Pages

Subscribe:

Ads 468x60px

Wednesday, June 7, 2017

ಶಾಂತಿಮಂತ್ರ ಬರೀ ನಮಗೇಕೆ?

ಅದು ಆಗಸ್ಟ್ 1914. ಒಂದು ಕೊಲೆಯ ಕಿಡಿ ಹೊತ್ತಿ ಉರಿದು ಇಡೀ ವಿಶ್ವವನ್ನೇ ಸುಡುವ ಮೊದಲನೇ ವಿಶ್ವಯುದ್ಧಕ್ಕೆ ನಾಂದಿ ಹಾಡಿದ ಸಮಯ. ಆಗ ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ಹೊರಟಿದ್ದ ಗಾಂಧೀಜಿ ಸುದ್ದಿ ತಿಳಿದ ತಕ್ಷಣವೇ ಈ ಯುದ್ಧದಲ್ಲಿ ಬ್ರಿಟೀಷರ ಬೆಂಬಲಕ್ಕೆ ನಿಲ್ಲುವ ನಿರ್ಧಾರಕ್ಕೆ ಬರುತ್ತಾರೆ. ಇಂಗ್ಲೆಂಡ್ ತಲುಪಿದ ಕೂಡಲೆ ಗಾಯಗೊಂಡ ಸೈನಿಕರಿಗೆ ವೈದ್ಯಕೀಯ ನೆರವು ನೀಡಲು ಮುಂದಾಗುತ್ತಾರೆ.
ಅಲ್ಲಿಂದ ಆರೋಗ್ಯ ಕೆಟ್ಟು ಭಾರತಕ್ಕೆ ಮರಳಿದರೂ ಸುಮ್ಮನಿರದೆ ಗಾಂಧೀಜಿ, ಬ್ರಿಟೀಷರ ಕಷ್ಟಕಾಲದಲ್ಲಿ ಅವರಿಗೆ ಸಹಾಯ ಮಾಡಬೇಕೆಂದು ನೂರಾರು ಹಳ್ಳಿ, ಪಟ್ಟಣಗಳನ್ನು ತಿರುಗಿ ಭಾರತೀಯ ಸೇನೆಗೆ ಸೇರಲು ಸಾವಿರಾರು ಸಂಖ್ಯೆಯಲ್ಲಿ ಜನರನ್ನು ಹುರಿದುಂಬಿಸುತ್ತಾರೆ. "ನಿಮ್ಮ ಗಂಡ ಬ್ರಿಟಿಷ್‍ ಸಾಮ್ರಾಜ್ಯದ ಪರವಾಗಿ ಯುದ್ಧದಲ್ಲಿ ಬಲಿಯಾದರೆ ಅವರೇ ನಿಮಗೆ ಮುಂದಿನ ಜನ್ಮದಲ್ಲಿ ಪತಿಯಾಗಿ ಸಿಗುತ್ತಾರೆ" ಎಂದು ತನ್ನ ಭಾಷಣ ಕೇಳಲು ಬಂದ ಹೆಣ್ಣುಮಕ್ಕಳಲ್ಲಿ ಬೇಡಿಕೊಳ್ಳುತ್ತಾರೆ. ಇದರ ಪರಿಣಾಮ...
ಅಪರಿಚಿತ ನೆಲ, ಕಂಡರಿಯದ ಜನ, ಅರ್ಥವಾಗದ ಭಾಷೆ, ಮರಗಟ್ಟುವ ಚಳಿ, ತೊಡಲು ಹತ್ತಿಯ ತೆಳ್ಳಗಿನ ಬಟ್ಟೆ. ಅಲ್ಲಿಯವರೆಗೂ ಗನ್‍ ಹಿಡಿದು ಗೊತ್ತಿಲ್ಲದ, ಯುದ್ಧದ ಬಗ್ಗೆ ಅರಿವೇ ಇಲ್ಲದ ಅಮಾಯಕ ಭಾರತೀಯರು ಗಾಂಧೀಜಿಯ ಕರೆಗೆ ಓಗೊಟ್ಟು ವಿಶ್ವಯುದ್ಧದ ಮುಂಚೂಣಿಯಲ್ಲಿ ಗುಂಡಿಗೆ ಎದೆ ಕೊಟ್ಟು ನಿಲ್ಲುತ್ತಾರೆ.  ಫ್ರಾನ್ಸ್, ಬೆಲ್ಜಿಯಂ, ಆಫ್ರಿಕಾ, ಮೆಸೊಪೊಟೇಮಿಯಾ, ಈಜಿಪ್ಟ್ ದೇಶಗಳಲ್ಲಿ ಬ್ರಿಟಿಷ್‍ ಸೈನಿಕ ತಲುಪುವ ಮೊದಲೇ ಶತ್ರುಗಳನ್ನು ತಡೆದು ನಿಲ್ಲಿಸುತ್ತಾರೆ. ನಮ್ಮೆದುರು ನಿಲ್ಲಲು ಈ ಕಂದು ಬಣ್ಣದ ಸೈನಿಕರಲ್ಲೆಲ್ಲಿ ಧೈರ್ಯವಿದೆ ಎಂದು ಹಂಗಿಸಿ ಮಾತಾಡಿದ ಜರ್ಮನ್ ಸೈನಿಕರೂ ಕೊನೆಗೆ ಅವರ ಸಾಹಸಗಳ ಎದುರು ಸೋಲೊಪ್ಪಿಕೊಳ್ಳುತ್ತಾರೆ.
ಈ ಯುದ್ಧದಲ್ಲಿ ಹೋರಾಡಿದ ಬರೋಬ್ಬರಿ 15 ಲಕ್ಷ ಭಾರತೀಯ ಸೈನಿಕರಲ್ಲಿ ಸುಮಾರು 75,000 ಸೈನಿಕರು ಯುದ್ಧಕಂದಕಗಳಲ್ಲಿ, ಚಳಿ-ಮಲೇರಿಯಾಗಳಿಂದ, ಕೈ-ಕಾಲು ಮುರಿದುಕೊಂಡು ಸರಿಯಾದ ಚಿಕಿತ್ಸೆ ಇಲ್ಲದೆ, ಗಾಯಗಳು ಕೊಳೆತು ಪ್ರಾಣ ಬಿಡುತ್ತಾರೆ.
ಯುದ್ಧಕಂದಕಗಳಲ್ಲಿ ತನ್ನ ಜೊತೆಯವರನ್ನು ಕಣ್ಣೆದುರೇ ಕಳೆದುಕೊಂಡ ಸೈನಿಕನೊಬ್ಬ ಪತ್ರದಲ್ಲಿ, "ಶವಗಳು ಕತ್ತರಿಸಿ ಹಾಕಿದ ಜೋಳದ ತೆನೆಗಳ ತರ ನೆಲದ ತುಂಬಾ ಹರಡಿವೆ" ಎಂದು ಹತಾಶನಾಗಿ ಬರೆಯುತ್ತಾನೆ. ನೊಂದ ಸೈನಿಕನೊಬ್ಬ ಬ್ರಿಟನ್‍ ರಾಜ ಐದನೇ ಜಾರ್ಜ್‍ಗೆ ಪತ್ರ ಬರೆದು, "...ಕೇವಲ 11 ರೂಪಾಯಿಗೆ ನಾವು ಪ್ರಾಣ ಬಿಡುತ್ತಿದ್ದೇವೆ. ಗಾಯಗೊಂಡ ಸೈನಿಕರನ್ನೂ ಪದೇ ಪದೇ ಯುದ್ಧಕ್ಕೆ ಕಳುಹಿಸುತ್ತಾರೆ," ಎಂದು ದೂರುತ್ತಾನೆ.
ನಮ್ಮ ಸೈನಿಕ ತನ್ನ ದೇಶಕ್ಕಾಗಿ ಮಡಿಯಲಿಲ್ಲ. ಯಾರದ್ದೋ ರಾಜಕೀಯ ಲೆಕ್ಕಾಚಾರಗಳಲ್ಲಿ ಕೇವಲ ಅಂಕಿ-ಸಂಖ್ಯೆಯ ಭಾಗವಾಗಿ ಹೋದ. ಬದುಕಿದವರು ಭಾರತಕ್ಕೆ ಮರಳುವಷ್ಟರಲ್ಲಿ ಇಲ್ಲಿನ ರಾಜಕೀಯ ವಾತಾವರಣವೇ ಬೇರೆಯಾಗಿತ್ತು. ಅವರಿಗೆ ಹೀರೋಗಳ ಸ್ವಾಗತ ಬಿಡಿ, ಬ್ರಿಟೀಷರಿಗೆ ಸಹಕರಿಸಲು ಹೋದವರೆಂದು ಜನ ತುಚ್ಚವಾಗಿ ಕಂಡರು, ಹಂಗಿಸಿದರು. ಅಷ್ಟೊತ್ತಿಗೆ ಗಾಂಧೀಜಿಗೂ ಗೊತ್ತಾಗಿತ್ತು ತಾವು ಸಹಾಯ ಮಾಡಲು ಹೊರಟ ತಮ್ಮ ಚಕ್ರವರ್ತಿಯ ನಿಜರೂಪ. ಭಾರತೀಯ ಸೈನ್ಯ ಇಲ್ಲದಿದ್ದರೆ ಬ್ರಿಟನ್‍ ಆ ಯುದ್ಧ ಗೆಲ್ಲಲು ಸಾಧ್ಯವಿರಲಿಲ್ಲ. ಆದರೂ ಸಹಾಯ ಮಾಡಿದ್ದಕ್ಕೆ ಸ್ವಾಯತ್ತತೆ ಬಿಡಿ, ನಮಗೆ ಸಿಕ್ಕಿದ್ದು ಜಲಿಯನ್‍ವಾಲಾ ಬಾಗ್ ಹತ್ಯಾಕಾಂಡ, ತುರ್ತುಪರಿಸ್ಥಿತಿ, ಪತ್ರಿಕೆಗಳ ಮೇಲೆ ನಿರ್ಬಂಧ, ಕೋರ್ಟ್‍ ವಿಚಾರಣೆಯೇ ಇಲ್ಲದೆ ಶಿಕ್ಷೆ. ಒಂದು ಕಡೆ ಬರಗಾಲ. ದೇಶದ ಹಣವನ್ನು ಯುದ್ಧಕ್ಕೆ ಸುರಿದಿದ್ದರಿಂದ ಆದ ಹಣದುಬ್ಬರ, ಅದರ ಪರಿಣಾಮ ಬಾಂಬೆ, ಮದ್ರಾಸ್‍, ಬಂಗಾಳದಲ್ಲಿ ಆಹಾರಕ್ಕಾಗಿ ದಂಗೆ.
ಇಷ್ಟಕ್ಕೇ ನಿಲ್ಲಲಿಲ್ಲ ನಮ್ಮ ದಾಸ್ಯದ ಕಥೆ. ಮತ್ತೆ ಸಣ್ಣ ಪುಟ್ಟ ಯುದ್ಧಗಳಲ್ಲಿ ಮಾತ್ರವಲ್ಲದೆ, ನಮ್ಮ ಸೈನಿಕರು ಎರಡನೇ ಮಹಾಯುದ್ಧದಲ್ಲೂ ಬ್ರಿಟಿಷರ ಅಡಿಯಲ್ಲಿ ಇಟೆಲಿ, ಜಪಾನ್‍ ಮತ್ತು ಜರ್ಮನ್‍ ಸೈನ್ಯಗಳ ವಿರುದ್ಧ ಹೋರಾಡಿ ಗೆಲ್ಲುತ್ತಾರೆ. ಇಂಫಾಲ್‍ ಮತ್ತು ಕೊಹಿಮಾ ಮೇಲೆ ಆಕ್ರಮಣ ಮಾಡಿದ ಜಪಾನೀಯರು ಸೋತು ಹಿಮ್ಮೆಟ್ಟುತ್ತಾರೆ. ಪಾಲ್ಗೊಂಡ 2.5 ಲಕ್ಷ ಭಾರತೀಯ ಸೈನಿಕರಲ್ಲಿ ಸುಮಾರು 24,000 ಸೈನಿಕರು ಸಾಯುತ್ತಾರೆ.
ಇದೆಲ್ಲ ಸ್ವಾತಂತ್ರ್ಯ ಸಿಗುವ ಮೊದಲಿನ ಮಾತಾಯಿತು, ಈಗ್ಯಾಕೆ ಅದರ ಪ್ರಸ್ತಾಪ ಅನ್ನಿಸಬಹುದು. ಆಗ ಬ್ರಿಟಿಷರು ಕಟ್ಟಿದ ದಾಸ್ಯ ಸಂಕೋಲೆಯಲ್ಲಿ ನಾವಿದ್ದರೆ, ಈಗ ’ಶಾಂತಿಮಂತ್ರ’ ಎನ್ನುವ ನಾವೇ ಬಿಗಿದುಕೊಂಡ ಸಂಕೋಲೆಯಲ್ಲಿ ಸಿಕ್ಕಿಕೊಂಡಿದ್ದೇವೆ. ಭಾಷಣ ಮಾಡುವವರೆಲ್ಲ ’ಭಾರತ ಶಾಂತಿಯುತ ದೇಶ, ಶಾಂತಿ ಇಷ್ಟಪಡುವ ದೇಶ’ ಎಂದು ಉರುಹೊಡೆಯುವುದನ್ನು ಕೇಳಿರಬಹುದು. ಅದಕ್ಕೇ ಇರಬೇಕು ನಮ್ಮ ದೇಶದಿಂದ ವಿಶ್ವಸಂಸ್ಥೆಯ ಶಾಂತಿಪಾಲನಾ ಪಡೆಗೆ ಕಳುಹಿಸಿರುವ ಪಡೆಗಳ ಸಂಖ್ಯೆಯೇ 1,80,000.
ಆಗ ಕೃತಘ್ನ ಬ್ರಿಟೀಷರಿಗೋಸ್ಕರ ನಮ್ಮ ಸೈನಿಕರು ಜೀವ ಕಳೆದುಕೊಂಡರೆ, ಈಗ ಜಗತ್ತಿನ ದೊಡ್ಡಣ್ಣರೆಲ್ಲ ನಮ್ಮ ಮೇಲೆ ಸವಾರಿ ಮಾಡಲು ನಾವೇ ಅನುವು ಮಾಡಿಕೊಡುತ್ತಿದ್ದೇವೆ. ಯಾವುದೋ ದೇಶಗಳು, ಅವರ ರಾಜಕೀಯ ಆಟಗಳು... ಅವರಿಗೇ ಬೇಡದ ಶಾಂತಿಯನ್ನು ಕಾಪಾಡಲು ನಾವು, so-called ಮೂರನೇ ಜಗತ್ತಿನ ಸೈನಿಕರು, ಪೋಲೀಸರು ಜೀವದ ಮೇಲಿನ ಆಸೆ ಬಿಟ್ಟು ವರ್ಷಗಟ್ಟಲೆ ಅಲ್ಲಿನ ನಾಗರಿಕ ಸಮಾಜವನ್ನು ಹಗಲೂ-ರಾತ್ರಿ ಕಾಯಬೇಕು.
ಜಗತ್ತಿನಲ್ಲೇ ಅತಿ ಹೆಚ್ಚು, ಅಂದರೆ ಸುಮಾರು 158 ಭಾರತೀಯ ಶಾಂತಿಪಾಲಕರು (Peacekeepers), 49 ಬೇರೆ ಬೇರೆ ಕಾರ್ಯಾಚರಣೆಗಳಲ್ಲಿ ಯಾವುದೋ ದೇಶಗಳಲ್ಲಿ ಪ್ರಾಣ ತೆತ್ತಿದ್ದಾರೆ.
ಮಾಲ್ಡೀವ್ಸ್ ಅಧ್ಯಕ್ಷ ಮೌಮೂನ್‍ ಅಬ್ದುಲ್‍ ಗಯೂಮ್‍ರನ್ನು ಉಚ್ಚಾಟಿಸಲು ಮಾಡಿದ ಪ್ರಯತ್ನ ವಿಫಲಗೊಳಿಸಿದ್ದು ನಮ್ಮ ಶಾಂತಿಪಾಲಕರ ’ಆಪರೇಶನ್‍ ಕ್ಯಾಕ್ಟಸ್‍.’ ಶ್ರೀಲಂಕಾದಲ್ಲಿ LTTE ವಿರುದ್ಧ ಹೋರಾಟದಲ್ಲಿ ಸತ್ತಿದ್ದು ಸಾವಿರಕ್ಕೂ ಹೆಚ್ಚು ಶಾಂತಿಪಾಲಕರು. ಕಾಂಗೋ, ಸುಡಾನ್‍, ಐವರಿ ಕೋಸ್ಟ್, ಸೊಮಾಲಿಯಾ, ಇರಾಕ್‍, ಲಿಬೀರಿಯಾ, ಹೀಗೆ ಎಲ್ಲೆಲ್ಲಿ ಅವರ ಅಗತ್ಯ ಇದೆಯೋ ಅಲ್ಲೆಲ್ಲ ನಮ್ಮವರು ಅಲ್ಲಿನ ಸಾಮಾನ್ಯ ನಾಗರಿಕರಿಗೆ ಹಗಲು-ರಾತ್ರಿ ರಕ್ಷಣೆ ಕೊಟ್ಟಿದ್ದಾರೆ.
ಜಗತ್ತಿನ ಮೊದಲ ಮಹಿಳಾ ಶಾಂತಿಪಾಲನಾ ಪಡೆ ಭಾರತೀಯರದ್ದು. ವಿಶ್ವಸಂಸ್ಥೆಯಿಂದ ಮೆಚ್ಚುಗೆ ಪಡೆದು ಮೊನ್ನೆ ಫೆಬ್ರವರಿಗೆ ಹಿಂತಿರುಗಿದ ಈ ಪಡೆ ಒಂಬತ್ತು ವರ್ಷಗಳ ಕಾಲ ಲಿಬೀರಿಯಾದಲ್ಲಿ ನಾಗರಿಕ ರಕ್ಷಣೆ ಮಾತ್ರವಲ್ಲದೆ, ರಾತ್ರಿ ಗಸ್ತು ತಿರುಗುವುದು, ಅಲ್ಲಿನ ಪೋಲೀಸರಿಗೆ ತರಬೇತಿ ಕೊಡುತ್ತಿದ್ದುದು ಮಾತ್ರವಲ್ಲ, ಮನೆ ಬಿಟ್ಟು ಹೊರ ಬರಲು ಅಂಜುತ್ತಿದ್ದ ಅಲ್ಲಿನ ಮಹಿಳೆಯರಿಗೆ ಪೋಲೀಸ್‍ ಪಡೆ ಸೇರಲು ಸ್ಪೂರ್ತಿಯಾದರು.
ನಮ್ಮ ಶಾಂತಿಪಾಲನಾ ಪಡೆಗಳ ಸಂಬಳ, ಯೂನಿಫಾರ್ಮ್, ಶಸ್ತ್ರಾಸ್ತ್ರಗಳು, ತರಬೇತಿಯ ಖರ್ಚನ್ನೆಲ್ಲ ನಮ್ಮ ದೇಶವೇ ಕೊಟ್ಟು, ಜೊತೆಗೆ ವಿಶ್ವಸಂಸ್ಥೆಯ ಶಾಂತಿಪಾಲನೆ ಬಜೆಟ್‍ಗೆ ದೇಣಿಗೆ (2015-16ನೇ ಸಾಲಿನಲ್ಲಿ ಭಾರತ ವಿಶ್ವಸಂಸ್ಥೆಗೆ ರೂ. 256 ಕೋಟಿ ಕಡ್ಡಾಯ ದೇಣಿಗೆ ನೀಡಿದೆ) ಕೊಟ್ಟು ನಾವು ಅಮಾಯಕರ ಜೀವ ಉಳಿಸುವ ಪುಣ್ಯದ ಕೆಲಸವನ್ನೇನೋ ಮಾಡುತ್ತಿದ್ದೇವೆ. ಆದರೆ ವಿಶ್ವಸಂಸ್ಥೆಯಲ್ಲಿ ನಮಗೆ ನಮ್ಮ ಪಡೆಗಳ ನಿಯೋಜನೆಯ ಯಾವ ಸ್ವಾತಂತ್ರ್ಯವೂ ಇಲ್ಲ.
ಸುಮಾರು 7,713 ಸೈನಿಕರನ್ನು ನಿಯೋಜಿಸುವ ಮೂಲಕ ಇಥಿಯೋಪಿಯಾ ನಂತರ ಎರಡನೇ ಸ್ಥಾನದಲ್ಲಿರುವ ಭಾರತದ ಎದುರು ಜರ್ಮನಿ (434), ಯುನೈಟೆಡ್‍ ಕಿಂಗ್‍ಡಮ್‍ (336), ಕೆನಡಾ (103), ರಷ್ಯಾ (98) ಮತ್ತು ಯುಎಸ್‍ (40) ತರದ ’ದೊಡ್ಡಣ್ಣ’ಗಳ ಬಣ್ಣ ಶಾಂತಿಯ ತಿಳಿನೀರಿನಲ್ಲಿ ಯಾವಾಗಲೋ ತೊಳೆದುಕೊಂಡು ಹೋಗಿದೆ. ಅವರ ಸೈನಿಕರ ಜೀವ ಮಾತ್ರ ಅಮೂಲ್ಯ ಎಂದು ತಿಳಿದುಕೊಂಡಿರುವ ಆ ದೇಶಗಳು ಹಲ್ಲೇ ಇಲ್ಲದಿರುವ ಹಾವಾದ ವಿಶ್ವಸಂಸ್ಥೆಗೆ ಕೋಟಿಗಟ್ಟಲೆ ಹಣ ಸುರಿದು ಬಡರಾಷ್ಟ್ರಗಳಿಗೆ ಶಾಂತಿಯ ಮಂತ್ರ ಹೇಳಿಕೊಡುತ್ತಿವೆ.
ಅತ್ಯಂತ ಕಡಿಮೆ ಮತ್ತು ಹಾಸ್ಯಾಸ್ಪದ ಸಂಖ್ಯೆಯಲ್ಲಿ ಸೈನಿಕರನ್ನು ಶಾಂತಿಪಾಲನಾ ಪಡೆಗೆ ಕಳಿಸುತ್ತಿರುವ ಅಮೇರಿಕಾ, ಈ ವರ್ಷ ತಾನು ಕೊಡುವ ಹಣವನ್ನೂ ಕಡಿತಗೊಳಿಸುವ ಚಿಂತನೆ ನಡೆಸುತ್ತಿದೆ. ಆದರೂ ಹೊಸದಾಗಿ ನೇಮಕಗೊಂಡ ವಿಶ್ವಸಂಸ್ಥೆಯ ಅಮೇರಿಕ ರಾಯಭಾರಿ ಭಾರತೀಯ ಸಂಜಾತೆ ನಿಕ್ಕಿ ಹೇಲಿ ಪ್ರಕಾರ ’ಅಮೇರಿಕಾ ಜಗತ್ತಿನ ನೈತಿಕ ಆತ್ಮಸಾಕ್ಷಿ.’
ದೇಶ-ದೇಶಗಳ ನಡುವಿನ ಯುದ್ಧ, ಜಾತಿ-ಜನಾಂಗಗಳ ಸಂಘರ್ಷ, ಸಿದ್ಧಾಂತಗಳ ತಿಕ್ಕಾಟ,... ಏನೇ ಇರಲಿ,  ಅಲ್ಲೆಲ್ಲ ಸಾವು-ನೋವು, ಕ್ರೂರತನಕ್ಕೆ ಬಲಿಯಾಗುವವರು ಅಮಾಯಕರೇ. ಯಾವ ರಾಷ್ಟ್ರವೇ ಆಗಲಿ, ಅಲ್ಲಿನ ನಾಗರಿಕರನ್ನು ರಕ್ಷಿಸುವುದು ಯಾವುದೇ ದೇಶದ ಸಾಮಾನ್ಯ ಸೈನಿಕ ಹೆಮ್ಮೆಯಿಂದ ಮಾಡುವ ಕೆಲಸ. ಆದರೆ ಅದರಲ್ಲಿ ದೊಡ್ಡ-ಸಣ್ಣ ರಾಷ್ಟ್ರಗಳ ಸಮಪಾಲು ಇರಬೇಕು. ನಾಗರಿಕರ ಜೀವದ ತರ, ಸೈನಿಕನ ಜೀವವೂ ಅತ್ಯಮೂಲ್ಯವೇ. ಒಂದು ಕಡೆ ಬೆನ್ನ ಹಿಂದಿಂದ ಯುದ್ಧಕ್ಕೆ ಕುಮ್ಮಕ್ಕು ಕೊಡುತ್ತಾ, ಇನ್ನೊಂದು ಕಡೆ ಯುದ್ಧದಲ್ಲಿ ಸಿಲುಕುವ ಅಮಾಯಕರನ್ನು ಕಾಪಾಡುವ ನಾಟಕವಾಡುವ ’ಹಿರಿಯಣ್ಣ’ರೆಲ್ಲ ಸೇರಿ, ಕಣ್ಣೆದುರೇ ಅನಾಚಾರಗಳು ನಡೆಯುತ್ತಿದ್ದರೂ ಅದನ್ನು ತಡೆಯುವ ಯಾವ ಅಧಿಕಾರವೂ ಕೊಡದೆ, ಶಾಂತಿಪಾಲನಾ ಪಡೆಯನ್ನು ಹೆಸರಿಗೆ ಮಾತ್ರ ನೇಮಿಸಿ ತಮ್ಮ ನೈತಿಕ ಹೊಣೆಯಿಂದ ಕಳಚಿಕೊಳ್ಳುವ ಬದಲು ಅವರಿಗೆ ಆ ಕ್ಷಣದಲ್ಲಿ ಸರಿಯಾದ ನಿರ್ಧಾರ ತೆಗೆದುಕೊಳ್ಳುವ ಸ್ವಾತಂತ್ರ್ಯ ಕೊಟ್ಟರೆ ಆ ಪಡೆಯ ನೇಮಕ ಅರ್ಥಪೂರ್ಣವಾದೀತು. ಶಾಂತಿಯ ಹರವು ಹಿಂಸೆಯಿಂದ ನಲುಗಿದ ದೇಶಗಳಲ್ಲಿ ಹರಡೀತು.