಅವರೂ ನಮ್ಮ ಹಾಗೆ ಬಡವರಿರಬಹುದು, ಹೇಗೋ ಸಾಲ ಮಾಡಿ ನಮ್ಮ ದೇಶ ನೋಡಲು, ಇಲ್ಲಿ ಓದಲು ಬಂದಿರಬಹುದು ಅನ್ನುವ ಸಾಮಾನ್ಯ ತಿಳುವಳಿಕೆ ಇಲ್ಲದವರಂತೆ ವರ್ತಿಸುತ್ತೇವೆ. ಅವರೆಲ್ಲಾ ಸರಿ ಇಲ್ಲ, ಎಷ್ಟು ಬೇಕಾದರೂ ಮದುವೆ ಆಗುತ್ತಾರಂತೆ, ಮದುವೆ ಆಗದೆಯೂ ಒಟ್ಟಿಗೆ ಇರುತ್ತಾರಂತೆ... ಹೀಗೆ ಹತ್ತು ಹಲವು ಅಂತೆ-ಕಂತೆಗಳನ್ನು ಕಟ್ಟಿಕೊಂಡು ಅವರನ್ನೆಲ್ಲ ಅಪರಾಧಿಗಳನ್ನಾಗಿ ಮಾಡುವ ಬದಲು, ನಾವ್ಯಾಕೆ ಅವರ ಬದುಕಿನ ರೀತಿಯೇ ಹಾಗೆ ಅಂತ ಸುಮ್ಮನಿರಬಾರದು, ಅವರನ್ನು ಒಪ್ಪಿಕೊಳ್ಳಬಾರದು?
ಹಾಗಂತ ಇಲ್ಲಿ ಬರುವ ವಿದೇಶೀಯರೆಲ್ಲ ಇಲ್ಲಿನ ಜನರ ಜೊತೆ ಹೊಂದಿಕೊಳ್ಳಲು ಪ್ರಯತ್ನಿಸುತ್ತಾರೆಂದಲ್ಲ. ಉದಾಹರಣೆಗೆ ಮೈಸೂರು, ಬೆಂಗಳೂರಿನಲ್ಲಿ ಬೇರೆ ದೇಶದವರು ಜಾಸ್ತಿ ಇರುವ ಕಡೆ ಅವರು ಕಲಿಯಲು ಬರುವ ಯೋಗ ಶಾಲೆಗಳಲ್ಲಿ, ಗೆಸ್ಟ್ ಹೌಸ್‌ಗಳಲ್ಲಿ, ಕೆಲವು ಕೆಫೆಗಳಲ್ಲಿ "ಭಾರತೀಯರಿಗೆ ಪ್ರವೇಶವಿಲ್ಲ." ತಮ್ಮ ಜೀವನದ ಕಟ್ಟಕಡೆಯ ಹಂತದಲ್ಲಿ ಭಾರತಕ್ಕೆ ಬರುವ ರೋಗಿಗಳು ದುಡ್ಡಿಗಾಗಿ ಡ್ರಗ್ ಕಳ್ಳಸಾಗಾಣಿಕೆ ಮಾಡಲು ಸಹಾಯ ಮಾಡುತ್ತಿರುವುದು ದೆಹಲಿ ಹೈಕೋರ್ಟ್ ಬೆಳಕಿಗೆ ತಂದಿದೆ. ಆದರೆ ಹೊರದೇಶಗಳಿಂದ, ಬೇರೆ ಸಂಸ್ಕೃತಿಯಿಂದ ಬಂದ ಎಲ್ಲರೂ ಕೆಟ್ಟವರಲ್ಲ. ಅವರ ಆಚಾರಗಳು, ನಡವಳಿಕೆಗಳು ನಮಗೆ ಸರಿಹೊಂದದಿದ್ದರೆ ಅವರನ್ನು ಹೀಗಳೆಯುವ ಹಕ್ಕು ನಮಗಿಲ್ಲ ಅಲ್ಲವೇ? ನಮ್ಮ ದೇಶವನ್ನು, ನಮ್ಮ ಸಂಸ್ಕೃತಿಯನ್ನು ಇಷ್ಟಪಟ್ಟುಕೊಂಡು, ಅವರ ಹುಟ್ಟಿದ ನೆಲ, ಜನ, ಭಾಷೆ, ಸಂಸ್ಕೃತಿ, ಮನೆ, ಸಂಬಂಧಗಳು ಎಲ್ಲವನ್ನು ತೊರೆದು ಇಲ್ಲಿನ ಹೊಸ ವಾತಾವರಣಕ್ಕೆ ಹೊಂದಿಕೊಳ್ಳಲು ಪ್ರಯತ್ನಿಸುವ, cultural shocks ತಡೆದುಕೊಳ್ಳುವ ವಿದೇಶೀಯರು ನಮ್ಮ ಅತಿಥಿಗಳಲ್ಲವೇ?

Friday, November 19, 2010

Thanks

I was going through all the comments that I got for the articles. I honestly acknowledge and believe that my readers have greater thoughtfulness and intelligence than I do. And the responses! Thanks for so many good responses, both chiding and complimentary in nature. Your compliments make me want to be a better writer and your scoldings make me want to be more well-read and increase my knowledge. Because if there is one thing I am jealous of in this world, that is people with more knowledge than me. I don't care for wealth or beauty, but only for knowledge. So I am happy to have such readers. Thank you.