Pages

Subscribe:

Ads 468x60px

Wednesday, August 18, 2010

ನಮ್ಮ ನೆಲವನ್ನು ಕಸದ ತೊಟ್ಟಿ ಮಾಡುವವರಿಂದ ಸ್ವಚ್ಚತೆಯ ಪಾಠ?

ಅಮೇರಿಕಾ, ಲಂಡನ್‌ ಮುಂತಾದ ಶ್ರೀಮಂತ, ಮುಂದುವರಿದ ರಾಷ್ಟ್ರಗಳಿಗೆ ಹೋಗಿ ಬಂದವರನ್ನು ಹೇಗಿವೆ ಆ ದೇಶಗಳು ಎಂದು ಕೇಳಿ ನೋಡಿ. ನಿಮಗೆ ಸಿಗುವ ಮೊದಲ ಉತ್ತರ, ಅಲ್ಲೆಲ್ಲ ತುಂಬ ಕ್ಲೀನು, ನಮ್ಮ ದೇಶದಷ್ಟು ಕೊಳಕು ಅಲ್ಲೆಲ್ಲೂ ನೋಡಲು ಸಾಧ್ಯವೇ ಇಲ್ಲ. ಅಲ್ಲಿನ ರಸ್ತೆಗಳು, ಪಾರ್ಕುಗಳು, ಮನೆಗಳು ಎಷ್ಟು ಸ್ವಚ್ಚ ಅಂದರೆ... ನೋಡಿದರೆ ಕಣ್ಣು ತಂಪಾಗುತ್ತದೆ. ವಾಪಾಸು ನಮ್ಮ ದೇಶಕ್ಕೆ ಬಂದರೆ ರಸ್ತೆಯಲ್ಲಿ ನಡೆಯಲೂ ಬೇಜಾರಾಗುತ್ತದೆ. ಅಬ್ಬ ಎಷ್ಟು ಕೊಳಕು ನಮ್ಮ ಜನ. ಬಿಟ್ಟರೆ ಅಲ್ಲೂ ಹೋಗಿ ಅಲ್ಲಿನ ಪರಿಸರವನ್ನು ಕೊಳಕು ಮಾಡುತ್ತಾರೆ ಎನ್ನುತ್ತಾರೆ.
ಹಾಗಾದರೆ ಅಲ್ಲಿನ ಜನ ಅಷ್ಟೊಂದು  ಕ್ಲೀನಾ? ಆ ದೇಶಗಳಲ್ಲಿ ಎಲ್ಲರ ಮನೆಗಳ, ರಸ್ತೆಗಳ, ಕಾರ್ಖಾನೆಗಳ ಕಸ ಎಲ್ಲಿಗೆ ಹೋಗುತ್ತದೆ? ಅಲ್ಲಿ ಉಪಯೋಗಿಸಿ ಎಸೆದ ಪ್ಲಾಸ್ಟಿಕ್ ವಸ್ತುಗಳು, ಗಾಜಿನ ಬಾಟಲ್‍ಗಳಿಂದ ಹಿಡಿದು ಕಂಪ್ಯೂಟರ್‌ ಮತ್ತಿತರ ಇಲೆಕ್ಟ್ರಾನಿಕ್‌ ತ್ಯಾಜ್ಯ ವಸ್ತುಗಳು ಎಲ್ಲಿ ಹೋಗುತ್ತವೆ? Of course. ಇನ್ನೆಲ್ಲಿಗೆ? ಭಾರತಕ್ಕೆ, ಆಫ್ರಿಕಾ ಮತ್ತು ಇನ್ನಿತರ 'ಬಡ' ರಾಷ್ಟ್ರಗಳ ಮನೆಯಂಗಳಕ್ಕೆ.
ಬ್ರಿಟನ್‌ನ ಮನೆಗಳಿಂದ ಕಸವನ್ನು ಒಟ್ಟುಗೂಡಿಸಿ ಅದನ್ನು ಪ್ಲಾಸ್ಟಿಕ್, ಗಾಜು, ಲೋಹ, ಕಾಗದ ಹೀಗೆ ಬೇರೆ ಬೇರೆ ಗುಂಪುಗಳನ್ನಾಗಿ ಮಾಡಿ ಟನ್‌ಗಟ್ಟಲೆ ತಂದು ಸುರಿಯುತಾರೆ, ಎಲ್ಲಿಗೆ ಗೊತ್ತೆ? ತಮಿಳುನಾಡಿಗೆ. ಅವರ ದೇಶದಲ್ಲಿ ಒಂದು ಟನ್‌ ತ್ಯಾಜ್ಯ ವಸ್ತುಗಳನ್ನು ಸಂಸ್ಕರಣೆ ಮಾಡಲು ಸರಿಸುಮಾರು 150 ಪೌಂಡ್‌ ಖರ್ಚಾದರೆ, ಈಗಾಗಲೇ ಕೊಳಕು ದೇಶ ಎಂದು ಅವರಂದುಕೊಂಡಿರುವ ಸಾವಿರಾರು ಕಿಲೋಮೀಟರ್‌ ದೂರದ ನಮ್ಮ ದೇಶಕ್ಕೆ ತಂದು ಹಾಕಲು ಅವರಿಗೆ ತಗಲುವ ಖರ್ಚು ಕೇವಲ 50 ಪೌಂಡ್‍.
ಬೇರೆ ದೇಶಗಳೇನು ಹಿಂದುಳಿದಿಲ್ಲ. ನ್ಯೂಯಾರ್ಕ್‌ನಿಂದ ರದ್ದಿ ಕಾಗದದ ಹೆಸರಲ್ಲಿ ಕಾನೂನಿಗೆ ವಿರುದ್ಧವಾಗಿ ಟನ್‌ಗಟ್ಟಲೆ ನಗರಗಳ ಕೊಳಕನ್ನೆಲ್ಲ ತಂದು ಕೊಚ್ಚಿ, ಮಧುರೈ, ಟ್ಯುಟಿಕೊರಿನ್‌ನಲ್ಲಿ ಸುರಿಯಲು ಯತ್ನಿಸಲಾಯಿತು. ಟ್ಯುಟಿಕೊರಿನ್‌ ಬಂದರು ಒಂದರಲ್ಲೆ ಸ್ಪೈನ್‌, ಮಲೇಶಿಯಾ, ಸೌದಿ ಅರೇಬಿಯಾ, ಇನ್ನಿತರ ದೇಶಗಳಿಂದ ತಿಂಗಳೊಂದಕ್ಕೆ 50ರಿಂದ 1,000 ಮೆಟ್ರಿಕ್ ಟನ್‌ವರೆಗೆ ಕಸ ಬಂದು ಬೀಳುತ್ತದೆ; ಅದೂ ಅಂತಿಂಥಾ ಕಸವಲ್ಲ -- ಆಸ್ಪತ್ರೆಗಳಲ್ಲಿ ಉಪಯೋಗಿಸುವ ಸರ್ಜಿಕಲ್ ಗ್ಲೋವ್ಸ್, ಕಾಂಡಮ್‌ಗಳಂತಹ ಅಪಾಯಕಾರಿ, ಸಂಸ್ಕರಿಸಲು ಕಷ್ಟಸಾಧ್ಯವಾದ ವಸ್ತುಗಳಿಂದ ಹಿಡಿದು ಎಣ್ಣೆ, ಅಡಿಗೆಮನೆ ಕಸದವರೆಗೆ ಎಲ್ಲಾ ರೀತಿಯ ಕಸ. ಪುನರ್‌ಸಂಸ್ಕರಣೆಯ ನೆಪ ಹೂಡಿ ವಾಸನೆ ಬೀರುವ, ಅಲ್ಲಿ ಬದುಕುವವರ ಆರೋಗ್ಯಕ್ಕೆ ಹಾನಿಕಾರಕವಾದ ಇವೆಲ್ಲವನ್ನು ತರಿಸಿ ವರ್ಷಗಟ್ಟಲೆ ಇಲ್ಲಿ ಗುಡ್ಡೆ ಹಾಕುವುದು ಭಾರತದಲ್ಲಿರುವ ವಿದೇಶಿ ಕಂಪೆನಿಗಳು.
ಇನ್ನು ಯಾರ ಕಣ್ಣಿಗೂ ಬೀಳದೆ ಮರೆಯಲ್ಲಿ ಬಂದು ನಮ್ಮ ದೇಶಕ್ಕೆ ಸೇರುತ್ತಿರುವ ಇನ್ನೂ ಅಪಾಯಕಾರಿ ವಸ್ತುಗಳು e-waste; ಕಂಪ್ಯೂಟರ್, ಟಿವಿ, ಕಾರ್ ಬ್ಯಾಟರಿಗಳು ಇನ್ನಿತರ ಇಲೆಕ್ಟ್ರಾನಿಕ್ ತ್ಯಾಜ್ಯಗಳು. ಅಮೇರಿಕಾ ಒಂದರಿಂದಲೇ ಸುಮಾರು 125 ಬಿಲಿಯನ್ ಡಾಲರ‍್ಗಳಷ್ಟು ಇಲೆಕ್ಟ್ರಾನಿಕ್ ತ್ಯಾಜ್ಯಗಳು ವರ್ಷಕ್ಕೆ ನಮ್ಮಲ್ಲಿಗೆ ಬಂದು ಬೀಳುತ್ತವೆ. ನಮ್ಮ ದೇಶದಲ್ಲೇ ವರ್ಷಕ್ಕೆ ಸುಮಾರು 386,000 ಟನ್ -- 110 ಮಿಲಿಯನ್ ಲ್ಯಾಪ್‌ಟಾಪ್‌ಗಳಷ್ಟು-- ಇ-ತ್ಯಾಜ್ಯ ಉತ್ಪತ್ತಿಯಾಗುತ್ತದೆ. ನಮ್ಮ ಬೆಂಗಳೂರು, ದೆಹಲಿ ಮತ್ತಿತರ ನಗರಗಳ ಗಲ್ಲಿಗಳಲ್ಲಿ, ಭೋಪಾಲ್‌ನ ಕಾರ್ಖಾನೆಗಳಲ್ಲಿ ಒಮ್ಮೆ ಇಣುಕಿ ನೋಡಿ. ಸಾವಿರಾರು ಜನ, ಪುಟ್ಟ ಮಕ್ಕಳನ್ನೂ ಸೇರಿಸಿಕೊಂಡು ಬರಿಕೈಯಲ್ಲಿ ಈ ಇಲೆಕ್ಟ್ರಾನಿಕ್ ತ್ಯಾಜ್ಯಗಳನ್ನು ಬೇರ್ಪಡಿಸುತ್ತಾರೆ, ಆಸಿಡ್ ತುಂಬಿದ ದೊಡ್ಡ ಪಾತ್ರೆಗಳಲ್ಲಿ ಹಾಕಿ ಕರಗಿಸುತ್ತಾರೆ. ಸಂಸ್ಕರಿಸಲು ಅಸಾಧ್ಯವಾದ ತ್ಯಾಜ್ಯ ಪಕ್ಕದ ಮೋರಿಗೋ, ಕಸದ ರಾಶಿಗೋ ಸೇರುತ್ತದೆ. ಇಷ್ಟೆಲ್ಲ ಪಾದರಸ, ಸೀಸ, ಕ್ಯಾಡ್ಮಿಯಮ್ ತರಹದ ವಿಷಕಾರಿ ರಾಸಾಯನಿಕಗಳನ್ನು ತಮ್ಮ ದೇಹದೊಳಗೆ ಸೇರಿಸಿಕೊಂಡು ಒದ್ದಾಡುವ ಬಡ ಕಾರ್ಮಿಕನಿಗೆ ದಿನದ ಕೊನೆಗೆ ಸಿಗುವುದು ಬರಿ 50ರಿಂದ 100 ರೂಪಾಯಿ ಮಾತ್ರ.
ದಕ್ಷಿಣ ಕನ್ನಡದ ಸಮುದ್ರ ತೀರದಲ್ಲಿ ನಡೆದುಕೊಂಡು ಹೋದರೆ ಕಾಲಿಗೆ ಕಪ್ಪು ಜಿಡ್ಡು ಮೆತ್ತಿಕೊಳ್ಳುತ್ತದೆ. ಇದು ಮೊನ್ನೆ ತಾನೆ ಮುಂಬೈನ ಜವಾಹರ್‌ಲಾಲ್‌ ನೆಹರು ಬಂದರಿನಲ್ಲಿ ಎರಡು ಹಡಗುಗಳು ಪರಸ್ಪರ ಡಿಕ್ಕಿ ಹೊಡೆದು ಆದ ತೈಲ ಸೋರಿಕೆಯ ತರಹ ಯಾವುದೋ ಹಡಗಿನಿಂದ ಸೋರಿದ ತೈಲವಲ್ಲ. ಬೇರೆ ದೇಶಗಳಿಂದ ಬಂದು ಇಲ್ಲಿನ ಬಂದರಿನಲ್ಲಿ ನಿಲ್ಲುವ ಹಡಗುಗಳು ಹೊರ ಬಿಡುವ ಇಂಜಿನ್ ಆಯಿಲ್. ಕಾನೂನಿನ ಪ್ರಕಾರ ಹೋದರೆ ಪ್ರತಿ ಹಡಗೂ 30,000 ರೂ. ದುಡ್ಡು ಕಟ್ಟಬೇಕಾಗುತ್ತದೆ. ಅದಕ್ಕೆ ಅವರೇ ಬಂದರು ಅಧಿಕಾರಿಗಳಿಗೆ ತಿಳಿಯದಂತೆ ತಾವೇ ಇಂಜಿನ್ ಆಯಿಲ್ ಹೊರಬಿಡುತ್ತಾರೆ. ಆದರೆ ಅವರ ದುರಾಸೆಯಿಂದಾಗಿ ಉಳ್ಳಾಲ, ಚಿತ್ರಾಪುರ, ಪಣಂಬೂರ್, ತಣ್ಣೀರ್‌ಬಾವಿ ಕಡಲ ತೀರಗಳಲ್ಲಿ ಮೀನುಗಳು, ಜಲಚರಗಳು ಸಾಯುತ್ತಿವೆ.
ಗುಜರಾತ್‌ನ ಅಲಂಗ್ ಬಂದರು ಏಷಿಯಾದ ಅತಿ ದೊಡ್ಡ ಹಡಗು-ಮುರಿಯುವ ಕಾರ್ಖಾನೆ. ಇಲ್ಲಿಗೆ ಜಗತ್ತಿನ ಎಲ್ಲಾ ದೇಶಗಳ ಆಯಸ್ಸು ಮುಗಿದ ಹಡಗುಗಳು ಬರುತ್ತವೆ, ಜೊತೆಗೆ ನಮ್ಮ ಸುಪ್ರೀಂ ಕೋರ್ಟ್ ಅಪಾಯಕಾರಿ ಎಂದು ವಾಪಾಸು ಕಳುಹಿಸಿದ ರಾಸಾಯನಿಕ ತ್ಯಾಜ್ಯಗಳು ತುಂಬಿರುವ clemenceau ಎನ್ನುವ ಫ್ರೆಂಚ್ ಹಡಗಿನಂತಹವು ಕೂಡ. ವಿಪರ್ಯಾಸವೆಂದರೆ ಎಲ್ಲಾ ಹಡಗುಗಳೂ clemenceau ತರ ತಿರುಗಿ ಹೋಗುವುದಿಲ್ಲ. ಅಂತರಾಷ್ಟ್ರೀಯ ಕಾನೂನಿನ ಪ್ರಕಾರ ಶ್ರೀಮಂತ ದೇಶಗಳು ಭಾರತಕ್ಕೆ ನೇರವಾಗಿ ಅಪಾಯಕಾರಿ ರಾಸಾಯನಿಕ ತ್ಯಾಜ್ಯವುಳ್ಳ ಹಡಗುಗಳನ್ನು ಕಳುಹಿಸುವಂತಿಲ್ಲ. ಅದಕ್ಕೆ ಬಾಂಗ್ಲಾದೇಶ ತಿರಸ್ಕರಿಸಿದ Blue Lady, ಭಾರತಕ್ಕೆ ತರುವುದಕ್ಕೋಸ್ಕರ ಕೇವಲ 10 ಡಾಲರ್‌ಗೆ ಯಾವುದೋ ಸಣ್ಣ ದೇಶಕ್ಕೆ ಹೆಸರಿಗೆ ಮಾತ್ರ ಮಾರಾಟವಾದ Al Arabia ತರಹದ ಹಡಗುಗಳು ತಮ್ಮ ಹೆಸರು, ದೇಶದ ಹೆಸರು ಬದಲಾಯಿಸಿಕೊಂಡು ಬರುತ್ತವೆ.
ದೆಹಲಿಯ ಮಯಪುರಿ ಮಾರ್ಕೆಟ್‌ನಲ್ಲಿ ಇತ್ತೀಚೆಗೆ ಒಬ್ಬ ಕಾರ್ಮಿಕ ವಿದೇಶಿ ತ್ಯಾಜ್ಯದ ಸಂಸ್ಕರಣೆ ಮಾಡುವಾಗ Cobalt-60 ವಿಕಿರಣದಿಂದಾಗಿ ತನ್ನ ಅಂಗಗಳೆಲ್ಲ ನಿಷ್ಕ್ರಿಯವಾಗಿ ಸಾಯುತ್ತಾನೆ, ಏಳು ಜನ ಸುಟ್ಟು ಹೋಗುತ್ತಾರೆ. Basel Convention ಎನ್ನುವ ಅಂತರಾಷ್ಟ್ರೀಯ ಒಪ್ಪಂದಕ್ಕೆ ಸಹಿ ಹಾಕಿರುವ ಭಾರತ ತನ್ನ ನೆಲದೊಳಗೆ ವಿಕಿರಣಯುಕ್ತ ತ್ಯಾಜ್ಯಗಳನ್ನು ಆಮದು ಮಾಡಿಕೊಳ್ಳುವಂತಿಲ್ಲ. ಆದರೂ ಸರಕಾರದ, ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಪ್ರತಿದಿನ ಅಂತಹ ತ್ಯಾಜ್ಯಗಳು ಬಂದು ನಮ್ಮ ನೆಲದಲ್ಲಿ ಬೀಳುತ್ತಲೇ ಇವೆ.
ಜಾರ್ಜ್‌ ಆರ್‌ವೆಲ್‌, ತಮ್ಮ Animal Farm ಕೃತಿಯಲ್ಲಿ 'All animals are equal but some animals are more equal than others' ಎಂದು  ಹೇಳಿದ ಹಾಗೆ ಮುಂದುವರಿದ ರಾಷ್ಟ್ರಗಳ ಪ್ರಜೆಗಳು ಏನೇ ಮಾಡಿದರೂ ಅದನ್ನು ಅನುಭವಿಸುವುದು ನಮ್ಮ ಹಣೆಬರಹ, ಅವರು ನಮಗಿಂತ ಜಾಸ್ತಿ 'ನಾಗರಿಕರು' ಅನ್ನುವ ಮನೋಭಾವ ನಮ್ಮನ್ನು ಇನ್ನೂ ಬಿಟ್ಟಿಲ್ಲವೇ?  
ನಮ್ಮ ಮನೆಯ ಹತ್ತಿರ ಪಕ್ಕದ ಮನೆಯವರು ಕಸ ತಂದು ಸುರಿದರೆ ಕೂಗಾಡುವ ನಾವು ಇದನ್ನೆಲ್ಲ ನೋಡಿ ಯಾಕೆ ಸುಮ್ಮನಿದ್ದೇವೆ? ಯಾಕೆ ಎಲ್ಲರ ಮನೆ ಸ್ವಚ್ಚವಾಗಿಡುವುದಕ್ಕಾಗಿ ನಮ್ಮ ಮನೆಯಂಗಳವನ್ನು ಗಬ್ಬೆಬ್ಬಿಸುತ್ತಿದ್ದೇವೆ? ಅಥವಾ ಬುದ್ಧಿವಂತಿಕೆಗಿಂತ ಜಾಸ್ತಿ ಒಳ್ಳೆಯತನದೆಡೆಗೆ ಒಲವು ಇರುವ ಭಾರತದ ಗುಣ ನಿಜವಾದ ನಾಗರಿಕತೆಗೆ ಹತ್ತಿರವಾಗಿದೆ ಎಂದು W.J. Grant ತಮ್ಮ 'Spirit of India' ಕೃತಿಯಲ್ಲಿ ಹೇಳಿದ್ದು ನಿಜವಿರಬೇಕು. ಭಾರತದ ನೆಲ ಮುಂದುವರಿದ ದೇಶಗಳ ಕಸದ ತೊಟ್ಟಿಯಾಗುತ್ತಿದ್ದರೂ ಪರಿಸರವಾದಿಗಳು ತಟಸ್ಥರಾಗಿರುವುದು ಒಳ್ಳೆಯತನವೋ, 'ದೊಡ್ಡ'ವರನ್ನು ಎದುರು ಹಾಕಿಕೊಳ್ಳಲಾಗದ ಹೇಡಿತನವೋ ಅಥವಾ ನಮಗೇನು ಎನ್ನುವ ದಿವ್ಯ ನಿರ್ಲಕ್ಷ್ಯವೋ? ಒಟ್ಟಿನಲ್ಲಿ ನಾವು 'ಮುಂದುವರೆಯುತ್ತಿಲ್ಲ', ಇನ್ನೂ ಹಿಂದೆ ಸರಿಯುತ್ತಿದ್ದೇವೆ, ಎಲ್ಲಾ ರೀತಿಯಲ್ಲೂ.

0 comments: