Pages

Subscribe:

Ads 468x60px

Saturday, December 19, 2009

ಜೀವ ರೂಪಿಸುತ್ತಿದ್ದ ನದಿಗಳ ಒಡಲಲ್ಲಿಂದು ವಿಷ ತುಂಬಿದವರ್ಯಾರು?

ಸುಮ್ಮನೆ ಒಂದು ತೀರ್ಥಕ್ಷೇತ್ರದಲ್ಲಿ ನದಿ ದಂಡೆಯಲ್ಲಿ ನಿಂತುಕೊಂಡು ಒಬ್ಬ ಭಕ್ತನಾಗಿ ಅಲ್ಲ, ಒಬ್ಬ ವ್ಯಕ್ತಿ ಮಾತ್ರ ಆಗಿ ಆ ನದಿಯನ್ನು ನೋಡಿ. ಅಲ್ಲಿ ಹತ್ತಾರು ಜನ ಸ್ನಾನ ಮಾಡ್ತಾ ಇರ್ತಾರೆ, ಇನ್ನು ಕೆಲವರು ಆ ನೀರನ್ನು ತಲೆ ಮೇಲೆ ಪ್ರೋಕ್ಷಣೆ ಮಾಡಿಕೊಳ್ತಾ ಇರ್ತಾರೆ. ಅದೇ ನದೀಪಾತ್ರದಲ್ಲಿ ಮುಂದೆ ಹೋದರೆ ಮುಂದಿನ ಹಳ್ಳಿಯವರು ಆ ನೀರನ್ನು ಮನೆಗೆ ಹೊತ್ತುಕೊಂಡು ಹೋಗ್ತಾ ಇರ್ತಾರೆ, ಇನ್ನೂ ಮುಂದೆ ಹೋದರೆ ಒಂದು ಫ್ಯಾಕ್ಟರಿಯಿಂದ ಶುದ್ಧೀಕರಿಸದ ಕೊಳಚೆ ನೀರು ಆ ನದಿಗೆ ಸೇರುತ್ತಿರುತ್ತದೆ. ಹರೀತಾ ಇರೋ ನೀರಿಗೆ ಮೈಲಿಗೆ ಇಲ್ವಂತೆ. ಹಾಗಂತ ನಮ್ಮ ಜನ ಶತಮಾನಗಳಿಂದ ನಂಬಿಕೊಂಡು ಬಂದಿದ್ದಾರೆ ಮತ್ತು ಅದನ್ನೇ ತಪ್ಪದೆ ಪಾಲಿಸಿಕೊಂಡು ಬರ್ತಾ ಇದ್ದಾರೆ.
ಬೇರೆ ದೇಶದಿಂದ ಬಂದ ಯಾತ್ರಿಗಳಿಗೆ ಇಲ್ಲಿ ಕುಡಿಯೋಕೆ ಬಾಟಲ್ ನೀರೇ ಬೇಕು. ಹೋಗಲಿ ಅವರು ವಿದೇಶೀಯರು. ಆದರೆ ನಮ್ಮ ’ಫಾರಿನ್ ರಿಟರ್ನ್ಡ್’ ಭಾರತೀಯರು ವಿದೇಶೀಯರಿಗಿಂತ ಒಂದು ಹೆಜ್ಜೆ ಮುಂದೆ, ಅಲ್ಲಿಂದ ಬರುವಾಗಲೇ ಇರುವಷ್ಟು ದಿನಕ್ಕಾಗುವಷ್ಟು ನೀರನ್ನು ಬಾಟಲ್ ಗಳಲ್ಲಿ ಹೊತ್ತು ತರ್ತಾರೆ. ಇಲ್ಲೇ ಹುಟ್ಟಿ, ಇಲ್ಲೇ ಬೆಳೆಯುವವರೆಗೆ ಈ ನೀರು ವರ್ಜ್ಯ ಅನ್ನಿಸಿರಲಿಲ್ಲ, ಅಲ್ಲಿ ಹೋಗಿ ಎರಡು ವರ್ಷ ಇದ್ದ ಕೂಡಲೆ ಭಾರತ ಕೊಳಕರ ದೇಶ ಆಯಿತಾ ಅನ್ನಿಸ್ತಾ ಇತ್ತು. ಆದರೆ ಈಗ ಅವರೆಲ್ಲ ಮಾಡ್ತಾ ಇದ್ದಿದ್ರಲ್ಲಿ ತಪ್ಪೆನು ಇಲ್ಲ ಅನ್ನಿಸ್ತಾ ಇದೆ. ಅವರು ಅವರವರ ಆರೋಗ್ಯ ನೋಡಿಕೊಳ್ತಾ ಇದ್ದಾರೆ ಅಷ್ಟೆ.
ನಮ್ಮ ದೇಶದಲ್ಲಿ ಇರುವಷ್ಟು ನದಿಗಳು ಬೇರೆಲ್ಲೂ ಇಲ್ಲ, ನಾಗರಿಕತೆಗಳು ಹುಟ್ಟಿದ್ದೆಲ್ಲ ನದಿತೀರಗಳಲ್ಲೆ-- ಅಂತೆಲ್ಲ ಈಗಲೂ ಮಕ್ಕಳು ತಮ್ಮ ಪಠ್ಯಪುಸ್ತಕಗಳಲ್ಲಿ ಓದ್ತಾ ಇದ್ದಾರೆ. ಆದರೆ ಅವರಿಗೆ ಯಾರೂ ಹೇಳದೆ ಇರೋ ಸತ್ಯಗಳು ತುಂಬಾ ಇವೆ. ಈಗ ಮಕ್ಕಳಿಗೆ ಹೇಳಬೇಕಾಗಿರೋದು ಬದುಕು ಕೊಡೋ ನದಿಗಳ ಬಗ್ಗೆ ಅಲ್ಲ, ಸಾಯ್ತಾ ಇರೋ, ಈಗಾಗಲೇ ಸತ್ತಿರೋ ನದಿಗಳ ಬಗ್ಗೆ; ಆ ನದಿಗಳನ್ನು ನಂಬಿಕೊಂಡು ಬದುಕಿದ ಜನರನ್ನು ಸಾಯಿಸುತ್ತಾ ಇರೋ ನದಿಗಳ ಬಗ್ಗೆ.
ಯಮುನಾ ನದಿಗೆ ದೆಹಲಿಯೊಂದರಲ್ಲೇ ಪ್ರತಿ ದಿನ ೩.೬ ಬಿಲಿಯನ್ ಟನ್ ಕೊಳಚೆ ಸೇರುತ್ತಾ ಇದೆ. ಯಮುನೆಯ ಕಥೆಯೇ ಹೀಗಾದರೆ ಇನ್ನು ನಮ್ಮ ಪೂಜ್ಯ ಗಂಗೆಯ ಮಡಿಲಲ್ಲಿ ಬಂದು ಬೀಳುವ ತ್ಯಾಜ್ಯಗಳ ಕಥೆ ಹೇಳದಿರುವುದೇ ಒಳ್ಳೆಯದು. ಎಲ್ಲೋ ಹೋಗುವುದೇ ಬೇಡ. ನಮ್ಮ ಬೆಂಗಳೂರಿನ ಅರ್ಕಾವತಿ ನದಿ ಎಲ್ಲಿದೆ? ನಮ್ಮ ಉತ್ತರ ಕರ್ನಾಟಕದ ಕಾಳಿ ನದಿಯ ಸುತ್ತಮುತ್ತಲಿನ ರೈತರ ಹೋರಾಟದ ಕಥೆ ಇನ್ನೂ ದುರಂತಮಯ. ನದಿ ನೀರನ್ನೇ ನಂಬಿಕೊಂಡು ವ್ಯವಸಾಯ ಮಾಡಲು ಇಲ್ಲಿ ಸಾಧ್ಯವೇ ಇಲ್ಲ. ಯಾಕೆಂದರೆ ನೀರು ಗದ್ದೆಗೆ ಬಿಡದಿದ್ದರೆ ಪೈರು ನಾಶವಾಗುತ್ತದೆ, ಈ ನದಿಯ ನೀರು ಬಿಟ್ಟರೂ ಪೈರು ಸಾಯುತ್ತದೆ. ಅಲ್ಲಿನ ನೂರಾರು ಎಕರೆ ಫಲವತ್ತಾದ ಜಮೀನು ಈಗ ಬರಡು ಭೂಮಿ. ಈಗ ಕಾಳಿ ನದಿಯ ನೀರನ್ನು ಹತ್ತಿರದ ದಾಂಡೇಲಿಯಲ್ಲೂ ಯಾರೂ ಕುಡಿಯುವುದಿಲ್ಲ, ಅಲ್ಲಿಗೆ ಕುಡಿಯುವ ನೀರು ಬೇರೆ ಕಡೆಯಿಂದ ತರಿಸಲಾಗುತ್ತದೆ. ಅಲ್ಲಿ ಸುತ್ತಮುತ್ತ ಎಲ್ಲೂ ಮೀನುಗಾರಿಕೆ, ಹೈನುಗಾರಿಕೆ ಯಾವುದೂ ಸಾಧ್ಯವಿಲ್ಲ. ಬೇರೆಡೆಯಿಂದ ಸಾವಿರಾರು ರೂಪಾಯಿ ಕೊಟ್ಟು ತಂದ ಆಕಳು ವಿಚಿತ್ರ ರೋಗಗಳಿಗೆ ಈಡಾಗಿ ಸಾಯುತ್ತವೆ, ಹುಟ್ಟಲಿರುವ ಮಗು, ಅದರ ತಾಯಿ, ದನ-ಕರುಗಳು, ಪೈರು, ಕಾಳಿ ನದಿಯ ನೀರಿನ ಸಂಪರ್ಕಕ್ಕೆ ಬಂದ ಎಲ್ಲಾ ಜೀವಿಗಳಿಗೂ ಅಪಾಯ ಕಟ್ಟಿಟ್ಟ ಬುತ್ತಿ. ಈ ಕಥೆ ಎಲ್ಲೋ ಕೇಳಿದ ಹಾಗೆ ಇದೆಯಾ? ಹೌದು. ಭೋಪಾಲ್ ಅನಿಲ ದುರಂತಕ್ಕೆ ಸಿಲುಕಿಕೊಂಡ ಜನ ಇದೆಲ್ಲ ಕಷ್ಟಗಳನ್ನೆಲ್ಲ ಇನ್ನೂ ಅನುಭವಿಸುತ್ತಿದ್ದಾರೆ.
ಈ ಎಲ್ಲಾ ತೊಂದರೆಗಳಿಗೂ ಮೂಲ ಕಾರಣ ಕಾಳಿ ನದಿ ದಂಡೆಯಲ್ಲಿರುವ West Coast Paper Mills ಮತ್ತು caustic soda ಕಾರ್ಖಾನೆಗಳು, ಅವು ರಾಜಾರೋಷವಾಗಿ ಶುದ್ಧೀಕರಿಸದೆ ನದಿಗೆ ಬಿಡುತ್ತಿರುವ ರಾಸಾಯನಿಕಗಳು. ಮೂಲಗಳ ಪ್ರಕಾರ, Paper Mills ಪ್ರತಿ ದಿನ 64,800 kilolitres ರಾಸಾಯನಿಕಗಳನ್ನು ಕಾಳಿ ನದಿಗೆ ಬಿಡುತ್ತಿದೆ. ಇವಕ್ಕೆಲ್ಲ ಕಲಶ ಇಟ್ಟ ಹಾಗೆ ಪ್ರಪಂಚದಲ್ಲೆ ಏಕೈಕ ಅತ್ಯಂತ ದಟ್ಟ ಕಾಡಿನ ಮಧ್ಯೆ ಸ್ಥಾಪಿಸಲ್ಪಟ್ಟಿರುವ ಕೈಗಾ ಅಣು ವಿದ್ಯುತ್ ಸ್ಥಾವರ. ಸುಪ್ರೀಂ ಕೋರ್ಟ್ ಅಭಿಪ್ರಾಯವನ್ನೂ ತಳ್ಳಿ ಹಾಕಿ ಆ ಸ್ಥಾವರ ನಿರ್ಮಿಸಲಾಗಿದೆ; ಕಾರಣ, ಈಗಾಗಲೇ ಅದಕ್ಕೋಸ್ಕರ ಕೋಟಿಗಟ್ಟಲೆ ಹಣ ಖರ್ಚು ಮಾಡಲಾಗಿದೆ. ಅಣು ಸ್ಥಾವರಗಳ ೩ ಕಿ.ಮೀ. ಸುತ್ತಳತೆಯಲ್ಲಿ ಯಾವುದೇ ಜನ ವಸತಿ ಇರಬಾರದು. ಆದರೆ, ೧.೫ ಕಿ.ಮೀಯಿಂದಲೇ ಜನ ವಸತಿ ಶುರುವಾಗುತ್ತದೆ. ಇದನ್ನೆಲ್ಲ ಕೇಳುವವರು ಯಾರು?
"ಪ್ರವಾಹದ ವಿರುದ್ಧ ಈಜಿದವರಿಗೆ, ಸತ್ಯಕ್ಕಾಗಿ ಹೋರಾಡಿದವರಿಗೆ, ಸಿಗೋದು ಇವು ನಾಲ್ಕು ಮಾತ್ರ: ವ್ಯಂಗ್ಯ, ನಿರ್ಲಕ್ಶ್ಯ, ಏಕಾಂಗಿತನ ಮತ್ತು ಅವಮಾನ," ಇದು ೪೦ ವರ್ಷಕ್ಕೂ ಮೇಲ್ಪಟ್ಟು ನಮ್ಮ ದೇಶದ ಪರಿಸರವನ್ನು ಉಳಿಸಿಕೊಳ್ಳಲು ಹೋರಾಟ ಮಾಡಿರುವ, ಇನ್ನೂ ಇಳಿ ವಯಸ್ಸಿನಲ್ಲೂ ಹೋರಾಡುತ್ತಲೇ ಇರುವ ಚಿಪ್ಕೋ ಚಳುವಳಿ ಹರಿಕಾರ ಸುಂದರ್ ಲಾಲ್ ಬಹುಗುಣ ಹೇಳಿದ ಮಾತು. ಕಾಳಿ ಬಚಾವೋ ಆಂದೋಲನದ ರೂವಾರಿ ಕೂಡ ಅವರೇ. ಕಾಳಿ ನದಿಯನ್ನು ಉಳಿಸಿಕೊಳ್ಳಲು ಸಾಧ್ಯವಿದ್ದರೆ ಅದು ಜನರಿಂದ ಮಾತ್ರ ಸಾಧ್ಯ ಅನ್ನುತ್ತಾರೆ ಬಹುಗುಣ. ಗಂಗಾ ನದಿಗೆ ಕಟ್ಟಿದ ತೆಹ್ರಿ ಅಣೆಕಟ್ಟು ಹಿಮಾಲಯದ ಪರಿಸರಕ್ಕೆ, ಅಲ್ಲಿನ ವನ್ಯಜೀವಿಗಳಿಗೆ ಮತ್ತು ತಪ್ಪಲಲ್ಲಿರುವ ಹಳ್ಳಿಗಳಿಗೆ ಅಪಾಯಕಾರಿ ಅನ್ನುವ ಬಹುಗುಣರ ಹೋರಾಟಕ್ಕೆ ಜಯ ಸಿಗಲಿಲ್ಲ. ಆ ಅಣೆಕಟ್ಟಿನಿಂದ ನೀರನ್ನು ದೆಹಲಿಯ ರಾಜಕಾರಣಿಗಳ ಮನೆಗೆ, five star ಹೋಟೆಲ್ ಗಳಿಗೆ ದಿನಕ್ಕೆ ೫೦೦-೧೦೦೦ ಲೀಟರ್ ಕೊಡ್ತಾರೆ, ಆದರೆ ನೀರಿಲ್ಲದೆ ಸಂಕಟ ಪಡುತ್ತಿರೋ ಹಿಮಾಲಯ ತಪ್ಪಲಿನ ಹಳ್ಳಿಗಳಿಗೆ ೫ ಲೀಟರ್ ಕೂಡ ಸಿಗ್ತಾ ಇಲ್ಲ. ಇಂಥ ಸ್ಥಿತಿ ಕಾಳಿ ತೀರದ ರೈತರಿಗೆ ಬರದೆ ಇರಲಿ.
ಸುಂದರ್ ಲಾಲ್ ಬಹುಗುಣ ಹುಟ್ಟು ಹಾಕಿದ ಕಾಳಿ ಬಚಾವೊ ಆಂದೋಲನವನ್ನು ಉತ್ತರ ಕರ್ನಾಟಕದ ಪರಿಸರ ಸಂರಕ್ಷಣಾ ಕೇಂದ್ರದ ಪರಿಸರವಾದಿಗಳು, ಆದಿವಾಸಿಗಳು ಮತ್ತು ಕೆಲವು ಸಂಘ ಸಂಸ್ಥೆಗಳು ಮುಂದುವರೆಸಿಕೊಂಡು ಹೋಗುತ್ತಿದ್ದಾರೆ. ಆದರೆ ಕಾಳಿ ನದಿಯಾಗಲಿ, ಚಾಮಲಾಪುರ ಉಷ್ಣ ವಿದ್ಯುತ್ ಸ್ಥಾವರವಾಗಲಿ, ಇನ್ಯಾವ ಪರಿಸರ ಸಂಬಂದಿ ವಿಷಯಗಳೇ ಆಗಲಿ, ಅದ್ಯಾಕೆ ಬರೀ ಆ ಪ್ರದೇಶದ ಸುತ್ತಮುತ್ತಲಿನ ಜನ ಮಾತ್ರ ಹೋರಾಟ ಮಾಡುತ್ತಾರೆ?
ಯಾವುದೇ ಸರಕಾರ ಬರಲಿ ಅವರು ಪಠಿಸುವ ಮಂತ್ರ ಒಂದೇ- ಅಭಿವೃದ್ಧಿ, ಅದೂ ಹೇಗೆ? ರಸ್ತೆ, ಅಣೆಕಟ್ಟು ಕಟ್ಟಿದರೆ ಅದು ಅಭಿವೃದ್ಧಿ, ಫಲವತ್ತಾದ ಗದ್ದೆ, ತೋಟಗಳನ್ನು ಕಸಿದುಕೊಂಡು ಅಲ್ಲಿ ಚೆಂದದ ರಸ್ತೆ ಕಟ್ಟಿದರೆ ಸರಕಾರದ ಪ್ರಕಾರ ಅದು ಅಭಿವೃದ್ಧಿ. ಸರಕಾರಗಳು, ಅವುಗಳ ಮಂತ್ರಿಗಳು ಪರಿಸರಕ್ಕೆ ತೀರಾ ಹತ್ತಿರ ಬರುವುದು ಗಿಡ ನೆಡುವ ಕಾರ್ಯಕ್ರಮ ಇದ್ದಾಗ ಮಾತ್ರ. ಪ್ರಕೃತಿಯ, ಪರಿಸರವಾದಿಗಳ, ರೈತರ ಕೂಗು, ಹೋರಾಟ ಬರೀ ಮಾಡಲು ಕೆಲಸ ಇಲ್ಲದವರು ನಮ್ಮ ನೆಮ್ಮದಿಯ ದಿನನಿತ್ಯದ ಆಗುಹೋಗುಗಳಿಗೆ ಮಾಡುವ ತೊಂದರೆ ಅಂತ ಸರಕಾರ ಮಾತ್ರ ತಳ್ಳಿಹಾಕುತ್ತಿಲ್ಲ, ನಾವೂ ಕೂಡ ಅದೇ ರೀತಿ ಮಾತಾಡುತ್ತೇವೆ, ಹಾಗೇ ದಿವ್ಯ ನಿರ್ಲಕ್ಷ್ಯದಿಂದ ನಡೆದುಕೊಳ್ಳುತ್ತಿದ್ದೇವೆ. ಏನೇ ಆಗಲಿ, ಕಾಳಿ ನದಿ ಅಮೇರಿಕಾದ ಇನ್ನೊಂದು ಕೊಲೊರಾಡೊ, ನೀರೇ ಖಾಲಿಯಾಗಿ ಬತ್ತಿ ಹೋದ ಅರಾಲ್ ನದಿ ಆಗುವುದೂ ಬೇಡ. ಕಾಳಿ ನದಿ ತೀರದ ರೈತರ ಬಾಳು ಇನ್ನೊಂದು ಭೋಪಾಲ್ ದುರಂತ ಆಗುವುದೂ ಬೆಡ. ಅದೆಲ್ಲ ನಮ್ಮ ಕೈಯಲ್ಲೆ ಇದೆ.

2 comments:

Anonymous said...

The umblical cord connecting us to the nature is on the verge of being cut. Nature has shaped us so far. It's high time we fulfil our duties towards it. I was a nice article.

Karthik said...

Good article!
I have one concern though. Which is as follows:
videshiyaru bottled neeranna "allindale" tartiddidru: is this a fact ?
The metaphorical reference is a little on the extreme side!