Pages

Subscribe:

Ads 468x60px

Sunday, August 9, 2020

ಅಸ್ಮಿತೆಯೆಡೆಗೆ ಮಕ್ಕಳ ಮೊದಲ ಹೆಜ್ಜೆ ಐತಿಹಾಸಿಕ ಸತ್ಯಗಳಿಂದ ಆರಂಭವಾಗಲಿ

 ಗೆದ್ದವರು ಇತಿಹಾಸ ಬರೆಯುತ್ತಾರೆ ನಿಜ. ಆದರೆ ಸೋತವರು ಆ ಇತಿಹಾಸವನ್ನು ಮನಪೂರ್ತಿಯಾಗಿ ಒಪ್ಪಿಕೊಂಡರೆ? ದಾಸ್ಯದಿಂದ ಬಿಡುಗಡೆಗೊಂಡ ಮೇಲೂ ಅದನ್ನೇ ತಮ್ಮ ಮುಂದಿನ ಪೀಳಿಗೆಗೆ ಕಲಿಸಿಕೊಟ್ಟರೆ? ಜಗತ್ತಿನ ಅನೇಕ ಪ್ರಾಚೀನ ನಾಗರಿಕತೆಗಳು ಈಗ ಬರೀ ಇತಿಹಾಸವಾಗಿ ಉಳಿದಿರುವುದು ಆಕ್ರಮಣಕೋರರಿಂದಲ್ಲ; ಅವರ ಕ್ರೂರತೆಯನ್ನು ಅಡಗಿಸಿ ಅವರು ಕಟ್ಟಿದ ಕಥೆಗಳಿಗೆ ಒಪ್ಪಿಗೆಯ ಮುದ್ರೆಯೊತ್ತಿ ಅದನ್ನೇ ತಮ್ಮ ಇತಿಹಾಸವನ್ನಾಗಿ ಒಪ್ಪಿಕೊಂಡ, ಬರೆದಿಟ್ಟ, ಹಾಡಿ ಹೊಗಳಿದ ಆ ನಾಗರಿಕತೆಗಳ ವಾರಸುದಾರರಿಂದ. 

ಅಮೇರಿಕಾಗೆ ಯೂರೋಪಿಯನ್ನರಿಂದ ಸ್ವಾತಂತ್ರ್ಯ ಸಿಕ್ಕ ಮೇಲೆ ’ರೆಡ್‌ ಇಂಡಿಯನ್‌’ ಎಂದು ಕರೆಸಿಕೊಳ್ಳುವ ಅಲ್ಲಿನ ಸ್ಥಳೀಯ ಜನಾಂಗಗಳು ತಮ್ಮ ಜಾಗದ ಸ್ವಾಯತ್ತತೆಯನ್ನು, ತಮ್ಮ ವಿಶಿಷ್ಟ ಸಂಸ್ಕೃತಿಯನ್ನು ಕಾಪಾಡಿಕೊಳ್ಳುವ ಸಲುವಾಗಿ ಅಮೇರಿಕಾ ದೇಶಕ್ಕೆ ಸೇರಲು ಒಪ್ಪಲಿಲ್ಲ. ಅವರನ್ನು ಶಕ್ತಿಯಿಂದ ಮಣಿಸಲು ಸರ್ಕಾರಕ್ಕೆ ಸಾಧ್ಯವಾಗಲಿಲ್ಲ. ಆಗ ಅಮೇರಿಕಾ ಅಧ್ಯಕ್ಷರಾಗಿದ್ದ ಜಾರ್ಜ್‌ ವಾಷಿಂಗ್ಟನ್‌ಗೆ ಹೊಳೆದದ್ದು ಮೂಲನಿವಾಸಿಗಳ ಜೊತೆ ಹೊಡೆದಾಡುವುದಕ್ಕಿಂತ ಅಗ್ಗವಾದ ಉಪಾಯ, ’ಶಿಕ್ಷಣ.’ ಅಮೇರಿಕಾ ಸರ್ಕಾರ ರೆಡ್‌ ಇಂಡಿಯನ್‌ ಮಕ್ಕಳನ್ನು ಎಳೆದು ತಂದು ಅವರಿಗಾಗಿಯೇ ಶುರು ಮಾಡಿದ ವಿಶೇಷ ಶಾಲೆಗಳಿಗೆ ಸೇರಿಸಿತು. ಒಪ್ಪದಿದ್ದ ಅಪ್ಪಂದಿರನ್ನು ಬಂಧಿಸಿ, ಮಕ್ಕಳನ್ನು ಪೊಲೀಸ್‌ ಸಹಾಯದಿಂದ ಕರೆದೊಯ್ಯಲಾಯಿತು. ಅಲ್ಲಿನ ಪ್ರತಿಯೊಂದು ಜನಾಂಗದ ಮಕ್ಕಳ ವಿಶಿಷ್ಟ ವೇಷಭೂಷಣಗಳನ್ನು ತೆಗೆಸಿ, ಅವರ ಕೂದಲು ಕತ್ತರಿಸಿ ಯೂರೋಪಿಯನ್‌ ವಸ್ತ್ರಗಳನ್ನು ಹಾಕಲಾಯಿತು, ಅವರವರ ಮಾತೃಭಾಷೆಗಳನ್ನು ಮಾತನಾಡುವುದನ್ನು ನಿಷೇಧಿಸಲಾಯಿತು. ಆಂಗ್ಲ ಭಾಷೆಯನ್ನು ಮಾತ್ರ ಕಡ್ಡಾಯ ಮಾಡಲಾಯಿತು. ಅವರ ಸಂಸ್ಕೃತಿ ಹೇಗೆ ಬಿಳಿಯರ ಸಂಸ್ಕೃತಿಗಿಂತ ಕೀಳು ಎನ್ನುವುದನ್ನು ಆ ಮಕ್ಕಳ ತಲೆಗೆ ತುಂಬಲಾಯಿತು. ಅವರ ದೇಸೀ ಹೆಸರುಗಳನ್ನು ಬದಲಾಯಿಸಿ ಅವರಿಗೆ ಇಂಗ್ಲೀಷ್ ಹೆಸರು ಇಡಲಾಯಿತು. ೧೫ನೇ ಶತಮಾನದ ಕೊನೆಗೆ ಸುಮಾರು ೩೦೦ ಭಾಷೆಗಳಿದ್ದ, ಒಂದೊಂದು ಜನಾಂಗಕ್ಕೂ ವಿಭಿನ್ನವಾಗಿದ್ದ ಮೂಲನಿವಾಸಿಗಳ ಸಂಸ್ಕೃತಿ ಈಗ ಆಂಗ್ಲಮಯವಾಗಿದೆ. ಬ್ರಿಟಿಷರು ಅದೇ ಉಪಾಯವನ್ನು ಭಾರತದಲ್ಲಿಯೂ ಪ್ರಯೋಗಿಸಿದರು ಮತ್ತು ಯಶಸ್ವಿಯೂ ಆದರು. ಅವರಿಗೆ ಗೊತ್ತಿತ್ತು ಒಂದು ನಾಗರಿಕತೆಯನ್ನು ನಾಶಮಾಡಲು ಅವರ ಇತಿಹಾಸಪ್ರಜ್ಞೆಯನ್ನು ಅಳಿಸಿಹಾಕಿದರೆ ಸರಿ ಎಂದು. 

ಇತಿಹಾಸಜ್ಞ ಧರಮ್‌ಪಾಲ್ ತಮ್ಮ ’ದಿ ಬ್ಯೂಟಿಫುಲ್‌ ಟ್ರೀ’ ಪುಸ್ತಕದಲ್ಲಿ ಸನಾತನ ಭಾರತೀಯ ಶಿಕ್ಷಣ ಪದ್ಧತಿಯ ಬಗ್ಗೆ ಬರೆಯುತ್ತಾರೆ. ಬ್ರಿಟಿಷರು ಭಾರತಕ್ಕೆ ಬರುವ ಮುನ್ನ ಇಲ್ಲಿನ ಪ್ರತಿ ಹಳ್ಳಿಯಲ್ಲೂ ಶಾಲೆಗಳಿದ್ದವು, ಮತ್ತು ಅದರಲ್ಲಿ ಜಾತಿ ಆಧಾರಿತವಲ್ಲದ, ಎಲ್ಲಾ ಜಾತಿಯ ಮಕ್ಕಳಿಗೂ, ಹೆಣ್ಣುಮಕ್ಕಳಿಗೂ ಉಚಿತ ಅಥವಾ ಅತಿ ಕಡಿಮೆ ವೆಚ್ಚದ ಶಿಕ್ಷಣ ದೊರೆಯುತ್ತಿತ್ತು. ಆದರೆ ಆ ಕಾಲದ ಇಂಗ್ಲೆಂಡ್‌ನಲ್ಲಿ ಕೇವಲ ಮೇಲ್ವರ್ಗದವರಿಗೆ ಮಾತ್ರ ಶಿಕ್ಷಣದ ಅವಕಾಶವಿತ್ತು. ಬಳ್ಳಾರಿಯ ಬ್ರಿಟಿಷ್ ಕಲೆಕ್ಟರ್‌ ಆಗಿದ್ದ ಎ.ಡಿ. ಕ್ಯಾಂಪ್‌ಬೆಲ್‌ನ ೧೮೨೩ಯ ವರದಿ ಪ್ರಕಾರ ಇಲ್ಲಿನ ಸನಾತನ ಶಿಕ್ಷಣ ಪದ್ಧತಿಯನ್ನೇ ಬ್ರಿಟಿಷರು ಇಂಗ್ಲೆಂಡ್‌ನಲ್ಲಿ ಯಶಸ್ವಿಯಾಗಿ ಅಳವಡಿಸಿಕೊಂಡರೇ ವಿನಹ ಅಲ್ಲಿಂದ ಬಂದ ಬಿಳಿಯರು ಇಲ್ಲಿ ಹೊಸದಾಗಿ ಶಿಕ್ಷಣ ಕ್ರಾಂತಿ ಮಾಡಲಿಲ್ಲ. ಇಲ್ಲಿನ ಹಿಂದೂ ರಾಜರು ಕೊಡುತ್ತಿದ್ದ ಅನುದಾನದಿಂದ ನಡೆಯುತ್ತಿದ್ದ ಶಾಲೆಗಳು ಬ್ರಿಟಿಷರ ಆಗಮನದ ನಂತರ ನಿಂತುಹೋದವು ಎಂದು ಆತ ಬರೆಯುತ್ತಾನೆ.

ಸ್ಟಾಕ್‌ಹೋಮ್‌ ಸಿಂಡ್ರೋಮ್‌ ಬಗ್ಗೆ ಹೆಚ್ಚಿನವರು ಕೇಳಿರಬಹುದು. ಶೋಷಿತರೇ ತಮ್ಮನ್ನು ಬಂಧಿಸಿಟ್ಟ, ಹಿಂಸಿಸಿದ ಕ್ರೂರಿಗಳನ್ನು ಆರಾಧಿಸುವ, ಅವರ ಪರವಾಗಿ ನಿಲ್ಲುವ ವಿಚಿತ್ರ ಮನೋರೋಗ ಇದು. ನಮ್ಮಲ್ಲಿನ್ನೂ ಉಳಿದಿರುವ ಇಂಗ್ಲೀಷರ ಜೀವನಶೈಲಿಯ ಕುರುಡು ಆರಾಧನೆ ಅದಕ್ಕೆ ಸಾಕ್ಷಿ. ಇದರ ಮೊದಲ ಬಲಿ ನಮ್ಮ ಮಕ್ಕಳಿಗೆ ಕಲಿಸುತ್ತಿರುವ ಇತಿಹಾಸ. ನಾವು ಹೇಳಿಕೊಡುತ್ತಿರುವ ಇತಿಹಾಸ ನಮ್ಮವರೇ ಸ್ವತಂತ್ರವಾಗಿ ಬರೆದಿಟ್ಟದ್ದಲ್ಲ, ಬದಲಾಗಿ ಇಲ್ಲಿಗೆ ಹೊರಗಿನಿಂದ ಬಂದವರು ಬರೆದಿಟ್ಟ ಕಥೆಗಳು. ಅವುಗಳ ಸತ್ಯತೆಯ ಪೂರ್ಣ ಪರಿಶೀಲನೆ ಅಂತೂ ಈಗ ಸಾಧ್ಯವಿಲ್ಲ. ನಮ್ಮ ವಿಸೃತ ’ಇತಿಹಾಸ’ ಶುರುವಾಗುವುದೇ ಯೂರೋಪಿಯನ್ನರ ಆಗಮನದಿಂದ. ಹಾಗಾದರೆ ಅದಕ್ಕೂ ಮೊದಲೇ ಏಷ್ಯಾದ ವಿವಿಧ ಭಾಗಗಳನ್ನು ಆಳುತ್ತಿದ್ದ ಭಾರತೀಯ ರಾಜರ ಕಥೆ ಹೇಳುವವರ್ಯಾರು? ಇತಿಹಾಸ ಬರೀ ರಾಜರ ಕಥೆಯೂ ಅಲ್ಲ. ನಮ್ಮ ಹಿಂದಿನ ಜೀವನಶೈಲಿ, ಅಲಂಕಾರ, ಸಂಪ್ರದಾಯ, ಗಣಿತ, ಖಗೋಳ ವಿಜ್ಞಾನ, ನೌಕಾ ಸಾಧನೆಗಳು, ಯೋಗ, ಆಯುರ್ವೇದ ಎಲ್ಲವೂ. 

ವಾಸ್ಕೋ ಡ ಗಾಮನ ನೌಕಾ ಪರ್ಯಟನೆಯ ಸಾಹಸದ ಬಗ್ಗೆ ಓದಿ ಓದಿ ಅಚ್ಚರಿಪಡುವ ನಾವು ಚೋಳರ ಮಲೇಷಿಯಾ, ಇಂಡೋನೇಷಿಯಾವರೆಗಿನ ನೌಕಾ ವಿಜಯಗಳ ಬಗ್ಗೆ, ಅವರಿಗೆ ಥೈಲಾಂಡ್‌ ಮತ್ತು ಕಾಂಬೋಡಿಯಾ ದೇಶಗಳ ರಾಜರು ಕೊಡುತ್ತಿದ್ದ ಕಪ್ಪಕಾಣಿಕೆಯ ಬಗ್ಗೆ ಎಲ್ಲಿ ಓದಿದ್ದೇವೆ? ನಮ್ಮ ಜನರ ಮತ್ತು ಅವರನ್ನು ಆಳಿದವರ ವಿದ್ವತ್ತಿನ ಬಗ್ಗೆ, ಅವರು ಕೈಗೊಂಡ ಸಾಮಾಜಿಕ ಸುಧಾರಣೆಗಳ ಬಗ್ಗೆ ಎಲ್ಲಿ ಕೇಳಿದ್ದೇವೆ? ಬೆಂಗಳೂರಿನ ಇಂಡಿಯನ್‌ ಇನ್ಸ್ಟಿಟ್ಯೂಟ್‌ ಆಫ್‌ ಸಯನ್ಸ್‌ ಕಟ್ಟಲು ಸಾಧ್ಯವಾದದ್ದು ಮೈಸೂರಿನ ಮಹಾರಾಣಿ ವಾಣಿವಿಲಾಸ ಸನ್ನಿಧಾನರವರ ಅನುದಾನದಿಂದ. ಚಿತ್ರದುರ್ಗದ ಮಾರಿಕಣಿವೆ ಅಣೆಕಟ್ಟು, ಮಹಾರಾಣಿ ಕಾಲೇಜು, ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆ, ಹೀಗೆ ಅವರ ನೂರಾರು ಕೆಲಸಗಳ ಬಗ್ಗೆ ಮಕ್ಕಳಿಗೆ ಹೇಳುವವರ್ಯಾರು? ಬಲಿಷ್ಠ ಪೋರ್ಚುಗೀಸರನ್ನು ಸೋಲಿಸಿ ಪರ್ಷಿಯಾ, ಯೂರೋಪಿನಲ್ಲೆಲ್ಲ ತನ್ನ ಶೌರ್ಯಕ್ಕೆ ಪ್ರಸಿದ್ಧಿಯಾದ ಉಳ್ಳಾಲದ ರಾಣಿ ಅಬ್ಬಕ್ಕಳಂತವರ ಕಥೆ ನಮ್ಮ ಪಠ್ಯಗಳಲ್ಲಿ ಯಾವಾಗ ಓದಬಹುದು?

ಈಗ ನಮ್ಮ ಪಠ್ಯಪುಸ್ತಕಗಳಲ್ಲಿ ಇರುವುದು ಕೇವಲ ಭಾರತದ ಮೇಲೆ ಅತಿಕ್ರಮಣ ಮಾಡಿದವರ ಕೃತ್ಯಗಳನ್ನು ಮರೆಮಾಚುವ ಯತ್ನ. ಬ್ರಿಟಿಷರ ಶಿಕ್ಷಣ ಪದ್ಧತಿಯ ಪ್ರತಿಫಲವಾಗಿ ಭಾರತೀಯರು ಆಧುನಿಕತೆ, ಜಾತ್ಯಾತೀತತೆ, ತರ್ಕಬದ್ಧ ವೈಚಾರಿಕತೆ ಬೆಳೆಸಿಕೊಳ್ಳಲು ಸಾಧ್ಯವಾಯಿತು ಅನ್ನುತ್ತದೆ ಹತ್ತನೆ ತರಗತಿಯ ಸಮಾಜ ವಿಜ್ಞಾನ ಪುಸ್ತಕ. ಲಾರ್ಡ್ ಡಾಲ್‌ಹೌಸಿ ಬಂದು ಕಲ್ಕತ್ತಾ, ಬಾಂಬೆ ಮತ್ತು ಮೆಡ್ರಾಸ್‌ನಲ್ಲಿ ವಿಶ್ವವಿದ್ಯಾಲಯ ಸ್ಥಾಪಿಸಿದ ಮೇಲೆ ಭಾರತದಲ್ಲಿ ಸಾರ್ವತ್ರಿಕ ಶಿಕ್ಷಣ ವ್ಯವಸ್ಥೆ ಬಂತು ಎನ್ನುತ್ತದೆ ಆ ಪಾಠ. ಹಾಗಾದರೆ ಆಂಗ್ಲರ ಆಗಮನದ ಮುಂಚೆ ಪ್ರತಿ ಹಳ್ಳಿಯಲ್ಲೂ ಇದ್ದ ಶಾಲೆಗಳು ಸಾರ್ವತ್ರಿಕ ಶಿಕ್ಷಣದ ಉದಾಹರಣೆಗಳಲ್ಲವೇ? ಒಡಿಶಾದ ಪುಷ್ಪಗಿರಿ, ಈಗ ಪಾಕಿಸ್ತಾನದಲ್ಲಿರುವ ತಕ್ಷಶಿಲಾ, ಬಿಹಾರದ ನಾಲಂದಾ ಮತ್ತು ವಿಕ್ರಮಶಿಲಾ, ಪಾಕ್ ಆಕ್ರಮಿತ ಕಾಶ್ಮೀರದಲ್ಲಿರುವ ಶಾರದಾ ಪೀಠಗಳಂತಹ ಹತ್ತಾರು ವಿಶ್ವವಿದ್ಯಾಲಯಗಳ ವಿನಾಶದ ಮುಂಚಿನ ವೈಭವದ ಬಗ್ಗೆ ನಮ್ಮ ಮಕ್ಕಳಿಗೆ ಯಾಕೆ ಹೇಳಿಕೊಡಲಾಗುತ್ತಿಲ್ಲ? ಈಗ ಹೇಳಿಕೊಡುತ್ತಿರುವುದು, ಬ್ರಿಟಿಷರು ಬಂದು ನಮ್ಮ ದೇಶದಲ್ಲಿ ಕೈಗಾರಿಕಾ, ಶೈಕ್ಷಣಿಕ, ವ್ಯಾವಹಾರಿಕ, ನ್ಯಾಯಾಂಗ ಕ್ರಾಂತಿಗಳನ್ನು ತಂದರು, ಮಲಿಕ್ ಕಾಫರ್ ’ಯಶಸ್ವಿಯಾಗಿ ದಕ್ಷಿಣ ಭಾರತದ ಮೇಲೆ ದಂಡೆತ್ತಿದ ಗೌರವ ಪಡೆದುಕೊಂಡ,’ ಅಲ್ಲಾವುದ್ದಿನ್ ಖಿಲ್ಜಿ, ತುಘಲಕ್ ಮತ್ತಿತರ ದಾಳಿಕೋರ ರಾಜರ ವಿದ್ವತ್ತು, ಅವರು ಕಲಿತುಕೊಂಡ ಭಾಷೆಗಳು, ಅವರ ವಿದ್ವತ್ತಿನಿಂದಾಗಿ ಅವರು ಬರೆದ (ಬರೆಯಿಸಿದ?) ಮಹಾನ್‍ ಗ್ರಂಥಗಳು, ಅವರ ರಾಜಕೀಯ ಪರಿಣತಿ ಮತ್ತು ಜ್ಞಾನ, ಆಡಳಿತಾತ್ಮಕ ಮತ್ತು ಸಾಮಾಜಿಕ ಸುಧಾರಣೆಗಳು, ಅವರು ಕಟ್ಟಿದ ’ಅದ್ಭುತ ವಾಸ್ತುಶಿಲ್ಪದ ಕಟ್ಟಡಗಳು,’ ಧರ್ಮಸಹಿಷ್ಣುತೆ ಇತ್ಯಾದಿ ಇತ್ಯಾದಿ. ಅವರಲ್ಲಿ ಹೇರಳವಾಗಿದ್ದ ದಾಸ್ಯ ಪದ್ಧತಿ, ಅವರು ನಡೆಸಿದ ಲಕ್ಷಾಂತರ ಭಾರತೀಯರ ಕ್ರೂರ ಮಾರಣಹೋಮ, ನಮ್ಮ ಇಡೀ ಜೀವನಪದ್ಧತಿಯ ಮತ್ತು ನಮ್ಮ ಸಂಸ್ಕೃತಿಯ ನಾಶಗಳ ಬಗ್ಗೆ ನಮ್ಮ ಪಠ್ಯಗಳಲ್ಲಿ ಓದಲು ಸಾಧ್ಯವೇ ಇಲ್ಲವೇನೋ.

ಅಮೇರಿಕಾದಲ್ಲಿರುವ ಭಾರತೀಯರು ತಮ್ಮ ಅಸ್ಮಿತೆಯನ್ನು ಉಳಿಸಿಕೊಳ್ಳುವುದರಲ್ಲಿ ನಮಗಿಂತ ಒಂದು ಕೈ ಮೇಲು. ಕ್ಯಾಲಿಫೋರ್ನಿಯಾದ ಪಠ್ಯಪುಸ್ತಕಗಳಲ್ಲಿ ಭಾರತದ ಬಗ್ಗೆ, ಹಿಂದೂಗಳ ಬಗ್ಗೆ ಇದ್ದ ದೋಷಪೂರಿತ ಪಾಠಗಳನ್ನು ಓದಿದ ಅಲ್ಲಿನ ಮಕ್ಕಳು ತಮ್ಮ ಭಾರತೀಯ ಸಹಪಾಠಿಗಳನ್ನು ಛೇಡಿಸುತ್ತಿದ್ದರು. ಅದರಲ್ಲಿ ಹಿಂದೂ ಎಂದರೆ ಬರಿ ಜಾತಿ ಪದ್ಧತಿ, ಹಸುಗಳ ಪೂಜೆ, ವರದಕ್ಷಿಣೆ ಮತ್ತು ಮಹಿಳೆಯರ ದಯನೀಯ ಸ್ಥಿತಿ, ಜೊತೆಗೆ ಸತಿ ಪದ್ಧತಿ, ಅಸ್ಪೃಶ್ಯತೆಗಳಂತಹ ಕಂದಾಚಾರಗಳಿಂದ ತುಂಬಿತುಳುಕುವ ಒಂದು ಕೆಟ್ಟ ಧರ್ಮ ಎಂದು ಬಿಂಬಿಸಲಾಗಿತ್ತು. ಜಗತ್ತಿನ ಅತಿ ಪ್ರಾಚೀನವಾದ ಜೀವಂತ ನಾಗರಿಕತೆಯ, ಸಾವಿರಾರು ವರ್ಷಗಳ ಅಗಾಧ ತತ್ವಜ್ಞಾನದ, ಜೀವನದೃಷ್ಟಿಯ ಕಿರು ಪರಿಚಯವೂ ಕೊಡದ ಆ ಪಾಠಗಳನ್ನು ಓದಿದ ಮಕ್ಕಳು ಮನೆಗೆ ಬಂದು ತಮಗೆ ಇನ್ನು ಮೇಲೆ ಹಿಂದೂ ಆಗಿರಲು ಇಷ್ಟ ಇಲ್ಲ ಎನ್ನಲು ಆರಂಭಿಸಿದರು. ಇದರ ಬದಲಾವಣೆಯನ್ನು ಹೋರಾಟ ರೂಪದಲ್ಲಿ ಕೈಗೆತ್ತಿಕೊಂಡ ಅಲ್ಲಿನ ಹಿಂದೂ ಸಂಘಟನೆಗಳು ಹತ್ತಾರು ವರ್ಷಗಳು ಒದ್ದಾಡಿ ಆ ಪಾಠಗಳಲ್ಲಿ ತಿದ್ದುಪಡಿ ತರುವುದರಲ್ಲಿ ಬಹುಪಾಲು ಯಶಸ್ವಿಯೂ ಆದರು.

ನಮ್ಮ ಮಕ್ಕಳಿಗೆ ನಮ್ಮ ಐತಿಹಾಸಿಕ ವೀರರ ಬಗ್ಗೆಯಾಗಲೀ, ವಿಜ್ಞಾನ, ಗಣಿತ, ಕಲೆ, ವಾಸ್ತುಶಿಲ್ಪ, ಖಗೋಳದಂತಹ ವಿಷಯಗಳಲ್ಲಿ ನಮ್ಮ ಸಾಧನೆಗಳಾಗಲೀ, ತತ್ವ ಮತ್ತು ತರ್ಕ, ವೇದಗಳಾಗಲೀ ಯಾವುದನ್ನೂ ನಾವು ಭಾರತೀಯರು ಅಸಾಮಾನ್ಯರು ಅನ್ನುವ ತರ ಅತಿಶಯವಾಗಿ ಹೇಳಿಕೊಡಬೇಕೆಂದಿಲ್ಲ. ನಾವು ಕಲಿಸಬೇಕಾದದ್ದು ಐತಿಹಾಸಿಕ ಸತ್ಯಗಳನ್ನು; ಒಳ್ಳೆಯ ಮಾತ್ರವಲ್ಲ ಕೆಟ್ಟ ಸತ್ಯಗಳನ್ನೂ. ನಾವು ಮಾಡಿದ ನೂರಾರು ವರ್ಷಗಳ ಸಾಧನೆಗಳು ಮಾತ್ರವಲ್ಲ, ನಮ್ಮ ಕೆಲ ತಪ್ಪುಗಳನ್ನೂ. ಅವುಗಳ ಬಗೆಗಿನ ಅಂತಿಮ ಅಭಿಪ್ರಾಯಕ್ಕೆ ಅವರೇ ಬರುತ್ತಾರೆ. 

ಐತಿಹಾಸಿಕ ಸತ್ಯಕ್ಕೆ ಇರುವುದು ಒಂದೇ ಮುಖ. ಆದರೆ ಅದನ್ನು ಪೊಲಿಟಿಕಲ್‌ ಕರೆಕ್ಟ್‌ನೆಸ್‌ನಿಂದ ಮರೆಮಾಚುತ್ತಾ ಹೋದಂತೆ ನಿಜವಾದ ಇತಿಹಾಸದ ರೂಪ ಬದಲಾಗಿ ಹೋಗುತ್ತದೆ. ಈಗ ಕೇಂದ್ರ ಸರ್ಕಾರ ಪಠ್ಯಪುಸ್ತಕಗಳಲ್ಲಿ ಕೆಲವು ಬದಲಾವಣೆ ಮಾಡಲು ಹೊರಟಿದೆ. ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವರ ಪ್ರಕಾರ ಪಂಡಿತ ಮದನಮೋಹನ ಮಾಳವೀಯರ ಆಶಯದಂತೆ ಪ್ರಾಚೀನ ಭಾರತೀಯ ಜ್ಞಾನ ಮತ್ತು ಆಧುನಿಕ ವಿಜ್ಞಾನ ಎರಡನ್ನೂ ಸೇರಿಸಿ ಹೊಸ ಪಠ್ಯಪುಸ್ತಕಗಳನ್ನು ಬರೆಯಲಾಗುತ್ತದೆ. ಅದೂ ಕಳೆದ ಸರ್ಕಾರಗಳ ತರ ಸತ್ಯಕ್ಕೆ ತೇಪೆ ಹಾಕಿ ಅರೆಬರೆ ಕಾಣುವಂತೆ ಮಾತ್ರ ಇರುತ್ತದೆಯೊ ಎಂದು ಕಾದು ನೋಡಬೇಕಷ್ಟೆ. ಇನ್ನು ಪ್ರತಿ ರಾಜ್ಯದ ಪಠ್ಯಪುಸ್ತಕಗಳ ಬದಲಾವಣೆಯ ಆಟಗಳು ಅಲ್ಲಿನ ಸರ್ಕಾರಗಳು ಬದಲಾದ ಹಾಗೆ ನಡೆಯುತ್ತಿರುತ್ತವೆ. ಮಕ್ಕಳು ಶಾಲೆಗಳಲ್ಲಿ ಓದುವ ಇತಿಹಾಸ ಸರ್ಕಾರಗಳ ಮರ್ಜಿಗೆ ತಕ್ಕಂತೆ ಇರುವುದಾದರೆ, ನಿಜವಾದ ಶಿಕ್ಷಣ ಮನೆಗಳಲ್ಲೇ ದೊರೆಯಬೇಕು. ನಮ್ಮ ಮಕ್ಕಳಿಗೆ ನಾವೀಗ ಕಲಿಸಬೇಕಾದದ್ದು ಪಠ್ಯಗಳಲ್ಲಿ ಇರುವುದರ ಪರ್ಯಾಯ ಇತಿಹಾಸ. ಅವರು ತಮ್ಮ ಪರಂಪರೆಯ ಬಗ್ಗೆ ಅಭಿಮಾನ ಪಡುವ ಇತಿಹಾಸ. ನಮ್ಮ ರಸ್ತೆಗಳಿಗೆ, ಊರುಗಳಿಗೆ ಆಕ್ರಮಣಕಾರರ ಹೆಸರು ಇಟ್ಟಿದ್ದೇವೆ, ಅವರು ಕಟ್ಟಿದ ಕಟ್ಟಡಗಳನ್ನು ನೂರಾರು ವರ್ಷಗಳ ನಂತರವೂ ಮುಚ್ಚಟೆಯಿಂದ ಕಾಪಾಡಿಕೊಂಡಿದ್ದೇವೆ. ಇರಲಿ. ಆದರೆ ನಮ್ಮ ಮುಂದಿನ ಪೀಳಿಗೆಗೆ ಇನ್ನಾದರೂ ನಾವು ಆ ಕ್ರೂರ ಸತ್ಯಗಳ ಪರಿಚಯ ಮಾಡಿಕೊಡದಿದ್ದರೆ ಅವರ ಜೀವನವೂ ಕೂಡ ನಮ್ಮ ಹಾಗೆ ಅಸ್ಮಿತೆಯಿಲ್ಲದ, ಅನುಕರಣೆಯ ಅಸ್ತಿತ್ವವಾಗಿ ಉಳಿಯುತ್ತದಷ್ಟೆ.


(Published in Udayavani dated 04/08/2020)

Tuesday, May 26, 2020

ಪಾಶ್ಚಾತ್ಯರ ಕಾಮಾಲೆ ಕಣ್ಣಿಗೆ ಭಾರತವೇಕೆ ಹಳದಿಯಾಗಿ ಕಾಣುತ್ತದೆ?

"ಥ್ಯಾಂಕ್‌ ಗಾಡ್‌. ಕೊರೋನಾ ವೈರಸ್‌ ಭಾರತದಲ್ಲಿ ಶುರುವಾಗಲಿಲ್ಲ, ಏಕೆಂದರೆ ಆಗ ಭಾರತದ ಆಡಳಿತ ವ್ಯವಸ್ಥೆ ಅದಕ್ಕೆ ಚೀನೀಯರಷ್ಟು ಸಮರ್ಥವಾಗಿ ಸ್ಪಂದಿಸುತ್ತಿರಲಿಲ್ಲ. ಬೇರೆಯವರಿಗೆ ಹೋಲಿಸಿದರೆ ಚೀನಾ ಯಾವ ಆಪತ್ತಿಗೂ ತಕ್ಷಣ ಪರಿಣಾಮಕಾರಿಯಾಗಿ ಸ್ಪಂದಿಸುತ್ತದೆ." ಈ ಮಾತುಗಳು ಇಡೀ ಜಗತ್ತು ಸ್ತಬ್ಧವಾಗಿ ನಿಂತಿರುವ ಈ ಘಳಿಗೆಯಲ್ಲಿ, ಅದಕ್ಕೆ ಚೀನಾ ಕಾರಣ ಎಂದು ತಿಳಿದಿರುವ ಯಾರಿಗಾದರೂ ಅಚ್ಚರಿ ಉಂಟುಮಾಡುತ್ತದೆ. ಬ್ರಿಟನ್‌ನ ಖ್ಯಾತ ಅರ್ಥಶಾಸ್ತ್ರಜ್ಞ ಜಿಮ್‍ ಓ’ನೀಲ್‌ ನಮ್ಮ ದೇಶದ ಬಗ್ಗೆ ಇಂಥ ಮಾತಾಡುವುದು ಮೊದಲೇನೂ ಅಲ್ಲ. ಅಸಾಂದರ್ಭಿಕವಾಗಿ, ಆಗುವ ಅನಾಹುತಗಳಿಗೆಲ್ಲ ಭಾರತವನ್ನು ದೂಷಿಸುವ ಪಾಶ್ಚಾತ್ಯರಲ್ಲಿ ಅವರು ಮೊದಲನೆಯವರೂ ಅಲ್ಲ. 
ಪ್ರೊಫ಼ೆಸರ್‌ ಸ್ಟೀವ್‌ ಹಾಂಕಿ ಎನ್ನುವ ಅಮೇರಿಕಾದ ಜಾನ್ಸ್‌ ಹಾಪ್ಕಿನ್ಸ್‌ ಯೂನಿವರ್ಸಿಟಿಯ ಅರ್ಥಶಾಸ್ತ್ರಜ್ಞ, ಭಾರತೀಯರು ಪ್ರತಿಭಟಿಸುವವರೆಗೂ ತಮ್ಮ ಟ್ವೀಟ್‌ಗಳನ್ನು ಕೊರೋನಾ ವೈರಸ್‌ ವಿರುದ್ಧದ ಭಾರತ ಸರ್ಕಾರದ ಕ್ರಮಗಳನ್ನು ದೂಷಿಸುವುದಕ್ಕೇ ಮೀಸಲಿಟ್ಟರು. ಮಾರ್ಚ್ ೧೬ರ ವಾರ ಅಮೇರಿಕಾ ೩೦೦ಕ್ಕೂ ಹೆಚ್ಚು ಸಾವುಗಳನ್ನು ಕಂಡರೆ, ಭಾರತದಲ್ಲಿ ಆದದ್ದು ಎರಡು ಸಾವು. ಆದರೆ ಈ ಅರ್ಥಶಾಸ್ತ್ರಜ್ಞರಿಗೆ ನಮ್ಮ ದೇಶದ ಎರಡು ಸಾವು ನಮ್ಮ ಆರೋಗ್ಯ ವ್ಯವಸ್ಥೆಯ ಅಸಮರ್ಪಕ ನಿರ್ವಹಣೆಯ ಭಯಾನಕ ಉದಾಹರಣೆಯಾಗಿ ಕಂಡಿತು. ಕೇಂದ್ರ ಸರ್ಕಾರದ ’ಆರೋಗ್ಯ ಸೇತು’ ಅಪ್ಲಿಕೇಷನ್‌ ಮೋದಿ ಜನರ ಮೇಲೆ ಬೇಹುಗಾರಿಕೆಗೆ ಇಟ್ಟ ಮೊದಲ ಹೆಜ್ಜೆಯ ತರ ಕಂಡಿತು. ಸುಮಾರು ೧೩೫ ಕೋಟಿ ಜನಸಂಖ್ಯೆ ಇರುವ ಭಾರತದಲ್ಲಿ ಇಷ್ಟು ಕಡಿಮೆ ಸೋಂಕಿತರು ಇರುವುದು ಅವರಿಗೆ ನಂಬಲು ಅಸಾಧ್ಯ. ಮಾತ್ರವಲ್ಲ, ಮೋದಿಯ ಕರೆಗೆ ಓಗೊಟ್ಟು ಜನ ಹೊಡೆದ ಚಪ್ಪಾಳೆ, ಹೊತ್ತಿಸಿದ ದೀಪ, ಊದಿದ ಶಂಖನಾದ ಹಾಸ್ಯಾಸ್ಪದವಾಗಿ ಕಂಡಿತು. ಆದರೆ ಅದೇ ಚಪ್ಪಾಳೆ ಯೂರೋಪಿಯನ್ ರಾಷ್ಟ್ರಗಳಿಂದ ಕೇಳಿದಾಗ ಅವರನ್ನು ಹೊಗಳಲು ಇವರ್ಯಾರೂ ಮರೆಯಲಿಲ್ಲ. 
ನಮ್ಮ ದೇಶ ಪಾಶ್ಚಾತ್ಯರ ಕಾಮಾಲೆ ಕಣ್ಣಿಗೆ ಹಳದಿಯಾಗಿ ಕಾಣುವುದು ಹೊಸತೇನೂ ಅಲ್ಲ. ಈಸ್ಟ್‌ ಇಂಡಿಯಾ ಕಂಪೆನಿ ಭಾರತದಲ್ಲಿ ತನ್ನ ಆಡಳಿತವನ್ನು ಸಮರ್ಥನೆ ಮಾಡಿಕೊಳ್ಳಲು ಮಾಡಿದ ಉಪಾಯಗಳಲ್ಲಿ ಬಿಳಿಯರ ಕೈಯಲ್ಲಿ ಪೂರ್ವಾಗ್ರಹಿತ ಪುಸ್ತಕಗಳನ್ನು ಬರೆಸುವುದೂ ಒಂದು. ತಾವು ಬಂದು ಅನಾಗರಿಕ ಭಾರತೀಯರನ್ನು ಹೇಗೆ ಉದ್ದಾರ ಮಾಡಿದೆವು ಅನ್ನುವುದನ್ನು ಐರೋಪ್ಯ ದೇಶಗಳಲ್ಲಿ ಸಾರುವುದಕ್ಕೋಸ್ಕರ ಬ್ರಿಟಿಷರು ಬರೆಸಿದ ಪುಸ್ತಕಗಳಲ್ಲಿ ಕ್ಯಾಥರೀನ್‌ ಮೇಯೋಳ ’ಮದರ್‌ ಇಂಡಿಯಾ’ ಮತ್ತು ಜೇಮ್ಸ್‌ ಮಿಲ್‌ನ ’ಹಿಸ್ಟರಿ ಆಫ್ ಬ್ರಿಟಿಷ್ ಇಂಡಿಯಾ’ ಪ್ರಸಿದ್ಧವಾದವು.
ಅಮೇರಿಕಾದ ಪತ್ರಕರ್ತೆ ಹಾಗೂ ಬ್ರಿಟನ್‍ ಆರಾಧಕಿಯೆಂದೇ ಖ್ಯಾತಳಾದ ಕ್ಯಾಥರೀನ್‌ ಮೇಯೋ ೧೯೨೦ರ ದಶಕದಲ್ಲಿ ’ಮದರ್‌ ಇಂಡಿಯಾ’ ಬರೆದದ್ದು ಬ್ರಿಟಿಷ್ ಸರ್ಕಾರದ ಆಧಾರವಿಲ್ಲದ ದಾಖಲೆಗಳನ್ನು ಮುಂದಿಟ್ಟುಕೊಂಡು. ಗಾಂಧೀಜಿ ಹೇಳಿದ ಹಾಗೆ ಅದೊಂದು ’ಚರಂಡಿಗಳನ್ನು ತೆಗೆದು ಅದರ ವಾಸನೆಯ ಬಗ್ಗೆ ರಂಗುರಂಗಾಗಿ ವರ್ಣಿಸಿ ಬರೆದ ವರದಿ’ ಮಾತ್ರವಲ್ಲ, ಅವಳ ಪ್ರಕಾರ ’ಭಾರತವೇ ಒಂದು ಚರಂಡಿ.’ ತನ್ನ ಜೀವನದ ಅರ್ಧಭಾಗ ಭಾರತದಲ್ಲಿ ಕಳೆದ ಆನ್ನಿ ಬೆಸೆಂಟ್, ಮೇಯೋ ವರ್ಣಿಸಿದ ಯಾವ ಭಯಾನಕ ದೃಶ್ಯಗಳನ್ನೂ ತಾನು ನೋಡಲಿಲ್ಲ ಎಂದು ಸಾರಾಸಗಟಾಗಿ ಅವಳ ಪುಸ್ತಕವನ್ನು ತಿರಸ್ಕರಿಸಿದರು. 
ಅಷ್ಟಕ್ಕೂ ಮೇಯೋ ಬರೆದದ್ದೇನು? ಇಡೀ ಪುಸ್ತಕದ ತುಂಬ ಓದಲಸಾಧ್ಯವಾದ ಅಸಹ್ಯಕರ ಸುಳ್ಳುಗಳು. ಭಾರತದ ಹಿಂದೂ ಜನ ಎಷ್ಟು ಕೊಳಕು ಎಂದರೆ, ಭಾರತ ಮಾನವ ನಾಗರಿಕತೆಯ ದೇಹದಲ್ಲಿ ಒಂದು ಕ್ಯಾನ್ಸರ್‌ನ ಗಡ್ಡೆ ಎನ್ನುವ ಅವಳ ಕಲ್ಪನೆಗಳಿಗೆ ತಕ್ಕ ಹಾಗೆ ವಿವಿಧ ಉದಾಹರಣೆಗಳು. ಭಾರತಕ್ಕೆ ೧೮೯೬ರಲ್ಲಿ ಪ್ಲೇಗ್‌ ದಾಳಿಯಿಟ್ಟ ಬಗ್ಗೆ ಬರೆಯುತ್ತಾ ಆಕೆ ನಮ್ಮ ದೇಶವೇ ಜಗತ್ತಿನ ಎಲ್ಲಾ ಸಾಂಕ್ರಾಮಿಕ ರೋಗಗಳ ಆಗರ ಎನ್ನುತ್ತಾಳೆ. ಇಡೀ ವಿಶ್ವಕ್ಕೆ ಅಪಾಯಕಾರಿಯಾದ ಹಿಂದೂಗಳನ್ನು ಬ್ರಿಟಿಷರು ಕಾಪಾಡದಿದ್ದಿದ್ದರೆ, ಉತ್ತರದ ವೀರ ಜನಾಂಗಗಳು ಅವರನ್ನು ಯಾವಾಗಲೋ ನಾಶಮಾಡಿರುತ್ತಿದ್ದವು ಎನ್ನುತ್ತಾಳೆ. 
ಇನ್ನು ಜೇಮ್ಸ್‌ ಮಿಲ್‌ ಎನ್ನುವ ಇನ್ನೊಬ್ಬ ಮಹಾನುಭಾವ ಬ್ರಿಟಿಷ್‌ ಆಳ್ವಿಕೆಯಲ್ಲಿದ್ದ ಭಾರತದ ಇತಿಹಾಸದ ಬಗ್ಗೆ ಹನ್ನೆರಡು ವರ್ಷಗಳ ಸುದೀರ್ಘ ಸಮಯ ತೆಗೆದುಕೊಂಡು ಮೂರು ಸಂಪುಟಗಳ ಬೃಹತ್‌ ಗ್ರಂಥ ಬರೆಯುತ್ತಾನೆ. ಭಾರತದ ಬಗ್ಗೆ ತಿಳಿದುಕೊಳ್ಳಲು ಆಸಕ್ತಿ ಇರುವ ಆಗಿನ ಐರೋಪ್ಯ ದೇಶದವರಿಗೆ ಅದೊಂದು ದಾರಿದೀಪವಾಗುತ್ತದೆ. ಜೇಮ್ಸ್‌ ಮಿಲ್‌ ಭಾರತದ, ಇಲ್ಲಿನ ಜನರ ಜೀವನದ, ರಾಜಕೀಯ, ಸಾಮಾಜಿಕ, ಆರ್ಥಿಕ, ಧಾರ್ಮಿಕ ವಿಷಯಗಳ ಬಗ್ಗೆ ಆತ ಅತ್ಯಂತ ನಿಕೃಷ್ಟವಾಗಿ ಬರೆದ. ವಿಪರ್ಯಾಸವೆಂದರೆ, ಅವನು ಆ ಗ್ರಂಥವನ್ನು ಬರೆದದ್ದು ಸಾವಿರಾರು ಮೈಲಿ ದೂರ ಕೂತು, ತನ್ನ ಜೀವನದಲ್ಲಿ ಒಮ್ಮೆಯೂ ಭಾರತಕ್ಕೆ ಕಾಲಿಡದೆ, ಇಲ್ಲಿನ ಸಮಾಜದ ನಾಡಿಮಿಡಿತದ ಅರಿವಿಲ್ಲದೆ, ಇಲ್ಲಿನ ಜನರನ್ನು ಮುಖತ: ಭೇಟಿಯಾಗದೆ. ಇವರಿಬ್ಬರ ಪ್ರಕಾರ ಹಿಂದೂ ನಾಗರಿಕತೆ ಯೂರೋಪಿಯನ್‌ ನಾಗರಿಕತೆಗಿಂತ ಕೆಳಸ್ತರದ್ದು, ಆದ್ದರಿಂದ ಭಾರತೀಯರು ಸ್ವರಾಜ್ಯಕ್ಕೆ ಅರ್ಹರಲ್ಲ. 
ಅವತ್ತಿನಿಂದ ಇವತ್ತಿನವರೆಗೂ ಪಾಶ್ಚಾತ್ಯರು ನಮ್ಮ ಬಗ್ಗೆ ಕೀಳಾಗಿ ಬರೆಯುವುದಕ್ಕೆ, ತಿರಸ್ಕಾರದಿಂದ ಮಾತನಾಡುವುದಕ್ಕೆ ಇರುವುದು ಒಂದೇ ಕಾರಣ. ತಮ್ಮ ಜನಾಂಗದ ಶ್ರೇಷ್ಠತೆಯ ಬಗ್ಗೆ ಅವರಿಗಿರುವ ದೃಢ ನಂಬಿಕೆ. ಒಂದು ರೀತಿಯಲ್ಲಿ ಇವರೆಲ್ಲ ನಮ್ಮ ದೇಶವನ್ನು ಪೂರ್ವಾಗ್ರಹದ ದೃಷ್ಟಿಯಿಂದ ನೋಡುವುದರಲ್ಲಿ ಆಶ್ಚರ್ಯವೇನೂ ಇಲ್ಲ. ಇಲ್ಲಿಗೆ ಬಂದ ಪಾಶ್ಚಾತ್ಯರಲ್ಲಿ ಭಾರತವನ್ನು ಇಷ್ಟಪಟ್ಟವರು, ಆರಾಧಿಸಿದವರು, ಇಲ್ಲಿನ ಸೆಳೆತಕ್ಕೆ ಒಳಗಾಗಿ ಇಲ್ಲೇ ನೆಲೆ ನಿಂತವರು ಬೇಕಾದಷ್ಟು ಜನರಿದ್ದಾರೆ. ಆದರೆ ಅವರ ಅನುಭವಗಳಿಗಿಂತ ಕೆಲವರ ನಕಾರಾತ್ಮಕ ನೋಟ, ಅಭಿಪ್ರಾಯಗಳಿಗೆ ಎಲ್ಲಾ ಕಡೆ ಮನ್ನಣೆ ದೊರೆಯುತ್ತವೆ. ಅದಕ್ಕೆ ಒಂದು ಕಾರಣ, ಇಲ್ಲಿನವರೇ ವಿದೇಶಗಳ ಅನುದಾನಗಳಿಗೆ, ಪ್ರಶಸ್ತಿಗಳಿಗೆ ಬೇಕಾದಂತೆ ಅಂಗಲಾಚುವ ಕೈಗಳ ಮತ್ತು ಖಾಲಿ ನೋಟಗಳ ಬಡಮಕ್ಕಳ, ದೈನ್ಯತೆಯ ಜೀವನದ ಫೋಟೋಗಳನ್ನು ತೆಗೆದು, ಚಲನಚಿತ್ರಗಳನ್ನು ತಯಾರಿಸಿ ಪಾಶ್ಚಾತ್ಯ ಡ್ರಾಯಿಂಗ್‌ ರೂಮ್‌ಗಳಲ್ಲಿ ತೋರಿಸಿ ಭಾರತ ಬಡದೇಶ, ಕೊಳಕು ದೇಶ, ಅಲ್ಲಿನವರಿಗೆ ಬದುಕಲು ನಿಮ್ಮ ಸಹಾಯವಿಲ್ಲದೆ ಸಾಧ್ಯವೇ ಇಲ್ಲ ಎನ್ನುವ ಭಾವ ಹುಟ್ಟಿಸಿರುವುದು. ಅಲ್ಲಿಯೂ ಸ್ಲಂಗಳಿದ್ದಾವೆ, ಬಡತನವಿದೆ, ಹಸಿವಿದೆ. ಆದರೆ ಅವರ ವೈಭವೀಕರಣ ’ಮೂರನೇ ಜಗತ್ತಿನ’ ದೇಶಗಳಿಗೆ ಮಾತ್ರ ಸೀಮಿತ.  
ಕೊರೋನಾ ವೈರಸ್‌ಗೆ ಇಲ್ಲಿಯವರೆಗೆ ಬ್ರಿಟನ್‌ನಲ್ಲಿ ೩೦,೦೦೦ಕ್ಕೂ ಹೆಚ್ಚು ಜನ ಬಲಿಯಾದರೆ, ಭಾರತದ ಸಂಖ್ಯೆ ೨,೦೦೦ದ ಆಸುಪಾಸು. ಆದರೆ ಅಲ್ಲಿನ ಪತ್ರಿಕೆಗಳಿಗೂ, ಬಿಬಿಸಿಯಂತಹ ಚಾನಲ್‌ಗಳಿಗೂ ನಮ್ಮ ದೇಶದ ಬಗ್ಗೆ ಚಿಂತೆ. ಭಾರತದಲ್ಲಿ ಕೊರೋನಾದಿಂದ ಆಗಬಹುದಾದ ಕಲ್ಪಿತ ಅನಾಹುತಗಳ ಬಗ್ಗೆ ಪದೇ ಪದೇ ಅವರ ಮಾಧ್ಯಮಗಳಲ್ಲಿ ಬರಹಗಳು, ಚರ್ಚೆಗಳು ಬರುತ್ತಿವೆ. ಇಲ್ಲಿಯವರೆಗೂ ಜಗತ್ತಿಗೆ ಒಂದೇ ಒಂದು ಸಾಂಕ್ರಾಮಿಕ ರೋಗ ಹರಡದ, ಎರಡು ಕೋಟಿಗೂ ಹೆಚ್ಚು ಜನ ಒಂದೆಡೆ ಒಮ್ಮೆಲೆ ಸೇರುವ ಮಹಾ ಕುಂಭಮೇಳದ ಮಾತ್ರವಲ್ಲದೆ ವರ್ಷವಿಡೀ ದೇಶದ ಮೂಲೆಮೂಲೆಯಲ್ಲಿ ನಾನಾ ದೇವರುಗಳ ಜಾತ್ರೆಗಳಲ್ಲಿ ಲಕ್ಷಾಂತರ ಜನ ಸೇರುವ ಅಸಾಧಾರಣ ಇತಿಹಾಸ ನಮ್ಮದು ಮಾತ್ರ. ಆದರೆ ಅವರಿಗೆ ಕಾಣುವುದು ಬರೀ ಅದರಲ್ಲಿನ ಜಟೆ ಕಟ್ಟಿದ, ವಿಭೂತಿ ಮೈಗೆ ಬಳಿದುಕೊಂಡ ಸಾಧುಗಳು, ಒಂದೇ ನೀರಿನಲ್ಲಿ ಲಕ್ಷಾಂತರ ಜನ ಒಟ್ಟಿಗೆ ಮುಳುಗಿ ಏಳುವ, ಅದರಿಂದ ರೋಗಗಳು ಹರಡಬಹುದಾದ ’ಗಂಡಾಂತರ’ಗಳು. 
ನಮ್ಮ ದೇಶದಲ್ಲಿ ಜನ ರಸ್ತೆಯಲ್ಲಿ ಉಗುಳುತ್ತಾರೆ ನಿಜ, ಕಸದ ರಾಶಿಯ ಪಕ್ಕದಲ್ಲೇ ನಾವು, ನಾಯಿಗಳು, ದನಗಳು ಸಹಜೀವನ ನಡೆಸುತ್ತೇವೆ ನಿಜ. ಪಾಶ್ಚಾತ್ಯರಿಂದ ಇಷ್ಟು ಅವಮಾನಿಸಿಕೊಂಡ ಮೇಲೂ ಸ್ವಚ್ಚತೆಯ ಅರಿವು ನಮಗೆ ಬಂದಿಲ್ಲ ಎನ್ನುವುದು ನಿಜ. ಆದರೆ ಇಲ್ಲಿಯವರೆಗೆ ’ನಾಗರಿಕ’ ದೇಶಗಳ ಹಾಗೆ ನಮ್ಮ ದೇಶದಿಂದ ಯಾವ ಸಾಂಕ್ರಾಮಿಕ ರೋಗಗಳೂ ಜಗತ್ತಿಗೆ ಹರಡಿಲ್ಲ ಅನ್ನುವುದೂ ನಿಜ. ಸ್ಪಾನಿಷ್‌ ಫ಼್ಲೂ ೧೯೧೮ರಲ್ಲಿ ಶುರುವಾದದ್ದು ಕಾನ್ಸಾಸ್, ಅಮೇರಿಕಾದಿಂದ. ಭಾರತಕ್ಕೆ ತಲುಪಿದ ಫ್ಲೂ ದೇಶದೆಲ್ಲೆಡೆ ಹಬ್ಬಿದರೂ ಬ್ರಿಟಿಷ್‍ ಸರ್ಕಾರ ತಲೆಕೆಡಿಸಿಕೊಳ್ಳಲಿಲ್ಲ. ಸಾಮಾನ್ಯ ಜನರೇ ರಾಮಕೃಷ್ಣ ಮಿಶನ್‌ ಮತ್ತಿತರ ಸೇವಾಸಂಸ್ಥೆಗಳ ಜೊತೆ ಸೇರಿ ತಮ್ಮ ಸುತ್ತಮುತ್ತ ರೋಗಕ್ಕೆ ತುತ್ತಾದವರ ಆರೈಕೆ ಮಾಡಿದರು. ಬ್ರಿಟಿಷರು ಫ್ಲೂ ಬಂದದ್ದೇ ಇಲ್ಲಿನವರ ಅಸ್ವಚ್ಚತೆಯಿಂದ ಎಂದು ದೂರುತ್ತಾ ಕಾಲಕಳೆದರು, ಮಾತ್ರವಲ್ಲ ಅವರ ವೈದ್ಯಕೀಯ ಸವಲತ್ತುಗಳು ಕೇವಲ ಇಲ್ಲಿದ್ದ ಆಂಗ್ಲರಿಗೆ, ಅವರ ಮನೆಯವರಿಗೆ ಸೀಮಿತವಾಗಿತ್ತು. ಇನ್ನು ಪಾಶ್ಚಾತ್ಯರು ಕಾಲರಾ ಭಾರತದಿಂದ ಶುರುವಾಯಿತು ಎನ್ನುತ್ತಾರೆ. ಆದರೆ ’ಸುಶ್ರುತ ಸಂಹಿತ’ದಿಂದ ಹಿಡಿದು ನಮ್ಮ ಯಾವ ಹಳೆಯ ದಾಖಲೆಗಳಲ್ಲೂ ಕಾಲರಾ ಬಗ್ಗೆ ಪ್ರಸ್ತಾಪವಿಲ್ಲ, ಬದಲಿಗೆ ನಮ್ಮ ದೇಶಕ್ಕೆ ಬಂದ ಪೋರ್ಚುಗೀಸ್‌ ಸೈನಿಕರಿಂದ ಭಾರತಕ್ಕೆ ಕಾಲರಾ ಹರಡಿರುವ ಬಗ್ಗೆ ಅವರ ವೈದ್ಯರೇ ದಾಖಲಿಸಿದ್ದಾರೆ.
ಕ್ರಿಸ್ಟೋಫರ್‌ ಕೊಲಂಬಸ್‌ ಮೊದಲು ಅಮೇರಿಕಾಗೆ ಕಾಲಿಟ್ಟಾಗ ಅವನನ್ನು ಅಲ್ಲಿನ ಸ್ಥಳೀಯ ಕಾಡು ಜನಾಂಗಗಳು ಸ್ನೇಹದಿಂದ ಬರಮಾಡಿಕೊಳ್ಳುತ್ತಾರೆ. ಆದರೆ ಸುಮಾರು ಎಂಟು ಮಿಲಿಯನ್ ಜನಸಂಖ್ಯೆಯಿದ್ದ ಅಲ್ಲಿನ ಜನಾಂಗ ಐವತ್ತು ವರ್ಷಗಳಲ್ಲಿ ೫೦೦ ಜನರಿಗೆ ಇಳಿಯುತ್ತದೆ. ಇದಕ್ಕೆ ಕಾರಣ ಯೂರೋಪಿಯನ್ನರು ತಮ್ಮ ಜೊತೆ ಬಳುವಳಿಯಾಗಿ ತಂದ ಸಿಡುಬು, ಫ್ಲೂ ಮತ್ತಿತರ ಸಾಂಕ್ರಾಮಿಕ ರೋಗಗಳು. ಸ್ಪಾನಿಷರು ಮೆಕ್ಸಿಕೋ ಕಾಡು ಜನಾಂಗಗಳಿಗೆ ತಂದ ಸಿಡುಬಿನಿಂದಾಗಿ ಸುಮಾರು ಮೂರು ಲಕ್ಷ ಜನ ಸಾಯುತ್ತಾರೆ. ಯಾರಿಂದ ಯಾವ ರೋಗ ಶುರುವಾದರೂ ಐರೋಪ್ಯರು ಮೊದಲು ದೂಷಿಸುತ್ತಿದ್ದದ್ದು ಏಷ್ಯಾ, ಆಫ್ರಿಕಾ ದೇಶಗಳನ್ನು. ಏಕೆಂದರೆ ಅಲ್ಲಿನವರ ವೇಷಭೂಷಣಗಳಲ್ಲಿ, ನಡವಳಿಕೆಯಲ್ಲಿ ’ಅನಾಗರಿಕತೆ’ ಎದ್ದು ಕಾಣುತ್ತಿತ್ತು. ಅವರ ಅನಕ್ಷರತೆ ಅವರನ್ನು ಸೂಟು-ಬೂಟು ಹಾಕಿದ ಐರೋಪ್ಯರ ಎದುರಿಗೆ ಕೀಳರಿಮೆಯಿಂದ ನಿಲ್ಲುವ ಹಾಗೆ ಮಾಡಿತು. ಕಾರಣ ಏನೇ ಇರಬಹುದು, ಈ ಕೀಳರಿಮೆಯ, ಬಿಳಿಯರನ್ನು ಮೆಚ್ಚಿಸುವ ಹಪಹಪಿ ಈಗಲೂ ಮುಂದುವರಿದಿದೆ. 
ಸೂರತ್‌ನಲ್ಲಿ ೧೯೯೪ರಲ್ಲಿ ಪ್ಲೇಗ್‌ಗೆ ೫೬ ಜನ ಬಲಿಯಾದಾಗ ನ್ಯೂಯಾರ್ಕ್‌ ಟೈಮ್ಸ್‌ ಸೂರತ್‌ ನಗರವನ್ನು ’ನಾಗರಿಕತೆಯ ರೋಗಗಳ ಕೊಪ್ಪರಿಗೆ’ ಎಂದು ಕರೆಯುತ್ತದೆ. ಅದೇ ಲಂಡನ್‌ನಲ್ಲಿ ೧೪ನೇ ಶತಮಾನದಿಂದ ಇಲ್ಲಿಯವರೆಗೆ ಮೂರು, ನಾಲ್ಕು ಸಲ ಪ್ಲೇಗ್‌ ಬಂದು ಮೂರರಿಂದ ನಾಲ್ಕು ಲಕ್ಷ ಜನ ತೀರಿಕೊಂಡರೂ ಅದೇ ಪೇಪರ್‌ಗೆ ಇನ್ನೂ ಪದೇ ಪದೇ ಲಂಡನ್‌ಗೆ ಪ್ಲೇಗ್‌ ಬಂದ ಕಾರಣ ತಿಳಿದಿಲ್ಲ. ಇಲ್ಲಿನದ್ದೇ ಬಡತನ, ಅಸ್ವಚ್ಚ ರಸ್ತೆಗಳು, ಮನೆಗಳು, ವೈಯಕ್ತಿಕ ಸ್ವಚ್ಚತೆ ಬಗ್ಗೆ ಗಮನ ಕೊಡದ ಜನರು ಆಗಿನ ಲಂಡನ್‌ ನಗರದಲ್ಲೂ ತುಂಬಿದ್ದರು. ಈಗ ಇಲ್ಲಿಂದ ಹೋಗಿ ನಾಲ್ಕು ದಿನವಿದ್ದು ಬಂದು ಅಲ್ಲಿನ ಸ್ವಚ್ಚತೆಯನ್ನು ಹೊಗಳುವ, ಆದರೆ ಇಲ್ಲಿ ಏರ್‌ಪೋರ್ಟ್‌ನಲ್ಲಿ ಇಳಿದ ತಕ್ಷಣ ಬದಿ ಹೋಗಿ ಉಗುಳುವ ನಮ್ಮ ಜನ ಪಾಶ್ಚಾತ್ಯ ದೇಶಗಳ ಈಗಿನ ಸ್ವಚ್ಚತೆ ಇಲ್ಲಿ ಬರಬೇಕಾದರೆ ಅದರಲ್ಲಿ ನಮ್ಮ ಕರ್ತವ್ಯವೂ ಸೇರಿದೆ ಎಂದು ಒಪ್ಪಿಕೊಳ್ಳಬೇಕು. ಮಾತ್ರವಲ್ಲ, ಇವತ್ತಿಗೂ ನಮ್ಮ ಜನಕ್ಕೆ ಪಾಶ್ಚಾತ್ಯರು ಪೂರ್ಣ ಆತ್ಮವಿಶ್ವಾಸದಿಂದ ಏನೇ ಹೇಳಲಿ ಅದರ ಮೇಲೆ ನಂಬಿಕೆ ಜಾಸ್ತಿ. ನಮ್ಮ ಮಾನಸಿಕ ಗುಲಾಮಗಿರಿ ಯಾವಾಗ ನಿಂತು ನಮ್ಮ ಇತಿಹಾಸದ ಮೇಲೆ, ಯಾವ ಕ್ಷೇತ್ರದಲ್ಲೂ ನಮ್ಮವರ ಪರಿಣತಿಯ ಮೇಲೆ ಅದೇ ನಂಬಿಕೆ ಬರುತ್ತದೆಯೋ ಆಗಲೇ ಹೊರಗಿನವರ ಕಣ್ಣಿಗೆ ಅಂಟಿರುವ ಹಳದಿ ಪೊರೆಯನ್ನು ನಾವು ಸ್ವಚ್ಚಮಾಡಲು ಸಾಧ್ಯ.

(Published in Udayavani dated 17-05-2020)

Wednesday, February 5, 2020

ಖಾಲಿ ಪದಗಳ ಪದರದಡಿಯ ವಿಶ್ವಸಂಸ್ಥೆ ಎಂಬ ಪಳೆಯುಳಿಕೆ

ಶ್ವೇತಾ ಹಾಲಂಬಿ

ಬೇಸಿಗೆಯ ಸುಡುಬಿಸಿಲು ಸುಡಲಿಲ್ಲ, ಮಳೆಗಾಲದ ಪ್ರವಾಹ ಮುಳುಗಿಸಲಿಲ್ಲ. ಆದರೆ ಸಾವಿರಾರು ಮೈಲಿ ದೂರದಲ್ಲಿ ಕೂತ ಒಬ್ಬ ರಾಜಕಾರಣಿ ಸ್ವಾತಂತ್ರಪೂರ್ವ ಅವಿಭಜಿತ ಬಂಗಾಳದ ಮತ್ತು ಸುತ್ತಮುತ್ತಲಿನ ರಾಜ್ಯಗಳ ಬರೋಬ್ಬರಿ ಮೂವತ್ತು ಲಕ್ಷ ಜನರ ಸಾವಿಗೆ ಕಾರಣನಾದ.
ಅದು 1943ರ ಪೂರ್ವಾರ್ಧ. ಮಿತ್ರದೇಶಗಳು ಬಲಿಷ್ಟ ಜರ್ಮನಿ ಮತ್ತದರ ಸಹದೇಶಗಳನ್ನು ಮಣಿಸಲು ಒದ್ದಾಡುತ್ತಿದ್ದ ಎರಡನೇ ವಿಶ್ವಯುದ್ಧದ ಕಾಲ. ಒಂದು ಕಡೆ ಬಂಗಾಳದಲ್ಲಿ ಭೀಕರ ಬರಗಾಲ, ಇನ್ನೊಂದು ಕಡೆ ಭಾರತೀಯರನ್ನು ತೀವ್ರವಾಗಿ ದ್ವೇಷಿಸುತ್ತಿದ್ದ ಬ್ರಿಟಿಷ್ ಪ್ರಧಾನಿ ವಿನ್ಸ್ಟನ್ ಚರ್ಚಿಲ್. ಭಾರತದ ಪರವಾಗಿ ಬೇಡಿಕೊಂಡ ಯಾವ ಬ್ರಿಟಿಷ್ ಅಧಿಕಾರಿಯ ಮಾತನ್ನೂ ಕೇಳದೆ, ೭೦,೦೦೦ ಟನ್ ಅಕ್ಕಿಯನ್ನು ಬ್ರಿಟನ್‌ ಸೈನಿಕರ ಮತ್ತು ನಾಜ಼ಿಗಳ ವಿರುದ್ಧ ಹೋರಾಡುತ್ತಿರುವ ಮಿತ್ರದೇಶದವರಿಗಾಗಿ ತರಿಸಿಕೊಂಡ. ಮಾತ್ರವಲ್ಲ, ಬಂಗಾಳದಲ್ಲಿ ಯಾರೂ ತಾವು ಬೆಳೆದ ಅಕ್ಕಿಯನ್ನು ದಾಸ್ತಾನು ಮಾಡುವಂತಿಲ್ಲ ಎಂದು ಆಜ್ಞೆ ಮಾಡಿ, ಇದ್ದ ದಾಸ್ತಾನನ್ನೆಲ್ಲ ಮುಟ್ಟುಗೋಲು ಹಾಕಿಕೊಂಡ. ಸೈಕ್ಲೋನ್‌ನಲ್ಲಿ ಕೊಚ್ಚಿಕೊಂಡು ಹೋದ ಭತ್ತದ ಫಸಲು, ಅಳಿದುಳಿದ ಅಕ್ಕಿಯೂ ಬ್ರಿಟಿಷರ ಪಾಲಿಗೆ.
ಪತ್ರಕರ್ತೆ ಮಧುಶ್ರೀ ಮುಖರ್ಜಿ ತನ್ನ 'Churchill's secret war' ಪುಸ್ತಕದಲ್ಲಿ ಹೇಗೆ ಹಸಿವಿನಿಂದ ಕಂಗೆಟ್ಟ ಸಾವಿರಾರು ಜನ ಹಳ್ಳಿಗಳಿಂದ ಅನ್ನ ಹುಡುಕಿಕೊಂಡು ಪ್ರತಿದಿನ ಕಲ್ಕತ್ತಾಗೆ ಬರುತ್ತಿದ್ದರು, ರಸ್ತೆಗಳಲ್ಲೆ ಮಲಗಿ ಸಾಯುತ್ತಿದ್ದರು ಅನ್ನುವುದನ್ನು ಬರೆಯುತ್ತಾರೆ. ಅಪ್ಪ-ಅಮ್ಮಂದಿರು ಹಸಿದು ಅಳುತ್ತಿರುವ ತಮ್ಮ ಮಕ್ಕಳನ್ನು ಕೆರೆ ಬಾವಿಗೆಸೆಯುತ್ತಾರೆ, ಹೋದಲ್ಲೆಲ್ಲ ಅನ್ನ ಬೇಯಿಸಿದ ತಿಳಿ ಗಂಜಿಯನ್ನಾದರೂ ಕೊಡಿ ಎಂದು ಬೇಡಿಕೊಳ್ಳುತ್ತಾರೆ. ಅಂತ್ಯಸಂಸ್ಕಾರ ಮಾಡಲು ಸಂಬಂಧಿಕರಿಲ್ಲ, ಅಳಲು ಕಣ್ಣಲ್ಲಿ ನೀರಿಲ್ಲ. ಆದರೆ ಆಗ ಬ್ರಿಟನ್‌ನಲ್ಲಿ ಕೊಳೆಯುತ್ತಾ ಬಿದ್ದದ್ದು ಸುಮಾರು ೧೮.೫ ಮಿಲಿಯನ್ ಟನ್‌ನಷ್ಟು ಆಹಾರ ಪದಾರ್ಥಗಳು.
ಆಗ ಅಮೇರಿಕಾ ಅಧ್ಯಕ್ಷನಾಗಿದ್ದುದು ಫ್ರಾಂಕ್ಲಿನ್ ಡಿ. ರೂಸ್ವೆಲ್ಟ್. ಇದೇ ಚರ್ಚಿಲ್ ಮತ್ತು ರೂಸ್ವೆಲ್ಟ್ ಕನಸಿನ ಕೂಸು ಈಗ ಜಗತ್ತಿನ ಅತಿ ದೊಡ್ದ ಎನ್‌ಜಿಓ ಆಗಿ ಉಳಿದಿರುವ ವಿಶ್ವಸಂಸ್ಥೆ. ಅದು ಹುಟ್ಟಿದ್ದೇ ಎರಡನೇ ಮಹಾಯುದ್ಧದ ಸಮಯದಲ್ಲಿ ಜರ್ಮನಿ ಮತ್ತದರ ಸ್ನೇಹಿತ ದೇಶಗಳ ಭೀಕರ ದಾಳಿಯ ವಿರುದ್ಧ ದಿಕ್ಕುತಪ್ಪಿ ಕಕ್ಕಾಬಿಕ್ಕಿಯಾಗುತ್ತಿದ್ದ ಮಿತ್ರರಾಷ್ಟ್ರಗಳನ್ನು ಒಗ್ಗೂಡಿಸಿ ಹೋರಾಡಲು. ಈಗ ಮಾತ್ರ ಅದರ ಉದ್ದೇಶ ’ಶಾಂತಿ ಕಾಪಾಡಿಕೊಳ್ಳುವಿಕೆ.’
ವಿಶ್ವಸಂಸ್ಥೆಗೆ ೧೯೪೩ ನವೆಂಬರ್ ೯ರಂದು ಒಂದು ಹೊಸ ಅಂಗ ಸೇರಿಕೊಳ್ಳುತ್ತದೆ - ಪರಿಹಾರ ಮತ್ತು ಪುನರ್ವಸತಿ ಆಯೋಗ. ಅದರ ಧ್ಯೇಯವೇ ಜನ ಹಸಿವಿನಿಂದ ಸಾಯುವುದನ್ನು ತಡೆಯುವುದು. ಅದು ಹುಟ್ಟಿದ ದಿನವೇ ಅಮೇರಿಕಾ ಅಧ್ಯಕ್ಷರಿಗೆ ಮತ್ತು ಅವರ ಪತ್ನಿಗೆ ಒಂದು ಪತ್ರ ಬರುತ್ತದೆ. ಅಮೇರಿಕಾದಲ್ಲಿದ್ದ ಭಾರತೀಯ ಸಂಘಟನೆಯೊಂದರ ಅಧ್ಯಕ್ಷ ಜೆ.ಜೆ.ಸಿಂಗ್ ಬಂಗಾಳದ ಬರಗಾಲದಲ್ಲಿ ಒದ್ದಾಡುತ್ತಿದ್ದ ಜನರಿಗಾಗಿ ರೂಸ್ವೆಲ್ಟ್ ಹತ್ತಿರ ಸಹಾಯ ಕೇಳುತ್ತಾರೆ. ಆ ಪತ್ರ ಓದಿ ಎಲೀನರ್ ರೂಸ್ವೆಲ್ಟ್ ಮರುಗಿ ತನ್ನ ಗಂಡನ ಹತ್ತಿರ ಸಹಾಯ ಮಾಡಲು ಕೇಳಿಕೊಂಡರೆ, ರೂಸ್ವೆಲ್ಟ್ ತನ್ನ ಪತ್ನಿಗೆ ಬಾಯಿಮಾತಿನ ಭರವಸೆ ಕೊಡುತ್ತಾನೆ ವಿನಹ ಕೊನೆಗೂ ಚರ್ಚಿಲ್ ವಿರುದ್ಧ ಹೋಗುವುದಿಲ್ಲ. ಲಕ್ಷಾಂತರ ಜನರ ಪ್ರಾಣಕ್ಕಿಂತ ಚರ್ಚಿಲ್‌ಗೆ ಭಾರತೀಯರ ಮೇಲಿನ ದ್ವೇಷ ಮುಖ್ಯವಾದರೆ, ರೂಸ್ವೆಲ್ಟ್ ಗೆ ಚರ್ಚಿಲ್‌ನ್ನು ಮೆಚ್ಚಿಸುವುದೇ ಮುಖ್ಯವಾಗುತ್ತದೆ.
ಇತಿಹಾಸದ ಪುಟಗಳನ್ನು ಸುಮ್ಮನೆ ತಿರುವಿದರೆ ಅಲ್ಲಿ ಸಿಗುವುದು ಕುತೂಹಲಕಾರಿ ಸತ್ಯಗಳು. ಹಿಟ್ಲರ್ ಮಾತ್ರ ಯಹೂದಿಗಳ ನರಮೇಧ ನಡೆಸಲಿಲ್ಲ. ಅವನ ಮಿತ್ರರಾಷ್ಟ್ರಗಳಾದ ರೊಮೇನಿಯಾ, ಬಲ್ಗೇರಿಯಾ, ಸ್ಲೊವಾಕಿಯಾ, ಇಟೆಲಿ ಮತ್ತು ಹಂಗೇರಿ ಕೂಡ ಸುಮಾರು ೨ ಲಕ್ಷ ಯಹೂದಿಗಳನ್ನು ಸಾವಿರಾರು ಮನೆಗಳಲ್ಲಿ ಬಂಧಿಸಿಟ್ಟವು. ಹಂಗೇರಿಯಲ್ಲಿ ಆ ಮನೆಗಳ ಎದುರು ಒಂದು ಹಳದಿ ನಕ್ಷತ್ರವನ್ನು ಅಂಟಿಸಲಾಗುತ್ತಿತ್ತು. ಆ ಹಳದಿ ನಕ್ಷತ್ರದ ಮನೆಗಳ ಒಳಗೆ ಕೊಟ್ಟಿಗೆಯಲ್ಲಿ ದನಗಳನ್ನು ತುಂಬಿದಂತೆ ಯಹೂದಿಗಳನ್ನು ತುಂಬಲಾಗುತ್ತಿತ್ತು. ಅಲ್ಲಿಂದ ಅವರ ಪಯಣ ಜರ್ಮನಿಯ ಶಿಬಿರಗಳಿಗೆ, ಸಾವಿನೆಡೆಗೆ.
ಇತ್ತೀಚೆಗೆ ಬಿಡುಗಡೆಯಾದ ’ಹಿಟ್ಲರ್ ನಂತರ ಮಾನವ ಹಕ್ಕುಗಳು’ ಪುಸ್ತಕದಲ್ಲಿ ಡಾ. ಡ್ಯಾನ್ ಪ್ಲೆಶ್, ಹಿಟ್ಲರ್ ನಡೆಸುತ್ತಿದ್ದ ಮರಣ ಶಿಬಿರಗಳ ಬಗ್ಗೆ, ಅದರಲ್ಲಿ ಲಕ್ಷಗಟ್ಟಲೆ ಜನ ವಿಷಾನಿಲ ಸೇವಿಸಿ, ರೋಗಗಳಿಂದ ಮತ್ತು ಚಿತ್ರಹಿಂಸೆಯಿಂದ ಸಾಯುತ್ತಿರುವುದರ ಬಗ್ಗೆ ಬ್ರಿಟನ್‌ಗೆ ಮೊದಲೇ ಮಾಹಿತಿ ಇತ್ತು ಎನ್ನುತ್ತಾರೆ. ಬಲಿಷ್ಠ ರಾಷ್ಟ್ರಗಳ ಮೂಗಿನಡಿಯೇ ಹಿಟ್ಲರ್ ಸುಮಾರು ಒಂದು ಕೋಟಿ ಹತ್ತು ಲಕ್ಷ ಯಹೂದಿಗಳ, ಸ್ಲಾವ್‌ಗಳ, ಸಲಿಂಗಕಾಮಿಗಳ, ರೋಮಾ ಜಿಪ್ಸಿಗಳ ನರಮೇಧ ನಡೆಸಿಯೇಬಿಟ್ಟ. ವಿಶ್ವಸಂಸ್ಥೆಯ ಯುದ್ಧಾಪರಾಧ ಆಯೋಗ ಹಿಟ್ಲರ್‌ನ ನರಮೇಧದ ಬಗ್ಗೆ ರಹಸ್ಯವಾಗಿ ತನಿಖೆಯೇನೋ ನಡೆಸಿತು, ಆದರೆ ಅದು ನಾಜ಼ಿಗಳ ಬಾಂಬುಗಳ ಸದ್ದು ಲಂಡನ್ ತಲುಪಿದ ಮೇಲೇ. ಅದು ತನ್ನ ಮೊದಲ ಶಿಕ್ಷೆಯನ್ನು ಹಿಟ್ಲರ್ ಆತ್ಮಹತ್ಯೆ ಮಾಡಿಕೊಳ್ಳುವ ಮುಂಚೆ ವಿಧಿಸಿದ್ದರೆ, ಅದರ ಹೆಸರಿಗೆ, ರಚನೆಗೆ ಒಂದು ಅರ್ಥ ಬರುತ್ತಿತ್ತು. ಆದರೆ ಇಲ್ಲಿವರೆಗೂ ಯಹೂದಿಗಳ ನರಮೇಧದ ಬಗ್ಗೆ ವಿಶ್ವಸಂಸ್ಥೆಯಿಂದ ಹೊರಬಿದ್ದದ್ದು ಬರೀ ಬಾಯಿಮಾತಿನ ’ಖಂಡನೆ.’
ಬಾಮಿಯಾನ್ ಬುದ್ಧ ನೆನಪಿರಬಹುದು. ಜಗತ್ತಿನಲ್ಲೇ ಅತಿ ಎತ್ತರದ, ಹಿಂದುಕುಶ್ ಬೆಟ್ಟಗಳಲ್ಲಿ ಕೆತ್ತಿದ ಬುದ್ಧನ ಎರಡು ವಿಗ್ರಹಗಳನ್ನು ತಾಲಿಬಾನ್ ೨೦೦೧ರಲ್ಲಿ ಬಾಂಬುಗಳನ್ನಿಟ್ಟು ನಾಶ ಮಾಡಿತು. ಆಗಿನ ಯುನೆಸ್ಕೊ ಮುಖ್ಯಸ್ಥ ಕೊಯಿಚಿರೋ ಮತ್ಸುರ ನೇತೃತ್ವದಲ್ಲಿ ಮುಸ್ಲಿಮ್ ದೇಶಗಳಾದ ಈಜಿಪ್ಟ್, ಪಾಕಿಸ್ತಾನ, ಅರಬ್ ದೇಶಗಳು ಕೂಡ ಅಫಘಾನಿಸ್ತಾನದ ಸಾಂಸ್ಕೃತಿಕ ಪರಂಪರೆಯನ್ನು ಕೆಡವದಿರಲು ತಾಲಿಬಾನ್‌ನ್ನು ಬೇಡಿಕೊಂಡವು. ಆದರೆ ತಾಲಿಬಾನ್ ಕ್ಯಾರೆ ಅನ್ನಲಿಲ್ಲ. ಬರೀ ’ಬೇಡಿಕೊಳ್ಳುವುದರ’ ಹೊರತಾಗಿ ಯುನೆಸ್ಕೋಗೆ ಇವತ್ತಿನವರೆಗೂ ಯುದ್ಧ-ಪೀಡಿತ ಸಿರಿಯಾ, ಇರಾಕ್, ಅಫಘಾನಿಸ್ತಾನಗಳಲ್ಲಿ ನಾಶವಾದ ಪಾರಂಪರಿಕ ತಾಣಗಳನ್ನು ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ. 
ಮನವಿಗಳು, ಖಂಡನೆಗಳು, ಆರ್ಥಿಕ ನಿರ್ಬಂಧಗಳು, ರಾಜತಾಂತ್ರಿಕತೆ ಮತ್ತು ಮುಗಿಯದ ಚರ್ಚೆಗಳು ಇವುಗಳಲ್ಲೇ ವಿಶ್ವಸಂಸ್ಥೆಯ ಅಮೂಲ್ಯ ಸಮಯ ವ್ಯರ್ಥವಾಗುತ್ತದೆ. ಇನ್ನು ರಿಪೋರ್ಟುಗಳದ್ದು ಮತ್ತೊಂದು ಕಥೆ. ಕೋಟ್ಯಂತರ ಡಾಲರುಗಳು ವ್ಯಯವಾಗುತ್ತಿರೋದೇ ವಿಶ್ವಸಂಸ್ಥೆಯ ಬೇರೆ ಬೇರೆ ಅಂಗಗಳಿಂದ ಬರುವ, ಯಾರೂ ಓದದ, ಕಾರ್ಯರೂಪಕ್ಕೆ ಬರದ ವರದಿಗಳಿಂದ.
ಕಾಶ್ಮೀರದಲ್ಲಿ ಭಾರತದ ಮಿಲಿಟರಿ ಕಾರ್ಯಾಚರಣೆ ಖಂಡಿಸಿ ಮಾನವ ಹಕ್ಕುಗಳ ಆಯೋಗ ೨೦೧೮ರಲ್ಲಿ ಒಂದು ರಿಪೋರ್ಟನ್ನು ತಯಾರಿಸಿತು. ಆಯೋಗ ಜಮ್ಮು-ಕಾಶ್ಮೀರಕ್ಕೆ ಹೋಗಿ ಅಲ್ಲಿನ ಪರಿಸ್ಥಿತಿ ಕಣ್ಣಾರೆ ನೋಡಲಿಲ್ಲ. ಎಲ್ಲಿಯೋ ಕುಳಿತು, ಯಾವುದೋ ಎನ್‌ಜಿಓ ಹೇಳಿದ್ದನ್ನೆಲ್ಲ ಬರೆದ ಅದರಲ್ಲಿ ಇರುವುದೆಲ್ಲ ಸೈನ್ಯದ ಮತ್ತು ಸರ್ಕಾರದ ಮೇಲೆ ಸುಳ್ಳು ಆರೋಪಗಳೇ. ಅದರ ಬಗ್ಗೆ ಸರಿಯಾದ ವಿಶ್ಲೇಷಣೆ ಬಂದದ್ದು ವಿಶ್ವಸಂಸ್ಥೆಯಲ್ಲಿ ಭಾರತದ ಖಾಯಂ ಪ್ರತಿನಿಧಿಯಾಗಿರುವ ಸಯ್ಯದ್ ಅಕ್ಬರುದ್ಧಿನ್‌ರವರಿಂದ, "ವಿಶ್ವಸಂಸ್ಥೆ, ಯಾರೂ ಕೇಳದ, ಯಾರೂ ಸ್ವಾಗತಿಸದ, ಯಾರೂ ಸಪೋರ್ಟ್ ಮಾಡದ ಮತ್ತು ಯಾರೂ ಕಾರ್ಯರೂಪಕ್ಕೆ ತರದ ರಿಪೋರ್ಟ್ ತಯಾರಿಸಿದೆ" ಎಂದು. ಅಂಥದ್ದೆ ಮತ್ತೊಂದು ರಿಪೋರ್ಟು ಭಾರತದ ನಿರುದ್ಯೋಗದ ಬಗ್ಗೆ ೨೦೧೮ರಲ್ಲಿ ಬಂತು. ಅದರ ಪ್ರಕಾರ ದಕ್ಷಿಣ ಏಷ್ಯಾದಲ್ಲಿನ ತೀವ್ರ ಆಹಾರ ಅಭದ್ರತೆಗೆ ಕಾರಣ ೪೫ ವರ್ಷಗಳಲ್ಲೇ ಭಾರತದ ನಿರುದ್ಯೋಗ ಸಮಸ್ಯೆ ಅತಿ ಹೆಚ್ಚು ಆ ವರ್ಷ ಕಂಡುಬಂದದ್ದು. ಆದರೆ ಒಂದು ವರ್ಷದ ನಂತರ ಅಂದರೆ ೨೦೧೯ರಲ್ಲಿ, ಇದೇ ವಿಶ್ವಸಂಸ್ಥೆಯಡಿ ಗ್ಲೋಬಲ್ ಮಲ್ಟಿಡೈಮೆನ್ಶನಲ್ ಪವರ್ಟಿ ಇಂಡೆಕ್ಸ್ ನಡೆಸಿದ ಸರ್ವೇ ಪ್ರಕಾರ ಕಳೆದ ಹತ್ತು ವರ್ಷಗಳಲ್ಲಿ ಭಾರತದ ೨೭.೧ ಕೋಟಿ ಬಡವರು ಬಡತನ ರೇಖೆಗಿಂತ ಮೇಲೆ ಬಂದಿದ್ದಾರೆ. ಅಂದರೆ ಬಡತನದ ಪ್ರಮಾಣ ಹತ್ತು ವರ್ಷಗಳಲ್ಲಿ ೫೫%ರಿಂದ ೨೮%ಕ್ಕೆ ಇಳಿದಿದೆ. ಅವರದ್ದೇ ರಿಪೋರ್ಟುಗಳು, ಅದರಲ್ಲೇ ವಿರೋಧಾಭಾಸಗಳು.
ಇನ್ನು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಉಲ್ಲಂಘನೆಯ ಕಥೆಗಳು ಬೇಕಾದಷ್ಟು. ರವಾಂಡಾದಲ್ಲಿ ೧೯೯೪ರಲ್ಲಿ ೧೦೦ ದಿನಗಳ ಕಾಲ ನಡೆದ ಟುಟ್ಸಿ ಜನಾಂಗದ ೮ ಲಕ್ಷ ಅಮಾಯಕರ ಮಾರಣಹೋಮ ತನ್ನ ಬೇಜವಾಬ್ದಾರಿತನದಿಂದ ಆದದ್ದು ಎಂದು ಭದ್ರತಾ ಮಂಡಳಿ ಒಪ್ಪಿಕೊಂಡಿದೆ. ಅಲ್ಲಿನ ಹುಟು ಜನಾಂಗದ ಸರ್ಕಾರ ಇಂಥದ್ದೊಂದು ನರಮೇಧ ಮಾಡುವ ಸೂಚನೆಯನ್ನು ವಿಶ್ವಸಂಸ್ಥೆಯ ಆ ದೇಶದ ಕಮಾಂಡರ್ ಮೊದಲೇ ಕೊಟ್ಟರು. ಅಂಥ ಸ್ಥಿತಿಯಲ್ಲೂ ಸುಮಾರು ೨,೫೦೦ ಶಾಂತಿದೂತರನ್ನು ವಿಶ್ವಸಂಸ್ಥೆ ಹಿಂಪಡೆಯಿತು. ಅದರ ಪರಿಣಾಮ ಈ ಮಾರಣಹೋಮ. ಹೈಟಿಯಲ್ಲಿ ಭೂಕಂಪಕ್ಕೆ ತುತ್ತಾದ ಜನರಿಗೆ ನೆರವಾಗಲು ಹೋದ ವಿಶ್ವಸಂಸ್ಥೆಯ ನೇಪಾಳದ ಶಾಂತಿಪಾಲಕರಿಂದ ಅಲ್ಲಿ ಭೀಕರವಾದ ಕಾಲರಾ ಹರಡಿತು. ಸರಿಯಾದ ಚರಂಡಿ ವ್ಯವಸ್ಥೆ ಮಾಡದೆ ಶಾಂತಿಪಾಲಕರ ಮಲಮೂತ್ರಗಳು ಅಲ್ಲಿನ ಅತಿ ದೊಡ್ಡ ನದಿ ಸೇರಿ ೭ ಲಕ್ಷ ಜನಕ್ಕೆ ರೋಗ ತಗುಲಿದರೆ, ಎಂಟು ಸಾವಿರ ಜನ ಸಾವನ್ನಪ್ಪಿದರು. ಆದರೆ ವಿಶ್ವಸಂಸ್ಥೆ ಈ ದುರಂತಕ್ಕೆ ತಾನೇ ಕಾರಣ ಎಂದು ಒಪ್ಪಿಕೊಳ್ಳುವ ಸೌಜನ್ಯವೂ ತೋರದೆ, ಕೇಸು ಹಾಕಲು ಬಂದರೆ ತನ್ನನ್ನು ಯಾವ ಕೋರ್ಟುಗಳೂ ಮುಟ್ಟಲಾರವು ಎಂದು ಘೋಷಿಸಿತು.
ಶ್ರೀಲಂಕಾದಲ್ಲಿ ಒಂದು ಲಕ್ಷ ಜನರ ಸಾವಿಗೆ ಕಾರಣವಾದ ೨೬ ವರ್ಷಗಳ ರಕ್ತಸಿಕ್ತ ಆಂತರಿಕ ದಂಗೆಯನ್ನು ತಡೆಯಲು ವಿಶ್ವಸಂಸ್ಥೆಯ ಹಿರಿಯ ಅಧಿಕಾರಿಗಳು ಆಸಕ್ತಿ ವಹಿಸಲೇ ಇಲ್ಲ ಎನ್ನುತ್ತದೆ ಅವರದೇ ವರದಿ. ಅದರ ಪರಿಣಾಮ ಎಲ್ಲರ ಮುಂದೇ ಇದೆ. ಎಲ್ಲಿಯ ಮಾನವ ಹಕ್ಕುಗಳು? ಅದಕ್ಯಾಕೆ ಒಂದು ಆಯೋಗ? ಸೌದಿ ಅರೇಬಿಯಾ, ಕ್ಯೂಬಾ, ಈಜಿಪ್ಟ್, ಚೀನಾ, ಸೊಮಾಲಿಯಾ, ಸುಡಾನ್, ವೆನೆಜ಼ುವೆಲಾ ಈ ಆಯೋಗದ ಸದಸ್ಯರಾಗಿಯೂ ತಮ್ಮ ದೇಶಗಳಲ್ಲಿ ಹಿಂಸೆಗೆ ಹೆಸರಾದವರು. ಆಫ್ರಿಕಾ, ಬಾಂಗ್ಲಾದೇಶ ಮತ್ತು ಮಯನ್ಮಾರ್ ನಾಗರಿಕರು, ಮಧ್ಯಪ್ರಾಚ್ಯದ ಮಹಿಳೆಯರು, ಚೀನಾದಲ್ಲಿ ಮರುಶಿಕ್ಷಣ ಶಿಬಿರಗಳಿಗೆ ತಳ್ಳಲ್ಪಟ್ಟಿರುವ ಮುಸ್ಲಿಮರು ಮತ್ತು ಕ್ರಿಶ್ಚಿಯನ್ನರು, ಯುದ್ಧಗಳಲ್ಲಿ ಬಂದೂಕು ಹಿಡಿಯುವ ಮತ್ತು ಸೂಸೈಡ್ ಬಾಂಬರ್‌ಗಳಾಗುವ ಮಕ್ಕಳು, ಇವರೆಲ್ಲರ ಜೀವ ಉಳಿಸಲು, ಜೀವನ ಮರಳಿ ಕೊಡಲು ವಿಶ್ವಸಂಸ್ಥೆಗೆ ಸಾಧ್ಯವಾಗಿದೆಯೇ? ಕಾಶ್ಮೀರಿ ಹಿಂದೂಗಳ ನಿರಾಶ್ರಿತ ಪರಿಸ್ಥಿತಿಯ ಬಗ್ಗೆ, ಅವರು ಅನುಭವಿಸಿದ ಸಾವು-ನೋವುಗಳ ಬಗ್ಗೆ ಆಗೀಗ ಮರೆತುಹೋದ ಯಾವುದೋ ವಿಷಯವನ್ನು ಮೆಲುಕು ಹಾಕುವಂತೆ ’ಅತಿ ಪ್ರಬಲವಾದ ಶಬ್ದಗಳಿಂದ ಖಂಡಿಸುವುದನ್ನು’ ವಿಶ್ವಸಂಸ್ಥೆ ಮರೆಯುವುದಿಲ್ಲ.
ಪ್ರಪಂಚವೆಲ್ಲ ಮುಂದೆ ಹೋದರೂ ವಿಶ್ವಸಂಸ್ಥೆ ಇನ್ನೂ ೩೦ ವರ್ಷಗಳ ಹಿಂದಿನ ಕಾಲದ ಸುಳಿಯಲ್ಲಿ ಸಿಲುಕಿಕೊಂಡಿದೆ ಎನ್ನುತ್ತಾರೆ ಅಲ್ಲಿನ ಅಮೇರಿಕಾ ರಾಯಭಾರಿಯಾಗಿದ್ದ ಜಾನ್ ಬೋಲ್ಟನ್. ಅಲ್ಲಿನ ರಾಜತಾಂತ್ರಿಕರು ತುಕ್ಕು ಹಿಡಿದ ನಿಯಮಗಳನ್ನೇ ಪಠಿಸುತ್ತ, ಮೀಟಿಂಗ್‌ಗಳ ಮೇಲೆ ಮೀಟಿಂಗ್‌ಗಳನ್ನು ಮಾಡುತ್ತ ಹೊರಗೇನಾಗುತ್ತಿದೆ ಎಂದು ನೋಡುವುದಕ್ಕೂ ಸಂಯಮ, ಸಮಯ ಇಲ್ಲದೆ ಕೂತ ಹಾಗಿದೆ.
ವಿಶ್ವಸಂಸ್ಥೆಯ ಭದ್ರತಾ ಮಂಡಳಿಗೆ ಕಾಯಂ ಸದಸ್ಯತ್ವವನ್ನು ಭಾರತಕ್ಕೆ ಕೊಡಿಸಲು ರಷ್ಯಾ ಪಟ್ಟ ಪ್ರಯತ್ನ ಅಷ್ಟಿಷ್ಟಲ್ಲ. ಚೀನೀಯರಿಗೆ ಯಾವಾಗಲೂ ’ಚೀನಾ ಮೊದಲು.’ ಹಾಗೇ ಕಾಯಂ ಸದಸ್ಯತ್ವವನ್ನು ಚೀನಾಗೆ ದಾನ ಮಾಡಿದ ನೆಹರೂಗೆ ಕೂಡ ಆಗ ’ಚೀನಾ ಮೊದಲು.’ ಅದೇ ಚೀನಾ, ಇಲ್ಲಿವರೆಗೂ ಭಾರತದ ಕಾಯಂ ಸದಸ್ಯತ್ವಕ್ಕೆ ಅಡ್ಡಿ ಮಾಡುತ್ತಲೇ ಬಂದಿದೆ. ಆದರೆ ಈಗ ಭಾರತಕ್ಕೇ ಅದರಲ್ಲಿ ಆಸಕ್ತಿ ಇಲ್ಲ. ಸುಷ್ಮಾ ಸ್ವರಾಜ್ ಹೇಳಿದಂತೆ ಭದ್ರತಾ ಮಂಡಳಿಯ ಪ್ರಾಮುಖ್ಯತೆ, ಪ್ರಭಾವ, ಗೌರವ ಮತ್ತು ಮೌಲ್ಯ ಕಡಿಮೆಯಾಗುತ್ತಾ ಬರುತ್ತಿದೆ.
ಇಲ್ಲಿಯವರೆಗೆ ಯಾವ ಯುದ್ಧವನ್ನೂ ವಿಶ್ವಸಂಸ್ಥೆ ತಡೆದಿಲ್ಲ, ಯಾವ ಸರ್ವಾಧಿಕಾರಿಯನ್ನೂ ಮಣಿಸಲು ಆಗಿಲ್ಲ, ಮಾನವ ಹಕ್ಕುಗಳನ್ನು ಕಾಪಾಡಲೂ ಆಗಿಲ್ಲ. ಇನ್ನೂ ಹೀಗೇ ಮುಂದುವರಿದರೆ, ಮೊದಲ ಮಹಾಯುದ್ಧದ ನಂತರ ಶಾಂತಿ ಕಾಪಾಡಲು ಹುಟ್ಟಿ ಕೊನೆಗೆ ಸೋತು, ಎರಡನೇ ಮಾಹಾಯುದ್ಧದ ಆರಂಭದಲ್ಲಿ ಅಂತ್ಯ ಕಂಡ ಲೀಗ್ ಆಫ್ ನೇಷನ್ಸ್ ಕಥೆ ವಿಶ್ವಸಂಸ್ಥೆಗೂ ಬರಬಹುದು. ಅಷ್ಟು ದೊಡ್ಡ ಸಂಸ್ಥೆಯ ಅಧಿಕಾರಿಗಳ ಅದಕ್ಷತೆಯ ಮುಂದೆ ಸಣ್ಣ ಸಣ್ಣ ಎನ್‌ಜಿಓಗಳೇ ಪರವಾಗಿಲ್ಲ. ತಮ್ಮ ಸೀಮಿತ ವ್ಯಾಪ್ತಿಯಲ್ಲಿ ಅಚ್ಚುಕಟ್ಟಾಗಿ ಕೆಲಸ ಮಾಡುತ್ತಿವೆ. ಆದರೆ ವಿಶ್ವಸಂಸ್ಥೆ ಮಾತ್ರ ವಾಸ್ತವತೆಯಿಂದ ದೂರ ಉಳಿದು ಅದೇ ’ಖಂಡಿಸುವ’ ಖಾಲಿ ಪದಗಳ ಪದರದಡಿಯಲ್ಲಿ ಬರೀ ಪಳೆಯುಳಿಕೆಯಾಗಿ ಉಳಿಯುವ ಲಕ್ಷಣಗಳೇ ಕಾಣಿಸುತ್ತಿದೆ. ಅದರ ಅಗತ್ಯ ಈಗಿನ ಜಗತ್ತಿಗೆ ಇದೆಯೇ? ಇಲ್ಲವೆಂದೇ ಅನಿಸುತ್ತಿದೆ.

(Published in Udayavani, 21st Jan. 2020)