Pages

Subscribe:

Ads 468x60px

Saturday, April 30, 2011

ಕ್ರಿಕೆಟ್‌ಗೋಸ್ಕರ ಬೀದಿಗಿಳಿಯುವ ಜನ, ಭ್ರಷ್ಟಾಚಾರದ ವಿರುದ್ದ ಇಳಿಯಲಾರರೇ?


"ನಾನು ಹೊಸ ಪಾಸ್‌ಪೋರ್ಟ್‌ಗೆ ಅರ್ಜಿ ಹಾಕಿದ್ದೆ. ನನ್ನನ್ನು ಏನೇನೋ ಕಾರಣ ಹೇಳಿ ಹನ್ನೊಂದು ಸಲ ತಿರುಗಿಸಿದರು. ಆಮೇಲೆ ಲಂಚ ಕೇಳಿದರು. ಕೊಡದಿದ್ದರೆ ಕೆಲಸ ಆಗುತ್ತಿರಲಿಲ್ಲ, ಹಾಗಾಗಿ ಕೊಡಲೇಬೇಕಾಯಿತು;" "ನಾನು ರಸ್ತೆಯಲ್ಲಿ ಬೈಕ್ ಓಡಿಸಿಕೊಂಡು ಹೋಗುತ್ತಿರುವಾಗ ಮೂವರು ಪೋಲಿಸರು ಅಡ್ಡಗಟ್ಟಿ ಬೈಕ್‌ಗೆ ಸಂಬಂಧಪಟ್ಟ   ಕಾಗದಪತ್ರಗಳನ್ನು ಕೇಳಿದರು. ನನ್ನ ಗೆಳೆಯನ ಬೈಕ್ ಆದ್ದರಿಂದ ಅವನ ಹೆಸರಿನಲ್ಲಿ ಎಲ್ಲಾ ಕಾಗದಪತ್ರಗಳಿದ್ದವು. ಈಗಲೇ ಕೇಸ್ ಹಾಕುತ್ತೇವೆ, ಎರಡು ಸಾವಿರ ರೂ. ದಂಡ ತೆರಬೇಕಾಗುತ್ತದೆ ಎಂದು ಹೆದರಿಸಿದರು. ಆಮೇಲೆ ತಪ್ಪಿಸಿಕೊಳ್ಳಬೇಕಾದರೆ, ಐನೂರು ರೂ. ಕೊಡು ಎಂದರು. ಇನ್ನೇನು ಮಾಡಲಿ? ಗಡಿಬಿಡಿಯಲ್ಲಿದ್ದ ನನಗೆ ದುಡ್ಡು ಕೊಡದೆ ವಿಧಿಯಿರಲಿಲ್ಲ. ರಸ್ತೆಯಲ್ಲಿ ದರೋಡೆ ಮಾಡುವವರನ್ನು ಹೊಡೆಯಬಹುದು, ಆದರೆ ಪೋಲಿಸರನ್ನು ಹೊಡೆಯಲು ಆಗುವುದಿಲ್ಲವಲ್ಲ?" ಎಂದು ಜೋಧ್‌ಪುರ ಹಾಗೂ ಕಲ್ಕತ್ತಾದ ಜನ ಅಸಹಾಯಕತೆ ವ್ಯಕ್ತಪಡಿಸುತ್ತಾರೆ.
ಇನ್ನು ನಮ್ಮ ಬೆಂಗಳೂರಿನಿಂದ ಒಬ್ಬರು, "ಅಂತರರಾಷ್ಟ್ರೀಯ ಡ್ರೈವಿಂಗ್ ಲೈಸನ್ಸ್‌ಗೆ ಅರ್ಜಿ ಹಾಕಲು ಹೋದರೆ ಅಲ್ಲಿನ ಅಧಿಕಾರಿಯೊಬ್ಬರು 2,500 ರೂ. ಲಂಚ ಕೇಳಿದರು. ನನಗೆ ನಿಧಾನವಾಗಿ ಲೈಸೆನ್ಸ್‌ ಸಿಕ್ಕಿದರೆ ಸಾಕು, ದುಡ್ಡು ಕೊಡುವುದಿಲ್ಲ ಅಂದಿದ್ದಕ್ಕೆ ನಿಮ್ಮ ಡ್ರೈವಿಂಗ್ ಟೆಸ್ಟ್‌ನಲ್ಲಿ ಫೇಲ್ ಆಗಬಹುದು, ದುಡ್ಡು ಕೊಟ್ಟುಬಿಡಿ ಎಂದರು. ಆಮೇಲೆ ಸಾವಿರದ ಐನೂರು ರೂ. ಕೊಡಲೇ ಬೇಕಾಯಿತು" ಅಂದರೆ ಇನ್ನೊಬ್ಬರು, "ಕರ್ನಾಟಕ ಸರಕಾರದಲ್ಲಿ ಉದ್ಯೋಗಿಯಾಗಿದ್ದ ನನ್ನ ತಂದೆ ತೀರಿಹೋದ ಆರು ತಿಂಗಳಾದ ಮೇಲೂ ಅವರ ಬಾಕಿ ಪೆನ್ಶನ್ ಹಣವನ್ನು ಕೊಟ್ಟಿಲ್ಲ. ಸಂಬಂಧಪಟ್ಟ ಅಧಿಕಾರಿಯ ಹತ್ತಿರ ಅಲೆದೂ ಅಲೆದೂ ಸಾಕಾಯಿತು. ಕೇಳಿದರೆ ನಾನು ಸಹಾಯ ಮಾಡುತ್ತೇನೆ, ಆದರೆ ಲಂಚ ಕೊಡಬೇಕೆನ್ನುತ್ತಾರೆ. ನಮ್ಮಂತಹ ಸಾಮಾನ್ಯ ಜನ ಅವರು ಹೇಳಿದ ಹಾಗೆ ಕೇಳದೆ ಇನ್ನೇನು ಮಾಡಲು ಸಾಧ್ಯ?" ಎಂದು ತಮ್ಮ ಅಳಲು ತೋಡಿಕೊಳ್ಳುತ್ತಾರೆ.
ಮೇಲೆ ಕೊಟ್ಟಂತಹ ನಿದರ್ಶನಗಳ ತರಹದ ಅನುಭವಗಳು ಎಲ್ಲರಿಗೂ ಒಂದಲ್ಲ ಒಂದು ಹಂತದಲ್ಲಿ ಆಗಿರುತ್ತವೆ. ಭ್ರಷ್ಟಾಚಾರದ ಕಥೆಗಳು ಸಣ್ಣ ಪ್ರಮಾಣದಲ್ಲೇ ಆಗಿರಬಹುದು, ಇಲ್ಲಾ ಕೋಟ್ಯಾಂತರ ರೂಪಾಯಿಗಳನ್ನೊಳಗೊಂಡ 2ಜಿ ಹಗರಣ, ಕಾಮನ್‌ವೆಲ್ತ್ ಗೇಮ್ಸ್‌, ಆದರ್ಶ ಸೊಸೈಟಿ, ಸತ್ಯಂ, ಐಪಿಎಲ್‌ನಂತಹ ಬೃಹತ್ ಪ್ರಮಾಣದ ಕಥೆಗಳೇ ಆಗಿರಬಹುದು. ಆದರೆ ಒಂದೇ ಸಮಾಧಾನದ ವಿಷಯವೆಂದರೆ ಸಣ್ಣ ಪ್ರಮಾಣದ ಭ್ರಷ್ಟಾಚಾರದ ಬಗ್ಗೆ ಕೋಪ ಇಟ್ಟುಕೊಂಡೂ ಅಸಹಾಯಕರಾಗಿ ಸುಮ್ಮನಿದ್ದ ಸಾಮಾನ್ಯ ಜನರಲ್ಲಿ ಈಗ ಅಸಹನೆ ಶುರುವಾಗಿದೆ.
ಫೇಸ್‌ಬುಕ್‌, ಟ್ವಿಟ್ಟರ್, ಆರ್ಕುಟ್‌ನಂತಹ ಸಾಮಾಜಿಕ ಸಂಪರ್ಕಜಾಲಗಳನ್ನು ಉಪಯೋಗಿಸುವವರಿಗೆಲ್ಲ ಈ ಒಂದು ತಿಂಗಳಲ್ಲಿ ಒಂದು ಸಂದೇಶ ತಲುಪಿರುತ್ತದೆ- ಭ್ರಷ್ಟಾಚಾರ ತೊಲಗಿಸಲು ಜನ ಲೋಕಪಾಲ ಮಸೂದೆಯನ್ನು ಜಾರಿಗೆ ತರುವಂತೆ ಒತ್ತಾಯಿಸಿ ಹಿರಿಯ ಗಾಂಧಿವಾದಿ ಅಣ್ಣಾ ಹಜಾರೆ ಏಪ್ರಿಲ್ ಐದರಿಂದ ಅನಿರ್ಧಿಷ್ಟಾವಧಿಯ ಉಪವಾಸ ಸತ್ಯಾಗ್ರಹ ಮಾಡುತ್ತಿದ್ದಾರೆ. ಅದನ್ನು ನಿಮ್ಮ ಊರುಗಳಲ್ಲಿ, ಪಟ್ಟಣಗಳಲ್ಲಿ, ಮನೆಗಳಲ್ಲಾದರೂ ಸರಿ, ನೀವೂ ಬೆಂಬಲಿಸಿ, ನಿಮ್ಮ ಕೈಲಾದ ಮಟ್ಟಿಗೆ ನೀವೂ ಉಪವಾಸ ಮಾಡಿ ಈ ಸತ್ಯಾಗ್ರಹದಲ್ಲಿ ಭಾಗವಹಿಸಿ ಎಂದು. ಅಣ್ಣಾ ಹಜಾರೆಗೆ ಬೆಂಬಲವಾಗಿ ನಿಲ್ಲಲು ಎಲ್ಲಾ ಕಡೆ ಸಮಾಜ ಸೇವಕರು, ಸಾಮಾನ್ಯ ಜನರು ಬದ್ಧರಾಗಿ ನಿಂತಿದ್ದಾರೆ. ಹಜಾರೆ ಉಪವಾಸ ಸತ್ಯಾಗ್ರಹ ಆರಂಭಿಸುವ ಜಂತರ್ ಮಂತರ್‌ಗೆ ಬರಲಾಗದಿದ್ದರೆ ಪರವಾಗಿಲ್ಲ, ನಿಮ್ಮ ನಿಮ್ಮ ಮನೆಗಳಲ್ಲಿ, ಕೆಲಸ ಮಾಡುವ ಸ್ಥಳಗಳಲ್ಲಿ ಆ ಒಂದು ದಿನವಾದರೂ ಉಪವಾಸ ಮಾಡಿ ಎನ್ನುತ್ತಿದಾರೆ ಆ ಆಂದೋಲನದ ಹರಿಕಾರರಾದ ಕಿರಣ್ ಬೇಡಿ ಮತ್ತು ಅರವಿಂದ ಕೇಜ್ರೀವಾಲ್.
ಅಣ್ಣಾ ಹಜಾರೆ ಎಂದು ಜನರಿಂದ ಪ್ರೀತಿಯಿಂದ ಕರೆಯಲ್ಪಡುತ್ತಿರುವ ಕಿಸನ್ ಬಾಬುರಾವ್ ಹಜಾರೆ ಉಪವಾಸ ಸತ್ಯಾಗ್ರಹ ಮಾಡಿ ಸೋತ ಉದಾಹರಣೆಗಳಿಲ್ಲ. ಹಜಾರೆ ಉಪವಾಸಕ್ಕೆ ಕೂತಾಗಲೆಲ್ಲ ನಮ್ಮ ಸರಕಾರಗಳು ನಡುಗಿವೆ. ಮಹಾರಾಷ್ಟ್ರದ ಆರು ಭ್ರಷ್ಟ ಮಂತ್ರಿಗಳನ್ನು ಕಿತ್ತೊಗೆಯಲಾಗಿದೆ, ನಾನೂರು ಅಧಿಕಾರಿಗಳು ಕೆಲಸ ಕಳೆದುಕೊಂಡಿದ್ದಾರೆ, ಮಹಾರಾಷ್ಟ್ರದಲ್ಲಿ ಮಾಹಿತಿ ಹಕ್ಕು ಕಾಯಿದೆ ಜಾರಿಗೆ ಬಂದಿದೆ ಹಾಗೂ ಕೇಂದ್ರೀಯ ಮಾಹಿತಿ ಹಕ್ಕು ಕಾಯಿದೆಯ ತಿದ್ದುಪಡಿ ಮಾಡುವ ನಿರ್ಧಾರವನ್ನು ಕೇಂದ್ರ ಸರ್ಕಾರ ವಾಪಾಸು ಪಡೆದುಕೊಂಡಿದೆ.
ಭಾರತದಂತಹ ಯಾರಿಗೆ ಏನಾದರೂ ಡೋಂಟ್ ಕೇರ್ ಮನೋಭಾವನೆ ಇರುವ ದೇಶದಲ್ಲೇ ರಾಜಕಾರಣಿಗಳ ಬೆವರಿಳಿಸಿರುವ ಎಪ್ಪತ್ತೈದು ವರ್ಷದ ಹಜಾರೆ ಕೇವಲ ಒಬ್ಬ ಬಡ ಕಾರ್ಮಿಕನ ಮಗ. ಮಿಲಿಟರಿಯಲ್ಲಿದ್ದು ಬಂದ ಮೇಲೆ ಸ್ವಾಮಿ ವಿವೇಕಾನಂದರ ಪುಸ್ತಕವೊಂದನ್ನು ಓದಿ ಪ್ರಭಾವಿತರಾದ ಹಜಾರೆ ತನ್ನ ಊರನ್ನು ಉದ್ದಾರ ಮಾಡಲು ಯತ್ನಿಸಿದರು, ಅದರಲ್ಲಿ ಯಶಸ್ವಿಯೂ ಆದರು. ತನ್ನ ಊರಿಗೆ ಶಾಲೆ ಮಂಜೂರು ಮಾಡಲು ಸರ್ಕಾರ ಒಪ್ಪದಿದ್ದಾಗ ಹಜಾರೆ ಉಪವಾಸ ಶುರುಮಾಡಿದರು ಮತ್ತು ತನ್ನ ಯತ್ನದಲ್ಲಿ ಯಶಸ್ವಿಯಾದರು. ಅಲ್ಲಿಂದ ಶುರುವಾದ ಹಜಾರೆ ಯಶೋಗಾಥೆ ಪರಿಸರ ಸಂರಕ್ಷಣೆ, ಕುಡಿತದ ನಿರ್ಮೂಲನೆಯಂತಹ ಸಾಮಾಜಿಕ ಪಿಡುಗುಗಳನ್ನು ನಿವಾರಿಸುವಲ್ಲಿಂದ ಈಗ ಭ್ರಷ್ಟಾಚಾರದ ವಿರುದ್ಧ ಹೋರಾಟದವರೆಗೆ ಬಂದು ನಿಂತಿದೆ.
ಪ್ರಧಾನಿ ಮನಮೋಹನ್ ಸಿಂಗ್ ಕೇವಲ ರಿಮೋಟ್ ಕಂಟ್ರೋಲ್ ಎನ್ನುವ ಹಜಾರೆ, ಸರ್ಕಾರದ ಲೋಕಪಾಲ ಮಸೂದೆ ಭ್ರಷ್ಟ ರಾಜಕಾರಣಿಗಳನ್ನು, ಅಧಿಕಾರಿಗಳನ್ನು ಶಿಕ್ಷಿಸುವ ಬದಲಾಗಿ ರಕ್ಷಿಸುವ ಉದ್ದೇಶದಿಂದ ತಯಾರಾಗುತ್ತಿದೆ ಎನ್ನುತ್ತಾರೆ. ಲೋಕಪಾಲ ಮಸೂದೆಯಡಿ ಲೋಕಪಾಲರಿಗೆ ಯಾವುದೇ ಸ್ವತಂತ್ರ ಕ್ರಮ ಕೈಗೊಳ್ಳುವ ಅಧಿಕಾರ ಇರುವುದಿಲ್ಲ, ಬರಿ ಸಲಹೆ ಕೊಡಬಹುದಷ್ಟೆ. ಸರ್ಕಾರದ ಮಸೂದೆಯಡಿ ಲೋಕಪಾಲರಿಗೆ ಅಧಿಕಾರವಿರುವುದು ಕೇವಲ ರ್ರಾಜಕಾರಣಿಗಳ ಮೇಲೆ ತನಿಖೆ ನಡೆಸಲು, ಅಧಿಕಾರಿಗಳ ಮೇಲಲ್ಲ. ಜೊತೆಗೆ ತಪ್ಪಿತಸ್ಥರ ಬಗ್ಗೆ ಸುದ್ದಿ ಕೊಡುವವರಿಗೆ (Whistleblowers) ಇಲ್ಲಿ ಯಾವುದೇ ರಕ್ಷಣೆಯಿಲ್ಲ. ಅದರ ಬದಲಾಗಿ ಕರ್ನಾಟಕ ಲೋಕಾಯುಕ್ತ ಸಂತೋಷ್ ಹೆಗ್ಡೆ, ಸುಪ್ರೀಂ ಕೋರ್ಟ್ ವಕೀಲ ಪ್ರಶಾಂತ್ ಭೂಷಣ್ ಹಾಗೂ ಸಮಾಜ ಸೇವಕ ಅರವಿಂದ ಕೇಜ್ರೀವಾಲ್ ಜಂಟಿಯಾಗಿ ತಯಾರಿಸಿರುವ ಜನ ಲೋಕಪಾಲ ಮಸೂದೆ ಭ್ರಷ್ಟ ರಾಜಕಾರಣಿಗಳು ಹಾಗೂ ಅಧಿಕಾರಿಗಳು ಇಬ್ಬರ ಮೇಲೂ ಸೂಕ್ತ ಕ್ರಮ ಕೈಗೊಳ್ಳಲು ಲೋಕಪಾಲರಿಗೆ ಹೆಚ್ಚಿನ ಅಧಿಕಾರ ಕೊಡುತ್ತದೆ, ಅದರಿಂದ ಸರ್ಕಾರದಲ್ಲಿ ಪಾರದರ್ಶಕತೆ ತರಲೂ ಅನುಕೂಲವಾಗುತ್ತದೆ. ಲೋಕಪಾಲರ, ಲೋಕಾಯುಕ್ತರ ನೇಮಕಾತಿಯಲ್ಲಿ ರಾಜಕಾರಣಿಗಳು ತಲೆ ಹಾಕುವಂತಿಲ್ಲ, ಎನ್ನುತ್ತಾರೆ.
ಅವರು ಹೇಳೋದರಲ್ಲೂ ಅರ್ಥವಿದೆ. ಹಲ್ಲಿಲ್ಲದ ಹುಲಿಗೆ ಬೇಟೆ ಹಿಡಿದು ಕೊಟ್ಟರೇನು ಉಪಯೋಗ? ಈಗ ಸರ್ಕಾರ ತರಲು ಹೊರಟಿರುವುದೂ ಅಂತಹುದೇ ಒಂದು ಮಸೂದೆ. ಮೊದಲೇ ಸಿಬಿಐ, ಕೇಂದ್ರ ವಿಚಕ್ಷಣಾ ದಳಗಳಂತಹ ಸಂಸ್ಥೆಗಳು ರಾಜಕಾರಣಿಗಳ ಹಿಡಿತದಲ್ಲಿವೆ, ಅವುಗಳಿಂದ ಭ್ರಷ್ಟಾಚಾರದ ಪಾರದರ್ಶಕ ವಿಚಾರಣೆ ಸಾಧ್ಯವಿಲ್ಲ ಎನ್ನುವ ಆರೋಪ ಹೊತ್ತಿರುವಾಗ, ಇನ್ನೊಂದು ಸಂಸ್ಥೆಯನ್ನು ಹುಟ್ಟುಹಾಕಿ ಅದರ ಚುಕ್ಕಾಣಿ ಹಿಡಿಯುವ ಲೋಕಪಾಲರಿಗೆ ಸ್ವತಂತ್ರ ಅಧಿಕಾರ ಕೊಡದಿದ್ದರೆ ತಪ್ಪು ಮಾಡಿದವರನ್ನು ಹಿಡಿದೂ, ಶಿಕ್ಷೆ ಕೊಡಲು ಅಧಿಕಾರವಿಲ್ಲದ ನಮ್ಮ ರಾಜ್ಯದ ಲೋಕಾಯುಕ್ತ ಸಂಸ್ಥೆಯ ತರವೇ ಅದೂ ಹತ್ತರಿಂದ-ಐದು ಕೆಲಸ ಮಾಡಿ ಸಂಬಳ ಎಣಿಸಿಕೊಳ್ಳುವ ಒಂದು ಸರ್ಕಾರಿ ಸಂಸ್ಥೆಯಾಗಿ ಮಾರ್ಪಡುತ್ತದೆ. ಕೇಂದ್ರ ಚುನಾವಣಾ ಆಯೋಗವನ್ನು ರಾತ್ರೋರಾತ್ರಿ ಬದಲಿಸಿದ ರಾಜಕಾರಣಿಗಳ ನಿದ್ದ್ಗೆಡಿಸಿದ ಟಿ.ಎನ್. ಶೇಷನ್, ಸರ್ಕಾರ ತನ್ನ ಕೆಲಸಕ್ಕೆ ಅಡ್ಡ ಬಂತೆಂದು ಭ್ರಷ್ಟ ಐಎ‌ಎಸ್, ಐಪಿಎಸ್ ಅಧಿಕಾರಿಗಳ ಹೆಸರುಗಳನ್ನು ಕೇಂದ್ರ ವಿಚಕ್ಷಣಾ ದಳದ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದ ಅಲ್ಲಿವರೆಗೆ ಅಸ್ಥಿತ್ವದಲ್ಲಿರುವುದರ ಅರಿವೇ ಇರದ ವಿಚಕ್ಷಣಾ ದಳದ ಎನ್. ವಿಟ್ಟಲ್, ತನ್ನ ಕೆಲಸ ಮಾಡಲು ರಾಜಕಾರಣಿಗಳ ಒಪ್ಪಿಗೆಯ ಅಗತ್ಯವಿಲ್ಲ ಎಂದು ಹೇಳಿ ಧೀರೂಭಾಯಿ ಅಂಬಾನಿ ಮನೆಯ ಮೇಲೆ ದಾಳಿ ಮಾಡಿದ ಸಿಬಿಐ ಡೈರೆಕ್ಟರ್ ಆಗಿದ್ದ ತ್ರಿನಾಥ್ ಮಿಶ್ರಾ ಇಂಥ ದಕ್ಷ ಅಧಿಕಾರಿಗಳಿದ್ದ ಸಂಸ್ಥೆಗಳು ಈಗ ಪೂರ್ತಿಯಾಗಿ ಬದಲಾಗಿವೆ. ಈಗ ಲೋಕಪಾಲ ಮಸೂದೆ ತಂದರೆ, ಅದಕ್ಕೂ ಇದೇ ಗತಿ. ದಕ್ಷ ಅಧಿಕಾರಿಗಳಿರುವವರೆಗೂ ಯಾವ ಸಂಸ್ಥೆಯಾದರೂ ಪ್ರಾಮಾಣಿಕವಾಗಿಯೇ ಕೆಲಸ ಮಾಡುತ್ತದೆ. ಈಗಿರುವ ಸಂಸ್ಥೆಗಳನ್ನೇ ಶುಚಿಗೊಳಿಸಿ ಅವುಗಳ ಅಧಿಕಾರ ವ್ಯಾಪ್ತಿಯನ್ನು ಹೆಚ್ಚಿಸಿದರೆ ಮಾತ್ರ ನಮ್ಮ ಸಾಮಾಜಿಕ ವ್ಯವಸ್ಥೆ ಸರಿಯಾಗುತ್ತದೆ.
ಜೈನ್ ಹವಾಲಾ ಹಗರಣವನ್ನು ೧೯೯೫ರಲ್ಲಿ ಬೆಳಕಿಗೆ ತಂದ ಪತ್ರಕರ್ತ ವಿನೀತ್ ನರೇನ್‌ರನ್ನು ಮೊನ್ನೆ ಜನವರಿಯಲ್ಲಿ ನಡೆದ 'ಭ್ರಷ್ಟಾಚಾರದ ವಿರುದ್ದ ನಡಿಗೆ' ಆಂದೋಲನದಲ್ಲಿ ಯಾಕೆ ಭಾಗವಹಿಸಲಿಲ್ಲ ಎಂದು ಯಾರೋ ಕೇಳಿದಾಗ ಅವರು ಕೊಟ್ಟ ಉತ್ತರ, "ಎಷ್ಟು ಆಂದೋಲನಗಳು ನಡೆದರೂ ನಮ್ಮ ವ್ಯವಸ್ಥೆ ಸರಿಯಾಗುವುದಿಲ್ಲ. ಅದಕ್ಕೇ ನಡಿಗೆ ನಡೆಯುವ ಸ್ಥಳಕ್ಕೆ ಹೋಗಿ ವಾಪಾಸು ಬಂದೆ."
ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರ ಕಚೇರಿಯಲ್ಲೇ ಪಕ್ಷದ ಟಿಕೆಟುಗಳು ಮಾರಾಟವಾಗುತ್ತಿವೆ ಎಂದು ಕೇರಳ ಕಾಂಗ್ರೆಸ್ ಹಿರಿಯ ನಾಯಕ ಮಾಜಿ ಆರೋಗ್ಯ ಸಚಿವ ಕೆ. ರಾಮಚಂದ್ರನ್ ಆರೋಪ ಮಾಡಿದ್ದಾರೆ. ಕಾಂಗ್ರೆಸ್‌ನ 'ಕಾಸಿಗಾಗಿ ಓಟು' ಹಗರಣದಲ್ಲಿ ಕಳೆದ ವರ್ಷ ಪದ್ಮಭೂಷಣ ಗೌರವ ಸ್ವೀಕರಿಸಿದ ವ್ಯಕ್ತಿಯ ಹೆಸರೂ ಕೇಳಿಬರುತ್ತಿದೆ. ಭಾರತೀಯ ಸ್ಟೇಟ್ ಬ್ಯಾಂಕ್‌ಗೆ ಸುಮಾರು 41 ಕೋಟಿ ರೂಪಾಯಿ ವಂಚಿಸಿದ ಪ್ರಕರಣದಲ್ಲಿ ಸಿಬಿಐಯಿಂದ ಬಂಧನಕ್ಕೊಳಗಾಗಿದ್ದ ಅನಿವಾಸಿ ಭಾರತೀಯ ಸಂತಾ ಸಿಂಗ್ ಛತ್ವಾಲ್ ಕ್ರಿಮಿನಲ್ ಕೇಸು ಎದುರಿಸಿದವರು. ಇಂತಹ ಸರ್ಕಾರದ ಪ್ರಯತ್ನ ಎಲ್ಲಿಯವರೆಗೆ ಸಫಲವಾಗುತ್ತದೆ? ಆ ಪ್ರಯತ್ನದ ನಿಜವಾದ ಉದ್ದೇಶವಾದರೂ ಏನು?
ಆದರೂ ಇಂತಹ ಪ್ರಶ್ನೆಗಳ ನಡುವೆಯೂ ನಾವು ಅಣ್ಣಾ ಹಜಾರೆಗೆ ಬೆಂಬಲ ಸೂಚಿಸಬೇಕು, ಉಪವಾಸ ಮಾಡಿ ಅಥವಾ ದಿನನಿತ್ಯದ ಭ್ರಷ್ಟಾಚಾರಗಳ ವಿರುದ್ದ ಪ್ರತಿಭಟಿಸಿ. ಈಜಿಪ್ಟ್‌ನಲ್ಲಿ ಸರಕಾರವನ್ನೇ ಬೀಳಿಸಿದ ಸಾಮೂಹಿಕ ಕ್ರಾಂತಿ ಕೂಡ ಫೇಸ್‌ಬುಕ್‌ನ ಒಂದು ಸಣ್ಣ ಸಂದೇಶದಿಂದಲೇ ಶುರುವಾಯಿತು ಎನ್ನುವುದನ್ನು ನಾವು ಮರೆಯಬಾರದು. ಜನರ ಅಸಹನೆ ಒಂದು ಆಂದೋಲನವಾಗಿ ಮಾರ್ಪಟ್ಟರೆ ಅದಕ್ಕಿಂತ ದೊಡ್ಡ ಚಳುವಳಿಯ ಅಗತ್ಯವಿಲ್ಲ. ಕ್ರಿಕೆಟ್‌ಗೋಸ್ಕರ ಬೀದಿಗಿಳಿಯುವ ಜನ, ಭ್ರಷ್ಟಾಚಾರದ ವಿರುದ್ದ ಇಳಿಯಲಾರರೇ?

0 comments: