ಕೊನೆಯೇ ಇಲ್ಲದ, ಯಾವುದೋ ಹಟಕ್ಕೆ ಬಿದ್ದವರ ತರ ಅಪ್ಪಳಿಸುವ ಅಲೆಗಳು, ಎಷ್ಟು ನೋಡಿದರೂ ಸಾಕಾಗದ ಮುಳುಗುವ ಸೂರ್ಯನ ಬದಲಾಗುವ ಬಣ್ಣಗಳು, ಆ ಕಡಲತೀರಗಳಲ್ಲಿ ಆಧುನಿಕತೆಯ ಯಾವ ಸೆಳೆತಗಳು ಇಲ್ಲದಿದ್ದರೂ ಜನ ಮತ್ತೆ ಮತ್ತೆ ಬರುತ್ತಾರೆ. ಅವರ ಓಡುತ್ತಿರುವ ಮನಸ್ಸನ್ನು ಒಮ್ಮೆ ಹಿಡಿದು ನಿಲ್ಲಿಸುವ, ಸುಮ್ಮನೆ ಕೂರಿಸುವ ಆಯಸ್ಕಾಂತ ಆ ನೀರಿಗೆ, ಮರಳಿಗೆ, ಸೂರ್ಯನಿಗೆ ಇದೆ.
ಅದೇ ಕಡಲತೀರಗಳಲ್ಲಿ ನಿಮ್ಮ ಕಾಲಿಗೆ ಕಪ್ಪು ಜಿಡ್ಡು ಮೆತ್ತಿಕೊಂಡರೆ? ಮರಳಿನ ಮೇಲೆ ಕೂರಲು ಹೋದಾಗ ಕಸದ ರಾಶಿ ಕಂಡರೆ? ನೀರಿಗಿಳಿದಾಗ ಪ್ಲಾಸ್ಟಿಕ್ ಬಾಟಲಿಗಳು ತೇಲಿ ಬಂದು ನಿಮಗೆ ಬಡಿದರೆ? ಒಮ್ಮೆ ನೀಳವಾದ ಉಸಿರು ತೆಗೆದುಕೊಂಡಾಗ ಕಸದ ಕೆಟ್ಟ ವಾಸನೆ ಒಳಗೆ ಹೋದರೆ? ಇದು ಬರೀ ನಮ್ಮ ದೇಶದ ಬೀಚ್‌ಗಳ ಕಥೆ ಎಂದು ಎಣಿಸಬೇಡಿ. ನಾವು ಮನುಷ್ಯರು ಕಾಲಿಟ್ಟಲ್ಲೆಲ್ಲ ಹೀಗೇ.
’ಜಗತ್ತಿನ ಅತ್ಯುತ್ತಮ ಬೀಚ್’ ಎಂದು ಒಂದು ಕಾಲದಲ್ಲಿ ಹೆಗ್ಗಳಿಕೆ ಪಡೆದ ಫಿಲಿಪೈನ್ಸ್‌ನ ಬೋರಾಕೆಯನ್ನು ಕೊನೆಗೊಂದು ದಿನ ಆ ರಾಷ್ಟ್ರದ ಅಧ್ಯಕ್ಷರೇ ’ಕೊಚ್ಚೆಗುಂಡಿ’ ಎಂದು ಕರೆದು ತಾತ್ಕಾಲಿಕವಾಗಿ ಮುಚ್ಚಲು ಆದೇಶ ನೀಡಿದರು. ನೇರವಾಗಿ ಸಮುದ್ರ ಸೇರುತ್ತಿದ್ದ ಕೊಳಚೆ, ಪ್ರವಾಸಿಗರು ಎಸೆದುಹೋದ ಪ್ಲಾಸ್ಟಿಕ್ ರಾಶಿ, ಜಗಮಗಿಸುವ ಲೈಟ್‌ಗಳು, ಎಲ್ಲೆಲ್ಲೂ ತುಂಬಿಕೊಂಡಿದ್ದ ಕಸೀನೋಗಳು, ಸೇದಿ ಎಸೆದ ಸಿಗರೇಟ್, ಕುಡಿದ ಬಾಟಲಿಗಳು ಎಲ್ಲವನ್ನು ಅಲ್ಲಿನ ಆಡಳಿತ ಕೊನೆಗೊಂದು ದಿನ ನಿಲ್ಲಿಸಿತು. ಸುಮಾರು ಹತ್ತು ಸಾವಿರ ಕೆಜಿ ಪ್ಲಾಸ್ಟಿಕ್ ಕಸವನ್ನು ಸ್ವಚ್ಚಮಾಡಿ, ಕುಡಿತ, ಮೋಜು, ಪ್ರಾಣಿಗಳಿಗೆ ತೊಂದರೆಯಾಗುವ ಅನಗತ್ಯ ಲೈಟ್‌ಗಳನ್ನೆಲ್ಲ ನಿಷೇಧಿಸಿದರು.
ಎಲ್ಲಿ ನೋಡಿದರೂ ಕಸದಿಂದ ತುಂಬಿ ತುಳುಕುತ್ತಿದ್ದ ಥಾಯ್‌ಲ್ಯಾಂಡ್‌ನ ಪ್ರಸಿದ್ಧ ಮಾಯಾ ಬೀಚ್‌ನ ಅದ್ಭುತ ಪರಿಸರ ಹಾಳಾಗಿದ್ದೇ ಅತಿ ಪ್ರವಾಸೋದ್ಯಮದಿಂದ. ಸಾವಿರಾರು ವರ್ಷಗಳಿಂದ ಸ್ವಲ್ಪ ಸ್ವಲ್ಪವೇ ಹರಡಿ ರೂಪುಗೊಂಡ ಅಲ್ಲಿನ ಸುಮಾರು ೮೦ ಪ್ರತಿಶತ ಹವಳದ ದಂಡೆಗಳು ನಾಶವಾದವು. ಈಗ ಆ ಬೀಚನ್ನು ಅನಿರ್ದಿಷ್ಟ ಕಾಲದವರೆಗೆ, ಅಲ್ಲಿನ ಪರಿಸರ ಸರಿಯಾಗುವವರೆಗೆ ಮುಚ್ಚಲಾಗಿದೆ. ಆ ಕಡಲತೀರವನ್ನು ಮುಚ್ಚಿ ಮೂರು ವರ್ಷಗಳಾದ ಮೇಲೆ ಈಗ ಅಲ್ಲಿನ ಸಮುದ್ರಕ್ಕೆ ತಿಮಿಂಗಿಲಗಳು, ಡುಗಾಂಗ್ ಎನ್ನುವ ಅಪರೂಪದ ಕಡಲ ಸಸ್ತನಿಗಳು, ಆಮೆಗಳು ವಾಪಾಸ್ ಬಂದಿವೆ. ಈ ವರ್ಷದಿಂದ ಅಲ್ಲಿನ ಸರ್ಕಾರ, ಪ್ರಾಣಿ-ಪರಿಸರ ಚೇತರಿಸಿಕೊಳ್ಳಲು ಪ್ರತಿ ವರ್ಷ ಮೂರು ತಿಂಗಳು ಅಭಯಾರಣ್ಯಗಳನ್ನು ಮುಚ್ಚಲು ಆದೇಶ ನೀಡಿದೆ.
ಯಾವಾಗ, ಎಲ್ಲಿ ನೋಡಿದರೂ ಜನಜಂಗುಳಿ, ಕಸದ ರಾಶಿ, ಸ್ಥಳೀಯ ಸಂಸ್ಕೃತಿಯ ಬಗ್ಗೆ ಪ್ರವಾಸಿಗರು ತೋರಿಸುವ ಅಗೌರವ ಇದೆಲ್ಲದರಿಂದ ಬೇಸತ್ತ ಹವಾಯಿ, ಐಸ್‌ಲ್ಯಾಂಡ್, ಬಾಲಿಗಳಂತಹ ಪ್ರಸಿದ್ಧ ತಾಣಗಳ ಸ್ಥಳೀಯರು, ಕೊರೋನಾ ಹಾವಳಿ ಕಮ್ಮಿಯಾದ ಮೇಲೆ ಪುನಃ ಪ್ರವಾಸಿಗರು ಬರುವುದರ ವಿರುದ್ಧ ದನಿಯೆತ್ತಿದ್ದಾರೆ. ಬಾಲಿಯ ಬಹುಪಾಲು ಆದಾಯ ಬರುವುದೇ ಅಲ್ಲಿಗೆ ಪ್ರತಿ ವರ್ಷ ಬರುವ ಸುಮಾರು ಐವತ್ತು ಲಕ್ಷ ಪ್ರವಾಸಿಗರಿಂದ. ಆದರೆ ಅಲ್ಲಿನವರು ತಮ್ಮ ಜೀವನೋಪಾಯವನ್ನೇ ತಿರಸ್ಕರಿಸುವ ಮಟ್ಟಕ್ಕೆ ಬಂದಿದ್ದಾರೆಂದರೆ ಅವರಿಗೆ ಅತಿ ಪ್ರವಾಸೋದ್ಯಮದಿಂದ, ಪ್ರವಾಸಿಗರ ಬೇಜವಾಬ್ದಾರಿತನದಿಂದ ಆಗುವ ಕಿರಿಕಿರಿಗಳು ಎಷ್ಟಿರಬಹುದು?
ದೂರದೂರದವರೆಗೆ ಯಾವ ನಾಡೂ ಕಾಣದ ಅಟ್ಲಾಂಟಿಕ್ ಸಮುದ್ರದ ಮಧ್ಯೆ ಇರುವ ಸೇಂಟ್ ಹೆಲೆನಾ ದ್ವೀಪದ ಮರಳಿನಲ್ಲಿ ಸಾವಿರಾರು ಮೈಲಿ ದೂರದ ಏಷ್ಯಾದಿಂದ ತೇಲಿ ಬಂದ ಪ್ಲಾಸ್ಟಿಕ್ ಬಾಟಲಿಗಳು ಸಿಕ್ಕವು. ಇನ್ನು ಇಲ್ಲೇ ನಮ್ಮ ಹತ್ತಿರದ ಕಾರವಾರದ ಅಲಿಗದ್ದಾ ಬೀಚ್‌ನಲ್ಲಿ ಸುಮಾರು ನಾಲ್ಕು ಟನ್ ಕಸವನ್ನು ೨೦೧೮ರಲ್ಲಿ ಸ್ಥಳೀಯರು ಸ್ವಚ್ಚಗೊಳಿಸಿದರೆ, ಮುಂಬೈನ ವರ್ಸೋವಾ ಬೀಚ್‌ನಲ್ಲಿ ಸುಮಾರು ಎರಡೂವರೆ ವರ್ಷ ಪ್ರತಿ ಭಾನುವಾರ ಸ್ವಸಹಾಯಕರು ಒಟ್ಟುಗೂಡಿ ೧೨,೦೦೦ ಟನ್ ಕಸವನ್ನು ತೆಗೆದರು. ಸುಮಾರು ಹತ್ತು ಸಾವಿರ ಸ್ವಯಂಸೇವಕರು ೨೦೧೯ರಲ್ಲಿ ಒಟ್ಟಾಗಿ ಪುರಿ ಕಡಲತೀರವನ್ನು ಸ್ವಚ್ಚಗೊಳಿಸಿದ್ದು ಇಲ್ಲಿವರೆಗೆ ಜಗತ್ತಿನ ಅತಿ ದೊಡ್ಡ ಬೀಚ್ ಸ್ವಚ್ಚತಾ ಆಂದೋಲನ ಅನ್ನಿಸಿಕೊಂಡಿತು ಮೊನ್ನೆ ಮೊನ್ನೆ ಕೊರೋನಾ ಬಂದ ಮೇಲೆ ಮುಂಬೈನ ಜುಹು ಬೀಚ್ ಮತ್ತು ಆಂಧ್ರದ ರಿಶಿಕೊಂಡ ಬೀಚ್‌ಗಳಲ್ಲಿ ರಾಶಿ ರಾಶಿ ಮೆಡಿಕಲ್ ತ್ಯಾಜ್ಯಗಳಾದ ಮಾಸ್ಕ್‌ಗಳು, ಪಿಪಿಇ ಕಿಟ್‌ಗಳು, ಗ್ಲೌಸ್‌ಗಳು ಸಿಕ್ಕವು. ಕೊಡುತ್ತಾ ಹೋದರೆ ಎಷ್ಟು ಉದಾಹರಣೆಗಳನ್ನೂ ಕೊಡಬಹುದು, ಅಸಂಖ್ಯ ಪ್ರವಾಸಿಗರ ಹೊಣೆಗೇಡಿತನಕ್ಕೆ, ಕೆಲವೇ ಕೆಲವರ ಸಾಮಾಜಿಕ ಕಳಕಳಿಗೆ.
ಪ್ರವಾಸಿಗರ ಸಂಖ್ಯೆ ಜಾಸ್ತಿಯಾಗುತ್ತಾ ಹೋದ ಹಾಗೆ ರಸ್ತೆ ಅಪಘಾತಗಳು, ದುರ್ನಡತೆ, ಎಲ್ಲೆಂದರಲ್ಲಿ ಕಸ ಹಾಕುವುದು ಮತ್ತು ಅತಿ ಜನಜಂಗುಳಿಯಿಂದ ಬೇಸತ್ತ ನ್ಯೂಜಿಲ್ಯಾಂಡ್‌ನ ಕೆಲವು ಸಂಸ್ಥೆಗಳು ಬರುವ ಪ್ರವಾಸಿಗರಿಗಾಗಿ ’ಟಿಯಾಕಿ ಪ್ರಾಮಿಸ್’ ಎನ್ನುವ ಪ್ರತಿಜ್ಞೆಯನ್ನು ಸೃಷ್ಟಿಸಿದರು. ಸ್ಥಳೀಯ ಭಾಷೆಯಲ್ಲಿ ’ಟಿಯಾಕಿ’ ಅಂದರೆ ಜನ ಮತ್ತು ಪರಿಸರದ ಕಡೆ ನಮ್ಮ ಕಾಳಜಿ. ಅಲ್ಲಿ ತಿರುಗಾಡುವ ಪ್ರತಿಯೊಬ್ಬರೂ ತಮ್ಮ ಯಾವುದೇ ಕುರುಹು ಬಿಟ್ಟುಹೋಗದೆ ಅಲ್ಲಿನ ನೆಲ, ಸಮುದ್ರ ಮತ್ತು ಪರಿಸರದ ಬಗ್ಗೆ ಕಾಳಜಿ ವಹಿಸುವ, ಸುರಕ್ಷಿತ ಪ್ರಯಾಣ ಮಾಡುವ, ಎಲ್ಲರ ಬಗ್ಗೆ ಕಾಳಜಿ ತೋರಿಸುವ, ಅಲ್ಲಿನ ಸಂಸ್ಕೃತಿಯನ್ನು ಗೌರವಿಸುವ ವಚನ ಕೊಡಬಹುದು.
ಇನ್ನು ಪೆಸಿಫ಼ಿಕ್ ಸಮುದ್ರದಲ್ಲಿರುವ ’ಪಲಾವ್’ ಎನ್ನುವ ಪುಟ್ಟ ದ್ವೀಪಸಮೂಹಗಳ ರಾಷ್ಟ್ರ ತನ್ನ ಪರಿಸರದ ರಕ್ಷಣೆಗಾಗಿ ತನ್ನ ದೇಶದ ವಲಸೆ ಕಾನೂನನ್ನೇ ಬದಲಿಸಿದ ಮೊದಲ ದೇಶ. ಅದೂ ಅದರ ಪ್ರತಿಜ್ಞೆಯನ್ನು ಬರೆದವರು ಅಲ್ಲಿನ ಪುಟ್ಟ ಮಕ್ಕಳು. ’ನಿಮ್ಮ ದೇಶಕ್ಕೆ ಅತಿಥಿಯಾಗಿ ಬಂದು ಇಲ್ಲಿನ ಚೆಂದದ ದ್ವೀಪಗಳನ್ನು ಮತ್ತು ಸೂಕ್ಷ್ಮ ಪರಿಸರವನ್ನು ಕಾಪಾಡುವ, ಸ್ವಚ್ಚವಾಗಿರಿಸುವ, ನನಗೆ ಸೇರದಿದ್ದನ್ನು ತೊಗೊಳ್ಳದಿರುವ, ತೊಂದರೆ ಕೊಡದಿರುವ, ಯಾವ ರೀತಿಯ ಹೆಜ್ಜೆಗುರುತುಗಳನ್ನೂ ಬಿಡದೆ ಕರುಣೆಯಿಂದ ನಡೆದುಕೊಳ್ಳುತ್ತೇನೆ’ ಎಂದು ಪ್ರವಾಸಿಗರು ವಚನ ಕೊಡಬೇಕು. ಆ ಪುಟ್ಟ ಮಕ್ಕಳಿಗಿರುವ ಕಾಳಜಿ ದೊಡ್ಡವರಾದ ನಮ್ಮಲ್ಲಿ ಕಾಣಲು ಸಾಧ್ಯವೇ ಇಲ್ಲವೇನೋ ಅನ್ನಿಸುತ್ತಿದೆ.
ಮೊನ್ನೆ ಕುಂದಾಪುರದ ಕೋಡಿ ಬೀಚ್‌ನಲ್ಲಿ, ಅದನ್ನು ಪ್ರತಿ ಭಾನುವಾರ ತಪಸ್ಸಿನಂತೆ ಸ್ವಚ್ಚಗೊಳಿಸುತ್ತಿರುವ ಸ್ವಯಂಸೇವಕರಿಂದಾಗಿ, ಕಡಲಾಮೆಯ ಮೊಟ್ಟೆಗಳು ಸಿಗುತ್ತಿರುವ, ಮರಿಗಳು ಪುನಃ ಕಡಲಿಗೆ ಮರಳುತ್ತಿರುವ ಸುದ್ದಿ ಓದಿ ಮನಸ್ಸಿಗೆ ಹಿತವಾಯಿತು. ಇತ್ತೀಚೆಗೆ ಅಪರೂಪಕ್ಕೆ ಮಾತ್ರ ಕಾಣಸಿಗುತ್ತಿರುವ ಡಾಲ್ಫಿನ್‌ಗಳು ಪುನಃ ಮೊದಲಿನಂತೆ ಕಾಣಬಹುದೇನೋ ಅನ್ನುವ ಆಸೆಯಾಯಿತು. ಥಾಯ್ಲ್ಯಾಂಡ್‌ನ ಬೀಚ್‌ಗಳಲ್ಲಿ ಅಪರೂಪದ ಲೆದರ್‌ಬ್ಯಾಕ್ ಆಮೆಗಳು ಪುನಃ ಮೊಟ್ಟೆಯಿಡುತ್ತಿವೆ. ಕೊರೋನಾ ಲಾಕ್‌ಡೌನ್ ಸಮಯದಲ್ಲಿ ಎಲ್ಲರ ವಾಟ್ಸಾಪ್‌ನಲ್ಲೂ ರೋಡಿಗಿಳಿದ ನವಿಲುಗಳು, ಚಿರತೆ, ಜಿಂಕೆ, ಪುನುಗು ಬೆಕ್ಕಿನ ತರದ ಅಪರೂಪದ ಪ್ರಾಣಿಗಳ ಫೋಟೋಗಳು ಹರಿದಾಡಿದವು. ಮನುಷ್ಯರಿಗೆ ಮಾತ್ರ ಅಲ್ಲ, ಪರಿಸರಕ್ಕೂ ಆದ ಗಾಯ ಮಾಗಲು ಸಮಯ ಬೇಕು ಅನ್ನುವುದನ್ನು ಲಾಕ್‌ಡೌನ್ ತೋರಿಸಿತು.
ನಮ್ಮ ಕರಾವಳಿಯಲ್ಲಿ ಸೂಕ್ಷ್ಮ ಪರಿಸರದ ಕುಂದಾಪುರ ಮತ್ತು ಕಾರವಾರ ಆಗಲೀ, ಮಲ್ಪೆ, ಪಡುಬಿದ್ರಿ, ಮಂಗಳೂರು ಬೀಚ್‌ಗಳಾಗಲೀ ಈಗಾಗಲೇ ಹತ್ತಿಪ್ಪತ್ತು ವರ್ಷಗಳ ಹಿಂದಿನ ತಮ್ಮ ಸೊಬಗು, ಶಾಂತಿ ಕಳೆದುಕೊಂಡಿವೆ. ಇನ್ನು ಪ್ಲಾಸ್ಟಿಕ್ ಮತ್ತಿತರ ಕಸದ ಹಾವಳಿ ಅತಿಯಾದರೆ ಇಲ್ಲಿನ ಸೂಕ್ಷ್ಮಜೀವಿಗಳಿರುವ ಕರಾವಳಿ, ಕಡಲತೀರವನ್ನು ರಕ್ಷಿಸುತ್ತಿರುವ ಕಾಂಡ್ಲಾವನಗಳು, ಅಲ್ಲಿಗೆ ಬರುವ ಅಪರೂಪದ ಪಕ್ಷಿಗಳು ಮೊದಲು ಹೇರಳವಾಗಿ ಕಾಣಸಿಗುತ್ತಿದ್ದ ಗುಬ್ಬಚ್ಚಿ, ಕಾಗೆಗಳಂತೆ ಮಾಯವಾಗುವ ಸಂಭವವಿದೆ. ಪ್ಲಾಸ್ಟಿಕ್ ತುಂಡಾಗಿ ಕೊನೆಗೆ ಅತಿಸಣ್ಣ ಕಣಗಳಾದಾಗ ಅದರಷ್ಟು ಅಪಾಯಕಾರಿ ಸಮುದ್ರದ ಜೀವಿಗಳಿಗೆ ಇನ್ನೊಂದಿಲ್ಲ. ಇಂಡೋನೇಷಿಯಾದಲ್ಲಿ ಕಡಲತೀರಕ್ಕೆ ತೇಲಿ ಬಂದ ಸತ್ತ ತಿಮಿಂಗಿಲದ ಹೊಟ್ಟೆಯಲ್ಲಿ ಸುಮಾರು ಆರು ಕೆಜಿ ಪ್ಲಾಸ್ಟಿಕ್, ಬಾಟಲಿಗಳು, ಪಾದರಕ್ಷೆಗಳು, ಪ್ಲಾಸ್ಟಿಕ್ ಕಪ್‌ಗಳು ಸಿಕ್ಕವು. ಈಗಾಗಲೇ ನಾವು ಆರೋಗ್ಯಕ್ಕೆ ಒಳ್ಳೆಯದೆಂದು ಉಸಿರಾಡುವ ಸಮುದ್ರದ ಗಾಳಿಯಲ್ಲೇ ಪ್ಲಾಸ್ಟಿಕ್‌ನ ಕಣಗಳು ನಮ್ಮ ದೇಹ ಸೇರುತ್ತಿವೆ. ಇದೇ ಸಣ್ಣಕಣಗಳು ಮರಳಿನಲ್ಲಿ ಸೇರಿ ಅಲ್ಲಿನ ಉಷ್ಣತೆಯನ್ನು ಏರುಪೇರು ಮಾಡಿ ಕಡಲಾಮೆಗಳ ಮೊಟ್ಟೆಗಳಿಂದ ಹೊರಬರುವ ಮರಿಗಳ ಲಿಂಗವನ್ನೇ ಬದಲಿಸುತ್ತಿವೆ.
ಕಳೆದ ವರ್ಷ ನಮ್ಮ ದೇಶದ ಎಂಟು ಬೀಚ್‌ಗಳಿಗೆ ಸ್ವಚ್ಚ ಪರಿಸರ, ಸುರಕ್ಷತೆ, ಸರಿಯಾದ ಅನುಕೂಲತೆಗಳಿಗಾಗಿ ಅಂತರಾಷ್ಟ್ರೀಯ ಸಂಸ್ಥೆಯೊಂದು ಕೊಡುವ ’ಬ್ಲೂ ಫ್ಲಾಗ್’ ಮಾನ್ಯತೆ ಸಿಕ್ಕಿತು. ಅಷ್ಟು ಬೀಚ್‌ಗಳಿಗೆ ಒಂದೇ ಪ್ರಯತ್ನದಲ್ಲಿ ಆ ಮಾನ್ಯತೆ ಸಿಕ್ಕಿದ್ದು ಭಾರತಕ್ಕೆ ಮಾತ್ರ. ಅದೇ ಹುರುಪಿನಲ್ಲಿ ಮತ್ತಷ್ಟು ಕಡಲತೀರಗಳನ್ನು ’ಬ್ಲೂ ಫ್ಲಾಗ್’ಗೆ ಅಣಿಗೊಳಿಸುವ ಸಿದ್ಧತೆ ನಡೆಯುತ್ತಿದೆ. ನಮ್ಮ ಕರಾವಳಿಯ ಕಡೆ ಪ್ರವಾಸಿಗರನ್ನು ಮತ್ತಷ್ಟು ಸೆಳೆಯಬೇಕು, ಅದರಿಂದ ಸ್ಥಳೀಯ ಆರ್ಥಿಕತೆ ಖಂಡಿತ ಅಭಿವೃದ್ಧಿಯಾಗುತ್ತದೆ. ಅದಕ್ಕೋಸ್ಕರ ಕೇವಲ ಕಡಲತೀರದ ಸ್ವಚ್ಚತೆಯನ್ನು ಕಾಪಾಡಿ, ಪ್ರವಾಸಿಗರ ಸುರಕ್ಷತೆ ಮತ್ತು ಮೂಲಭೂತ ಸೌಕರ್ಯಗಳಿಗೆ ಒತ್ತು ಕೊಟ್ಟರೆ ಸಾಕು. ಯಾಕೆಂದರೆ ಕಡಲತೀರಕ್ಕೆ ಜನ ಬರುವುದೇ ಅಲ್ಲಿನ ಪ್ರಶಾಂತತೆಗೆ, ಎಲ್ಲೂ ಸಿಗದ ಅಗಾಧತೆಯ ಅನುಭೂತಿಗೆ, ಅದರಲ್ಲಿ ನಮ್ಮನ್ನೇ ನಾವು ಕಳೆದುಕೊಳ್ಳುವ ಆ ಕ್ಷಣಗಳಿಗೆ. ಆಂಧ್ರದ ಬೀಚ್ ಒಂದರಲ್ಲಿ ಮಾಡಿದ ಹಾಗೆ ಸಂಗೀತ ಕಾರಂಜಿ, ಗಾಜಿನ ಸೇತುವೆ, ಕಲಾ ಗ್ಯಾಲರಿ, ಲೇಸರ್ ಶೋಗಳಂತಹ ಮಾನವ ನಿರ್ಮಿತ ಆಕರ್ಷಣೆಗಳು ಅಮ್ಯೂಸ್‌ಮೆಂಟ್ ಪಾರ್ಕ್‌ಗಳಲ್ಲಿ ಸಲ್ಲಬಹುದು, ಬೀಚ್‌ಗಳಲ್ಲಿ ಅಲ್ಲ.
ಅಭಿವೃದ್ಧಿಯನ್ನು ಬರೀ ಆರ್ಥಿಕತೆಯ ಮಾನದಂಡದಲ್ಲಿ ಅಳೆಯುವುದರಿಂದಾಗಿ ಪ್ರತಿಯೊಂದು ಪ್ರವಾಸಿ ತಾಣವೂ ತನ್ನ ವಿಶಿಷ್ಠತೆ ಕಳೆದುಕೊಂಡು ಬರೀ ತಮ್ಮ ಯಾಂತ್ರಿಕ ಜೀವನದಿಂದ ಬೋರಾದ ಜನ ಕಾಲಹರಣ ಮಾಡಲು ಬರುವ ಜಾಗಗಳಾಗಿ ಉಳಿದಿವೆ. ಹಾಗೆ ನಿಜವಾದ ಆಸಕ್ತಿಯಿಲ್ಲದೆ ಬಂದ ಜನರೇ ಆ ಜಾಗದ ಮಹತ್ವ ತಿಳಿಯದೆ ಅಸಡ್ಡೆಯಿಂದ ವರ್ತಿಸುವುದು. ಇದು ಬೀಚ್‌ಗಳಲ್ಲಿ ಮಾತ್ರವಲ್ಲ, ಎಲ್ಲಾ ಪ್ರವಾಸಿ ತಾಣಗಳಲ್ಲೂ ಅವರು ನಡೆದುಕೊಳ್ಳುವ ರೀತಿ. ಆಶ್ಚರ್ಯದ ಸಂಗತಿಯೆಂದರೆ, ಬೇರೆ ದೇಶಗಳಿಗೆ ಹೋದರೆ ಅಲ್ಲಿ ಕಸ ಹಾಕಲು ಹಿಂಜರಿಯುವ ನಮ್ಮವರು, ಇಲ್ಲಿ ಕಷ್ಟಪಟ್ಟು ಯಾರೋ ಸ್ವಚ್ಚಪಡಿಸಿದ ಜಾಗದಲ್ಲಿ ಕೈಯಲ್ಲಿನ ಕಸ ಎಸೆದು ತಿರುಗಿ ನೋಡದೇ ಹೋಗುತ್ತಾರೆ.
ಕರ್ನಾಟಕ ಸರ್ಕಾರ ಕರಾವಳಿ ಪ್ರವಾಸೋದ್ಯಮ ಬೆಳವಣಿಗೆಗೆ ’ವಿಷನ್ ಗ್ರೂಪ್’ ಸೃಷ್ಟಿಸುತ್ತಿರುವುದು ಒಳ್ಳೆಯದೇ. ಅದರಲ್ಲಿ ಪ್ರವಾಸಿಗರಿಗೆ ಬೇಕಾದ ಹೊಸ ಆಕರ್ಷಣೆಗಳು, ಆರ್ಥಿಕ ಮತ್ತು ಔದ್ಯಮಿಕ ಬೆಳವಣಿಗೆಗಳ ಜತೆಗೆ ಬರುವ ಪ್ರವಾಸಿಗರಿಂದ ಸ್ಥಳೀಯ ಜನರಿಗೆ, ಪರಿಸರಕ್ಕೆ ಯಾವುದೇ ತೊಂದರೆ ಆಗದಂತೆ ನಿಯಮಗಳನ್ನು ರೂಪಿಸುವುದೂ ಅತಿ ಅವಶ್ಯಕ. ಬೇರೆ ದೇಶಗಳಲ್ಲಿ ಇಲ್ಲಿವರೆಗೆ ಅತಿ ಪ್ರವಾಸೋದ್ಯಮದಿಂದ ಆಗಿರುವ ಅನಾಹುತಗಳನ್ನು ನೋಡಿಯಾದರೂ ಇಲ್ಲಿನ ಪ್ರವಾಸಿ ತಾಣಗಳನ್ನು ಬರೀ ’ಅಭಿವೃದ್ಧಿ’ಗೊಳಿಸದೆ, ಅವುಗಳ ನೈಸರ್ಗಿಕತೆಯನ್ನು, ಸ್ವಚ್ಚತೆಯನ್ನು ಕಾಪಾಡುವಂತಹ ಶಿಸ್ತುಬದ್ಧ ಯೋಜನೆ ತಯಾರಿಸುವುದು ಅತಿ ಅಗತ್ಯ. ನಾವು ಹೋದಲ್ಲೆಲ್ಲ ಪರಿಸರಕ್ಕೆ, ಅಲ್ಲಿನ ಜೀವಿಗಳಿಗೆ ತೊಂದರೆ ಮಾಡಿದರೆ, ಸ್ಥಳೀಯ ಸಂಸ್ಕೃತಿಯನ್ನು ಅಗೌರವಿಸಿದರೆ ನಮ್ಮ ಆತಿಥ್ಯಕ್ಕೆ ಮುಂದೆ ಯಾವ ಬಾಗಿಲೂ ತೆರೆಯಲಾರದು.
0 comments:
Post a Comment