Pages

Subscribe:

Ads 468x60px

Wednesday, September 6, 2017

ಮಾನವ ಹಕ್ಕು ?

ನಮ್ಮ ಆಂಗ್ಲ ಪತ್ರಿಕೆಯೊಂದು ಮೊನ್ನೆ ಮೊನ್ನೆ ಕಾಶ್ಮೀರದಲ್ಲಿ ಸೈನ್ಯದ ಜೀಪಿಗೆ ನಾಗರಿಕನೊಬ್ಬನನ್ನು ಕಟ್ಟಿಕೊಂಡು ಹೋದ ಘಟನೆಯನ್ನು ಹೇಗೆ ಹೇಗೋ ತಿರುಚಿ ಮುರುಚಿ ಜಲಿಯನ್‍ವಾಲಾ ಬಾಗ್‍ ಹತ್ಯಾಕಾಂಡಕ್ಕೆ ಹೋಲಿಸಿತು. ಆ ಭಾರತೀಯ ಸೇನಾಧಿಕಾರಿಯನ್ನು ಜನರಲ್ ಡೈಯರ್‌ಗೆ ಹೋಲಿಸಿ ಸಮಾಧಾನಪಟ್ಟುಕೊಂಡಿತು.
ಕಾಶ್ಮೀರದಲ್ಲಿ ನಡೆದದ್ದು ಹಿಂಸೆಯನ್ನು ತಡೆಯುವ ಪ್ರಯತ್ನ; ಬ್ರಿಟಿಷರದ್ದು ಕುತಂತ್ರದ ಕಗ್ಗೊಲೆ. ನಿಜವಾಗಿಯೂ ಜಲಿಯನ್‍ವಾಲಾ ಬಾಗ್‍ನ್ನು ಹೋಲಿಸಬೇಕಾದ್ದು ಇಂದಿರಾ ತಂದ ತುರ್ತುಪರಿಸ್ಥಿತಿಗೆ. ಇರಲಿ. ಸುಮಾರು 98 ವರ್ಷಗಳ ಹಿಂದೆ ನಡೆದ ಜಲಿಯನ್‍ವಾಲಾ ಬಾಗ್‍ ಹತ್ಯಾಕಾಂಡದ ಬಗ್ಗೆ ಓದಿದಾಗೆಲ್ಲ ನನಗೆ ನೆನಪಾಗೋದು 1989ರ ಚೀನಾದ ಟಿಯಾನನ್ಮೆನ್‍ ಸ್ಕ್ವೇರ್‌ ಮಾರಣಹೋಮ. ಸರಕಾರವೇ ತಾನು ರಕ್ಷಿಸಬೇಕಾದ ಜನಗಳ ಮೇಲೆ ಮಾಡಿದ ಹಿಂಸಾಚಾರ. ನಾವು ಭಾರತೀಯರೆಲ್ಲ ತುಂಬ ಹಗುರವಾಗಿ ತೆಗೆದುಕೊಂಡಿರುವ ಪ್ರಜಾಪ್ರಭುತ್ವ ಬೇಕೆಂದು ಆಶಿಸಿ ಶಾಂತಿಯಿಂದ ಪ್ರತಿಭಟಿಸಲು ಹೋದ ನೂರಾರು ವಿದ್ಯಾರ್ಥಿಗಳು, ಬುದ್ಧಿಜೀವಿಗಳು ಮಾತ್ರವಲ್ಲದೆ ಸಾಮಾನ್ಯ ಜನರೂ ಪ್ರಾಣ ಕಳೆದುಕೊಂಡ, ಇನ್ನೂ ಜೈಲಿನಲ್ಲೇ ಕೊಳೆಯುತ್ತಿರುವ, ನಾಪತ್ತೆಯಾಗಿರುವ ಘಟನೆ.
ಆ ಟಿಯಾನನ್ಮೆನ್ ಸ್ಕ್ವೇರ್‍ ಪ್ರತಿಭಟನೆಯಲ್ಲಿ ಕಮ್ಯುನಿಸ್ಟ್ ಸರ್ಕಾರ ಮತ್ತು ವಿದ್ಯಾರ್ಥಿಗಳ ಮಧ್ಯೆ ಸೇತುವೆಯಾಗಿದ್ದ, ನೂರಾರು ಪ್ರತಿಭಟನಾಕಾರರನ್ನು ಹಿಂಸೆಯಿಂದ ರಕ್ಷಿಸಿದ ಶಿಕ್ಷಕ ನೊಬೆಲ್ ಶಾಂತಿ ಪುರಸ್ಕೃತ ಲಿಯು ಕ್ಸಿಯಾಬೋನನ್ನು ಇಷ್ಟು ವರ್ಷ ಪದೇ ಪದೇ ಜೈಲಿಗಟ್ಟಿದ ಚೀನಾ ಸರ್ಕಾರ ಮೊನ್ನೆ ಕ್ಯಾನ್ಸರ್‌ ಚಿಕಿತ್ಸೆಗಾಗಿ ಪರೋಲ್ ಮೇಲೆ ಜೈಲಿನಿಂದ ಕಳಿಸಿತು. ಆದರೆ ಕೊನೆ ಹಂತದಲ್ಲಿರುವ ಅವನ ಕ್ಯಾನ್ಸರ‍್‍ಗೆ ಸರ್ಕಾರ ಹೇಳಿದ ಆಸ್ಪತ್ರೆಯಲ್ಲೇ ನಾಮಕಾವಾಸ್ತೆ ಚಿಕಿತ್ಸೆ ಕೊಡಲಾಗುತ್ತಿದೆ.
ಮಾನವ ಹಕ್ಕು ಅನ್ನೋ ಪದವನ್ನು ತಮ್ಮ ಶಬ್ದಕೋಶದಲ್ಲೇ ಇರಗೊಡದ ಚೀನಾ ಸರ್ಕಾರ ತನ್ನ ವಿರುದ್ಧ ಬರೆದ, ಮಾತನಾಡಿದ ಯಾರನ್ನೂ ಬಿಟ್ಟಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯ ಪರವಾಗಿ ಮಾತನಾಡಿದ ಸಾವಿರಾರು ವಕೀಲರು, ಪತ್ರಕರ್ತರು, ಕಲಾವಿದರು, ಚಳುವಳಿಗಾರರು ಇವತ್ತಿಗೂ ಏನಾದರೆಂದು ಅವರ ಮನೆಯವರಿಗೂ ಗೊತ್ತಿಲ್ಲ. ಕೆಲವರು ಜೈಲಿನಲ್ಲಿ ಜೀವಂತ ಶವವಾಗಿ ವರ್ಷಗಟ್ಟಲೆ ಉಳಿದರೆ, ಹಲವರು ದೇಶ ಬಿಟ್ಟು ಹೋಗಿದ್ದಾರೆ. ಇನ್ನುಳಿದವರು ಮತ್ತೆಂದೂ ಬರದಂತೆ ಕಾಣೆಯಾಗಿದ್ದಾರೆ.
ವ್ಯಾಟಿಕನ್ ಕಳುಹಿಸುವ ಕ್ರಿಶ್ಚಿಯನ್‍ ಪಾದ್ರಿಗಳೂ ಕಾಣೆಯಾಗುತ್ತಾರೆ; ಯಾಕೆಂದರೆ ಚೀನಾ ವ್ಯಾಟಿಕನ್‍ ಚರ್ಚನ್ನು ತಿರಸ್ಕರಿಸಿ ತನ್ನದೇ ಚರ್ಚ್ ಸ್ಥಾಪನೆ ಮಾಡಿಕೊಂಡಿದೆ. ಇನ್ನು ಅಲ್ಲಿ ಇರುವ ಮುಸ್ಲಿಮರು ತಮ್ಮ ಧರ್ಮದ ಚಿಹ್ನೆ ದಾಡಿ ಇಟ್ಟುಕೊಳ್ಳುವಂತಿಲ್ಲ. ಹೆಂಗಸರು ಬುರ್ಖಾ ಹಾಕುವಂತಿಲ್ಲ. ಮುಸ್ಲಿಮ್ ಹೆಸರನ್ನು ಮಕ್ಕಳಿಗೆ ಇಡುವಂತಿಲ್ಲ. ರಂಜಾನ್‍ ಹಬ್ಬಕ್ಕೆ ಉಪವಾಸ ಮಾಡುವಂತಿಲ್ಲ.
’ಬರಿಗಾಲ ವಕೀಲ’ ಎಂದೇ ಚೀನಾದಲ್ಲಿ ಖ್ಯಾತನಾಗಿರುವ ಚೆನ್ ಗ್ವಾಂಗ್‍ಚೆಂಗ್‍ ಸರ್ಕಾರದ ವಿರುದ್ಧದ ಹೋರಾಟಕ್ಕಾಗಿ ಅನುಭವಿಸಿದ ಕಷ್ಟಗಳು ಒಂದೆರಡಲ್ಲ. ಬಾಲ್ಯದಿಂದಲೇ ಕುರುಡನಾದ ಚೆನ್‍ ಅಂಗವಿಕಲ ಹಕ್ಕುಗಳಿಗಾಗಿ, ಚೀನಾದ ’ಒಂದೇ ಮಗು’ ಶಾಸನದ ಮತ್ತು ಅಧಿಕಾರಿಗಳ ಭ್ರಷ್ಟಾಚಾರದ ವಿರುದ್ಧ ಹೋರಾಟ ಆರಂಭಿಸಿದ. ಅವನ ಜನಪ್ರಿಯತೆಗೆ ಹೆದರಿದ ಸರ್ಕಾರ ಅವನನ್ನು ಅಪಹರಿಸಿ, ಚಿತ್ರಹಿಂಸೆ ಕೊಟ್ಟು ಗೃಹಬಂಧನದಲ್ಲಿಟ್ಟಿತು. ಆದರೂ ತನ್ನ ಹೋರಾಟ ಬಿಡದ ಚೆನ್‍ ಏಳು ವರ್ಷದ ನಂತರ ಒಂದು ದಿನ ತನ್ನ ಮನೆಯಿಂದ ಕಾವಲುಗಾರರ ಕಣ್ಣುತಪ್ಪಿಸಿ ನೆಲದ ಮೇಲೆ ತೆವಳಿಕೊಂಡು ತನ್ನ ಊರು ದಾಟಿ, ಅಮೇರಿಕಾದ ಎಂಬೆಸಿ ಸೇರಿ ಅಲ್ಲಿಂದ ಅಮೇರಿಕಾಗೆ ತೆರಳಿದ. ಅಲ್ಲಿಂದ ತನ್ನ ಹೋರಾಟವನ್ನು ಮುಂದುವರೆಸಿದ. ಟೈಮ್‍ ಮ್ಯಾಗಜೀನ್‍ನ ’ತಮ್ಮ ಶಕ್ತಿ, ಬುದ್ಧಿವಂತಿಕೆ ಮತ್ತು ನೈತಿಕ ಉದಾಹರಣೆಗಳಿಂದ ಜಗತ್ತನ್ನು ಬದಲಾಯಿಸಿದ ನೂರು ಮಂದಿ’ಯಲ್ಲಿ ಚೆನ್ ಕೂಡ ಒಬ್ಬ.
ಇಂತಹ ಉದಾಹರಣೆಗಳು ಚೀನಾದಲ್ಲಿ ಸಾವಿರಾರು. ಹೊಡೆತ, ಉಪವಾಸ, ನಿದ್ರೆ-ನೀರು-ಔಷಧಿ ಕೊಡದೆ ಚಿತ್ರಹಿಂಸೆಗಳು, ಒತ್ತಾಯದ ತಪ್ಪೊಪ್ಪಿಗೆ ಇವೆಲ್ಲದರಿಂದ ನರಳಿ ಕೊನೆಗೂ ಬಿಡುಗಡೆಯಾದ ಸ್ವೀಡನ್‍ನ ಎನ್‍ಜಿಒ ಒಂದರ ಮಾನವ ಹಕ್ಕು ಕಾರ್ಯಕರ್ತ ಪೀಟರ‍್ ಡಾಹ್ಲಿನ್‍ನಂತಹ ಸುಮಾರು ಎರಡೂವರೆ ಸಾವಿರಕ್ಕೂ ಹೆಚ್ಚು ಕಾರ್ಯಕರ್ತರನ್ನು 2012-2015ರ ಅವಧಿಯಲ್ಲಿ ಚೀನಾ ಬಂಧಿಸಿದೆ.
ಅಲ್ಲಿನ ಟೀವಿ ಚಾನಲ್‍ಗಳು ’ಅತಿ ಮನೋರಂಜಿತ’ ಕಾರ್ಯಕ್ರಮಗಳನ್ನು ಪ್ರಸಾರ ಮಾಡುವಂತಿಲ್ಲ ಮತ್ತು ದಿನಾ ಎರಡು ಗಂಟೆ ಕಮ್ಯುನಿಸ್ಟ್ ಪಾರ್ಟಿಗೆ ಸಂಬಂಧಪಟ್ಟ ನ್ಯೂಸ್‍ ಹಾಕಲೇಬೇಕು. ಚಿತ್ರಮಂದಿರಗಳಲ್ಲಿ ಜುಲೈ ೧ರಿಂದ ಕಮ್ಯುನಿಸ್ಟ್ ಪಾರ್ಟಿಗೆ ಮತ್ತು ಸಮಾಜವಾದಕ್ಕೆ ಸಂಬಂಧಪಟ್ಟ ವೀಡಿಯೋಗಳನ್ನು ಕಡ್ಡಾಯವಾಗಿ ನೋಡಲೇಬೇಕು. ನಮ್ಮಲ್ಲಿ ಮೋದಿ ಸರ್ಕಾರ ತನ್ನ ಪಾರ್ಟಿ ಸಿದ್ಧಾಂತಗಳನ್ನು ಸಿನೆಮಾ ಹಾಲ್‍ಗಳಲ್ಲಿ ತೋರಿಸಲು ಪ್ರಾರಂಭಿಸಿದರೆ ಆಗುವ ಪ್ರತಿಭಟನೆಗಳನ್ನು ಊಹಿಸಿಕೊಳ್ಳಿ.
ಅಲ್ಲಿ ಫೇಸ್‍ಬುಕ್‍, ಟ್ವಿಟ್ಟರ‍್ ಇಲ್ಲ, ಸರ್ಕಾರಿ ಪ್ರಾಯೋಜಿತ ಸಾಮಾಜಿಕ ಜಾಲತಾಣಗಳಲ್ಲಿ ಅಲ್ಲಿನ ಸರ್ಕಾರದ ವಿರುದ್ಧ ಮಾತನಾಡುವಂತಿಲ್ಲ. ಕಡ್ಡಿಯನ್ನು ಗುಡ್ಡ ಮಾಡಿ, ನೋಡಿ ಈ ಗುಡ್ಡ ನಿಮ್ಮನ್ನೇ ಹೂತುಹಾಕುತ್ತದೆ ಎಂದು ಹೆದರಿಸುವ, ವಾಕ್ ಮತ್ತು ಪತ್ರಿಕಾ ಸ್ವಾತಂತ್ರ್ಯದ ಬಗ್ಗೆ ಸಿಕ್ಕಾಪಟ್ಟೆ ಮಾತಾಡುವ ನಮ್ಮ ಕುಬುದ್ಧಿಜೀವಿಗಳು ಒಮ್ಮೆ ಚೀನಾಕ್ಕೆ ಹೋಗಿ ಇರಬೇಕು. ಅಲ್ಲಿನ ರಸ್ತೆ, ಸಬ್‍ವೇ, ವಿಮಾನ ನಿಲ್ದಾಣ ಎಲ್ಲಾ ಸಾರ್ವಜನಿಕ ಸ್ಥಳಗಳಲ್ಲಿ ಮಾತ್ರವಲ್ಲ ನೀವು ಮೂತ್ರ ವಿಸರ್ಜನೆಗೆ ಹೋದರೆ ಅಲ್ಲೂ ನಿಮ್ಮನ್ನು ಸರ್ಕಾರ ಹದ್ದಿನ ಕಣ್ಣಿಂದ ನೋಡ್ತಾ ಇರುತ್ತದೆ. ಎಲ್ಲಿಯೂ ನಿಮ್ಮದೇ ಎನ್ನುವ ಏಕಾಂತ ಇಲ್ಲ.
ಮೋದಿ ಪ್ರಧಾನಿಯಾದ ಮೇಲೆ ನಮ್ಮ ದೇಶದಲ್ಲಿ ಅಸಹಿಷ್ಣುತೆ ಹೆಚ್ಚಾಗಿದೆ ಅಂತ ಬೊಬ್ಬೆ ಹೊಡೆಯೋ, ಎಸಿ ನ್ಯೂಸ್‍ ರೂಮ್‍ಗಳಿಂದ ಹೊರಗೇ ಹೋಗದಿರೋ armchair journalistಗಳು ಹುಡುಕಿ ತೆಗೆಯಬೇಕಾದದ್ದು, ಭಾರತದಲ್ಲಿ ಎಷ್ಟು ಜನ ಸರ್ಕಾರದ ವಿರುದ್ಧ ಮಾತಾಡಿದ್ದಕ್ಕಾಗಿ, ಪ್ರತಿಭಟಿಸಿದ್ದಕಾಗಿ ಜೈಲಿನಲ್ಲಿದ್ದಾರೆ? ಮಾಸ್ಕೋದ ರೆಡ್‍ ಸ್ಕ್ವೇರ್‍ ಮಧ್ಯೆ ನಿಂತು ಅಲ್ಲಿನ ಕ್ರಾಂತಿಯನ್ನು ನೆನೆಸಿಕೊಂಡು ರೋಮಾಂಚನಗೊಳ್ಳುವ ಅರುಂಧತಿ ರಾಯ್‍ ಆಗಲೀ, ’ಭಾರತ್‍ ಕೀ ಬರ್ಬಾದೀ’ ಎಂದು ಅರಚಿಕೊಳ್ಳುವ ’ವಿದ್ಯಾರ್ಥಿ’ಗಳಾಗಲೀ ಮತ್ತು ಅವರಿಗೆ ಬೆನ್ನಾಗಿ ನಿಂತು ಬೆಂಕಿಯಿಲ್ಲದ ಒಲೆಯಲ್ಲಿ ತಮ್ಮ ಬೇಳೆ ಬೇಯಿಸಿಕೊಳ್ಳಲು ಯತ್ನಿಸುವ ನಮ್ಮ ಪತ್ರಕರ್ತರಾಗಲೀ ನೆನಪಿಡಬೇಕಾದದ್ದು, ನಮ್ಮ ದೇಶದಲ್ಲಿ ಅಸಹಿಷ್ಣುತೆ ಇದ್ದಿದ್ದರೆ, ಬಿಜೆಪಿ ಭಾರತವನ್ನು ಹಿಂದೂ ರಾಷ್ಟ್ರ ಮಾಡಲು ಪ್ರಯತ್ನಿಸುತ್ತಿದ್ದರೆ, ಅವರೆಲ್ಲ ಇಷ್ಟು ಹೊತ್ತಿಗೆ ಚೀನಾದ ಹೋರಾಟಗಾರರ ತರ ’ಶಾಶ್ವತವಾಗಿ ಕಾಣೆಯಾದವರ’ ಪಟ್ಟಿಯಲ್ಲಿ ಒಂದು ಫೋಟೋ ಆಗಿರುತ್ತಿದ್ದರು. ಅರುಂಧತಿ ರಾಯ್‍ ಮೋದಿಯನ್ನು ಪರೋಕ್ಷವಾಗಿ ಬೈದು ತನ್ನ ಹೊಸ ಪುಸ್ತಕ ಬರೆಯುತ್ತಿರಲಿಲ್ಲ. ಕನ್ಹಯ್ಯ ಕುಮಾರ್ ನಿರಾಳವಾಗಿ ಪಿಎಚ್‍ಡಿ ಮುಗಿಸಲು ಓದುತ್ತಿರಲಿಲ್ಲ.
ಇವರೆಲ್ಲ ಬೆಂಬಲಿಸುತ್ತಿರೋ ಸಿದ್ಧಾಂತದ ಹರಿಕಾರ ಮಾವೋ ಚೀನಾವನ್ನು ತನ್ನ ತತ್ವಗಳ ಚೌಕಟ್ಟಿನೊಳಗೆ ಬಂಧಿಸುವ ಪ್ರಯತ್ನದಲ್ಲಿ ಬಲಿಯಾದವರು ಬರೋಬ್ಬರಿ ಮೂರು ಕೋಟಿ ಅರವತ್ತು ಸಾವಿರ ಜನ. ಅದೇ ಚೀನಾದ ಮಾನವ ಹಕ್ಕು ಉಲ್ಲಂಘನೆಗಳ ಬಗ್ಗೆ ನಮ್ಮ ಬುದ್ಧಿಜೀವಿಗಳ್ಯಾರೂ ಅಂತರರಾಷ್ಟ್ರೀಯ ವೇದಿಕೆಯಲ್ಲಿ ಮಾತಾಡುವುದಿಲ್ಲ. ಎಷ್ಟೇ ಆದರೂ ಅಮೇರಿಕಾದ ಸಿಐಎ ಹೊರಹಾಕಿದ ದಾಖಲೆಗಳ ಪ್ರಕಾರ 1962ರ ಭಾರತ-ಚೀನಾ ಯುದ್ಧದಲ್ಲಿ ಚೀನಾಕ್ಕೆ ಬೆಂಬಲ ಸೂಚಿಸಿದ, ದೇಶಕ್ಕಿಂತ ಸಿದ್ಧಾಂತವೇ ಮುಖ್ಯ ಎನ್ನುವ, ಆದರೆ ತಮ್ಮ ಸಿದ್ಧಾಂತದ ಎದುರು ಬಂದ ಜನಸಾಮಾನ್ಯರನ್ನು ಹೊಸಕಿ ಹಾಕಲು ’ಮಾನವ ಹಕ್ಕು’ ಅಡ್ದ ಬರದೆ ಇರುವ ಅತಿಬುದ್ಧಿಜೀವಿಗಳಲ್ಲವೇ ನಮ್ಮವರು? ಫ್ರೆಂಚ್‍ ತತ್ವಜ್ಞಾನಿ ವಾಲ್ಟೇರ‍್ ಹೇಳಿದಂತೆ, "ಮೂರ್ಖರನ್ನು ಅವರೇ ಪೂಜಿಸುವ ಸರಪಳಿಗಳಿಂದ ಬಿಡುಗಡೆಗೊಳಿಸುವುದು ಅಸಾಧ್ಯ."
ಈಗ ಚೀನಾ ಮತ್ತೆ ಕಾಲು ಕೆರೆದು ಜಗಳಕ್ಕೆ ಬರುತ್ತಿದೆ. ಟಿಬೆಟ್‍ ಅವರದಾಯಿತು, ಪಾಕ್‍ ಆಕ್ರಮಿತ ಕಾಶ್ಮೀರದಲ್ಲಿ ಬಂದು ಕೂತಾಯಿತು. ಈಗ ಭೂತಾನ್‍ ಮತ್ತು ಸಿಕ್ಕಿಂ ಮೇಲೆ ಕಣ್ಣು ಹಾಕಿದೆ. ನಮ್ಮೊಳಗೇ ಟೊಳ್ಳಿರುವಾಗ ಹೊರಗಿನವರು ಕೊಟ್ಟ ಪೆಟ್ಟು ಬೇಗ ತಾಗುತ್ತದೆ. ದೇಶಪ್ರೇಮವೂ ಅಪಹಾಸ್ಯಕ್ಕೊಳಗಾದ ಈ ಸಮಯದಲ್ಲಿ ನನಗೆ ಚೀನಾದ ಎದುರು 1962ರಲ್ಲಿ ಕಾಲಿಗೆ ಬೂಟುಗಳಿಲ್ಲದೆ, ಚಳಿಗೆ ಉಣ್ಣೆಯ ಬಟ್ಟೆಯಿಲ್ಲದೆ, ಯುದ್ಧ ಶುರುವಾದರೆ ಕಿಸೆಯಲ್ಲಿ ಕೇವಲ ಅರ್ಧ ಗಂಟೆ ಮಾತ್ರ ಹೋರಾಡುವಷ್ಟು ಬುಲೆಟ್‍ಗಳನ್ನಿಟ್ಟುಕೊಂಡು ಸೋತ ಆ ಭಾರತೀಯ ಸೈನಿಕ ಮತ್ತೆ ಮತ್ತೆ ನೆನಪಾಗುತ್ತಾನೆ.

0 comments: