Pages

Subscribe:

Ads 468x60px

Wednesday, January 27, 2010

ವಿದೇಶದಿಂದ ಹಿಂತಿರುಗುವ ಪ್ರತಿಭೆಗಳಿಗೆ ಮಾರ್ಗವೆಲ್ಲಿ?

ಕೆಲವು ವರ್ಷಗಳ ಹಿಂದೆ ಸಿಂಗಾಪುರದ ಟ್ರೈನೊಂದರಲ್ಲಿ ಒಬ್ಬ ಭಾರತೀಯ ಇಂಜಿನಿಯರ್ ಸಿಕ್ಕಿದ್ದರು. ಪರದೇಶದಲ್ಲಿ ಭಾರತದವರು ಸಿಕ್ಕಿದರೆ ಅದು ಯಾವ ರಾಜ್ಯದವರಾದರೂ ಸರಿ, ಹಾಲು ಕುಡಿದಷ್ಟು ಸಂತಸವಾಗುತ್ತದೆ. ಮಾತು ಒಂದು ಹಂತದಲ್ಲಿ ಹಾಗೆ ಕೆಲಸದ ಕಡೆ ಹೊರಳಿತು. ಆಗ ಮೊದಲನೆ ಸಾರಿ ನನಗೆ ಗೊತ್ತಾಗಿದ್ದು, ಬೇರೆ ದೇಶಗಳಲ್ಲಿ ಅದರಲ್ಲೂ ಅಮೇರಿಕದಲ್ಲಿ ನಮ್ಮ ಬುದ್ದಿವಂತ ಡಾಕ್ಟರುಗಳು, ಇಂಜಿನಿಯರ್ ಗಳು, ಇನ್ನಿತರ ಪದವೀಧರರು ಟ್ಯಾಕ್ಸಿ ಡ್ರೈವರ್ ಗಳಾಗಿ ದುಡಿಯುತ್ತಿದ್ದಾರೆ ಅಂತ. ಆಸ್ಟ್ರೇಲಿಯಾದಲ್ಲಿ ಹಣ್ಣಿನ ತೋಟಗಳಲ್ಲಿ ಕೂಲಿ ಕೆಲಸ ಮಾಡುತ್ತಾರೆ ಅಂತ. ಆ ಇಂಜಿನಿಯರ್ ಅಮೇರಿಕಾದ ವಿಮಾನ ನಿಲ್ದಾಣವೊಂದರಲ್ಲಿ ಟ್ಯಾಕ್ಸಿ ಡ್ರೈವರ್ ಆಗಿ ದುಡಿಯುತ್ತಿದ್ದರು, ಆ ಬದುಕು ಸಾಕಾಗಿ ಆಗ ತಾನೆ ಅಮೇರಿಕಾದಿಂದ ಸಿಂಗಾಪುರಕ್ಕೆ ಕೆಲಸ ಹುಡುಕಿಕೊಂಡು ಬಂದಿದ್ದರು. ’ಇಲ್ಲಿ ಸರಿಯಾದ ಕೆಲಸ ಸಿಕ್ಕರೆ ನನ್ನ ಹಾಗೆ ಕಷ್ಟ ಪಡುತ್ತಿರುವ ನನ್ನ ಸ್ನೇಹಿತರಿಗೆ ಇಲ್ಲಿ ಬರಲು ಹೇಳುತ್ತೇನೆ. ಇಲ್ಲಾಂದರೆ ನಾವೆಲ್ಲ ಭಾರತಕ್ಕೆ ಮರಳಿ ಹೋಗುತ್ತೇವೆ. ಅಲ್ಲಿ ಗಂಜಿ ಕುಡಿದುಕೊಂಡು ಇರುತ್ತೇವೆ, ಇಲ್ಲಿನ ಅವಮಾನ ಸಾಕಾಗಿದೆ’ ಅಂದರು. ಆಮೇಲೆ ಅವರ ಭೇಟಿ ಆಗಲಿಲ್ಲ. ಆದರೆ ಅವರ ತರ ಯಾವುದೋ ಕೆಲಸ ಅರಸಿ ಹೋದ ನೂರಾರು ಜನ ಬೇರೆ ದೇಶಗಳಲ್ಲಿ ಅನಿವಾರ್ಯವಾಗಿ ಅವರ ಬುದ್ಧಿವಂತಿಕೆಗೆ, ಓದಿಗೆ ತರವಲ್ಲದ ಇನ್ನ್ಯಾವುದೋ ಕೆಲಸ ಮಾಡುತ್ತಿದ್ದಾರೆ.
ಕರಾವಳಿಯ ಊರುಗಳಲ್ಲಿ, ಪಟ್ಟಣಗಳಲ್ಲಿ ಈಗಲೂ ತಂದೆ-ತಾಯಿಯರು ಗಂಡು ಮಕ್ಕಳ ಓದನ್ನು ಅರ್ಧಕ್ಕೆ ಬಿಡಿಸಿ ಅರಬ್ ದೇಶಗಳಿಗೆ ಕೆಲಸಕ್ಕೆ ಕಳಿಸುತ್ತಿದ್ದಾರೆ. ಅಲ್ಲಿ ಹೋದ ಹುಡುಗರು ಫಿಟ್ಟರ್, ಟೆಕ್ನಿಷಿಯನ್, ಇಲೆಕ್ಟ್ರಿಕಲ್ ರಿಪೇರಿ, ಹೋಟೆಲ್ ಚಾಕರಿಗಳಂತಹ ಅರೆಕುಶಲ ವೃತ್ತಿಗಳನ್ನು ಮಾತ್ರ ಮಾಡಲು ಸಾಧ್ಯ. ಸಿಗುವ ಅಲ್ಪ ಹಣವನ್ನೂ ತಾವು ಉಪವಾಸವಿದ್ದಾದರೂ ಉಳಿಸಿ ಮನೆಗೆ ಕಳಿಸಬೇಕು. ಮನೆಗೆ ಬಂದು ಇಲ್ಲೆ ಯಾವುದಾದರೂ ಸರಿ ಸಣ್ಣ ಕೆಲಸ ಮಾಡಿಕೊಂಡು ಇರುತ್ತೇನೆಂದರೂ ಆ ವಿದೇಶಿ ಹಣದ ವ್ಯಾಮೋಹ, ಆ comfort zone ಬಿಟ್ಟು ಕೊಡಲು ಇಷ್ಟ ಇಲ್ಲದೆ, ಮಕ್ಕಳನ್ನು ಭಾರತಕ್ಕೆ ಬರಲು ಬಿಡದ ತಂದೆ-ತಾಯಂದಿರೂ ಇದ್ದಾರೆ ನಮ್ಮ ನಡುವೆ. ಕಾರಣ ಇಲ್ಲಿನ ನಿರುದ್ಯೋಗವೂ ಆಗಿರಬಹುದು, ಬಡತನದ ಹೆದರಿಕೆಯೂ ಇರಬಹುದು. ಮಕ್ಕಳನ್ನು ಯಾಕೆ ಓದು ಬಿಡಿಸಿ ಅಷ್ಟು ದೂರದ ದೇಶಗಳಿಗೆ ಕಳುಹಿಸುತ್ತೀರಿ? ಕಡೇಪಕ್ಷ ಡಿಗ್ರಿಯನ್ನಾದರು ಮುಗಿಸಲು ಬಿಡಿ ಅಂತ ತನ್ನ ಮೂರು ಗಂಡು ಮಕ್ಕಳನ್ನೂ 10ನೇ ತರಗತಿಗೆ ಶಾಲೆ ಬಿಡಿಸಿ ಬೇರೆ ದೇಶಕ್ಕೆ ಕಳುಹಿಸಿದ ತಾಯಿಯನ್ನು ಕೇಳಿದೆ. ಅದಕ್ಕೆ ಅವರು, ಓದಿ ಏನ್ಮಾಡಬೇಕು? ಎಷ್ಟು ಓದಿದರೂ ಕೆಲಸ ಸಿಗೋದೇ ಕಷ್ಟ. ಈಗ್ಲೇ ಹಣ ಸಂಪಾದನೆ ಮಾಡಲು ಶುರು ಮಾಡಲಿ. ಯಾಕೆ ಅವರು ಸುಮ್ಮನೆ ಓದಿ ಅಷ್ಟು ವರ್ಷ ಹಾಳು ಮಾಡಬೇಕು? ಅವರ ಓದಿನಿಂದ ನಮಗೆ ಉಪಯೋಗವಿಲ್ಲ, ಅಂದರು. ಇಂತಹ ಮಕ್ಕಳನ್ನು ತಿರುಗಿ ಶಾಲೆಗೆ ಬರುವಂತೆ ಮಾಡಲು ಬಹುಶ ನಮ್ಮ ಸರಕಾರದ ಹಾಲು, ಮಧ್ಯಾನದ ಊಟದ ತರದ ಯೋಜನೆಗಳಿಂದ ಸಾಧ್ಯವಿಲ್ಲ ಅನ್ನಿಸುತ್ತದೆ. ಯಾಕೆಂದರೆ ಅವರಿಗೆ ಅವತ್ತಿನ ಊಟ, ಓದು, ಸರಕಾರದ ಯೋಜನೆಗಳ ಸವಲತ್ತು ಬೇಡ. ಅವರಿಗೆ ಬೇಕಾಗಿರುವುದು ದುಡ್ಡು, ಮುಂದಿನ ಜೀವನದ ಆರ್ಥಿಕ ಭದ್ರತೆ, ಜೊತೆಗೆ ತಮ್ಮ ಮಗ ವಿದೇಶದಲ್ಲಿದ್ದಾನೆನ್ನುವ ಹೆಮ್ಮೆ, ಅದ್ಯಾವ ಕೆಲಸವಾದರೂ ಸರಿ.
ಅದೇನೆ ಇರಲಿ. ಇಂತಹ ಹೊರದೇಶಗಳಲ್ಲಿ ಕಷ್ಟಪಡುತ್ತಿರುವ, ಇತ್ತೀಚಿನ ಆರ್ಥಿಕ ಹಿಂಜರಿತದಿಂದ ಕೆಲಸ ಕಳೆದುಕೊಂಡಿರುವ, ತಿರುಗಿ ಭಾರತಕ್ಕೆ ಬರಲು ಇಚ್ಚಿಸುವ ಅನಿವಾಸಿ ಭಾರತೀಯರಿಗೆ ಪ್ರಧಾನಿ ಡಾ. ಮನಮೋಹನ್ ಸಿಂಗ್ ಇತ್ತೀಚೆಗೆ ನಡೆದ ಪ್ರವಾಸಿ ಭಾರತೀಯ ದಿವಸ್ ಕಾರ್ಯಕ್ರಮದಲ್ಲಿ ಸಾಮಾಜಿಕ ಭದ್ರತೆ ಒದಗಿಸುವ ಆಶ್ವಾಸನೆ ಕೊಟ್ಟಿದ್ದಾರೆ. ಅಲ್ಲೇ ಇರುವವರಿಗೆ 2014ರ ಹೊತ್ತಿಗೆ ಅವರಿರುವ ದೇಶದಿಂದಲೇ ಮತದಾನ ಮಾಡುವ ಹಕ್ಕು, ಇಲ್ಲಿನ ಆರ್ಥಿಕ ಅಭಿವೃದ್ಧಿಗೆ ಕೈಜೋಡಿಸಲು ಕರೆ. ನಮ್ಮ ದೇಶದ ರಾಜಕೀಯ, ಆರೋಗ್ಯ, ಶಿಕ್ಷಣ, ಕೃಷಿ ಮುಂತಾದ ಕ್ಷೇತ್ರಗಳಲ್ಲಿ ಭಾಗವಹಿಸಲೂ ಅವಕಾಶ. ನಮ್ಮ ಪ್ರಧಾನಿಯವರ ಆಶಯಗಳು ಒಳ್ಳೆಯದೇ. ಅನಿವಾಸಿ ಭಾರತೀಯರಲ್ಲೂ ತಮ್ಮ ದೇಶದ ಆಗುಹೋಗುಗಳಲ್ಲಿ, ಅಭಿವೃದ್ಧಿ ಕೆಲಸಗಳಲ್ಲಿ ಭಾಗವಹಿಸಲು ಇಚ್ಚೆ ಇರುವವರು ಇದ್ದಾರೆ, ಅಂಥವರು ಈ ಯೋಜನೆಗಳ ಸದುಪಯೋಗ ಮಾಡಿಕೊಳ್ಳುತ್ತಾರೆ ಅನ್ನುವುದರಲ್ಲಿ ಸಂಶಯವಿಲ್ಲ. ಅವರಿಂದಾಗಿ ನಮ್ಮ ರಾಜಕೀಯ, ಆರ್ಥಿಕ ಕ್ಷೇತ್ರಗಳು ಸುಧಾರಣೆ ಕಂಡರೆ ಆ ಯೋಜನೆಗಳೂ ಸಾರ್ಥಕ.
ಭಾರತಕ್ಕೆ ವಿದೇಶಗಳಿಂದ 2007-08ನೇ ಸಾಲಿನಲ್ಲಿ 50 ಶತಕೋಟಿ ಡಾಲರ್ ಗೂ ಅಧಿಕ ಹಣ ಹರಿದುಬಂದಿದೆ. ಇದರಲ್ಲಿ ಶೇ. 40ರಷ್ಟು ಪಾಲು ಬಂದಿರುವುದು ವಿದೇಶಗಳಲ್ಲಿ ಕೆಲಸ ಮಾಡುತ್ತಿರುವ ಕುಶಲ, ಅರೆಕುಶಲ ಕಾರ್ಮಿಕರಿಂದ. ಹಾಗೇ ಆರ್ಥಿಕ ಹಿಂಜರಿತದಿಂದ ಕೆಲಸ ಕಳೆದುಕೊಂಡಿರುವವರು, ಇನ್ನೂ ಕಳೆದುಕೊಳ್ಳುತ್ತಿರುವವರು ಈ ವರ್ಗದ ಕಾರ್ಮಿಕರೇ ಜಾಸ್ತಿ. ಅಂತಹ ಕಾರ್ಮಿಕರು ಅವರಿರುವ ದೇಶಗಳನ್ನು ಬಿಟ್ಟು ಇಲ್ಲಿಗೆ ಸರಕಾರದ ಆಶ್ವಾಸನೆಗಳನ್ನು ನಂಬಿಕೊಂಡು ಬರಲು ಸಾಧ್ಯವೆ? ಇಲ್ಲಿ ಅವರ skillsಗೆ ತಕ್ಕ ಕೆಲಸ ಸಲೀಸಾಗಿ ಸಿಕ್ಕಿದಿದ್ದರೆ ಯಾಕೆ ತಮ್ಮದೆಲ್ಲವನ್ನು ಬಿಟ್ಟು ಅಷ್ಟು ದೂರದ ನಾಡಿಗೆ ಹೋಗುತ್ತಿದ್ದರು? ಅವರಿಗೆ ಈಗ ಬೇಕಾಗಿರುವುದು ಸಾಮಾಜಿಕ ಭದ್ರತೆಯಲ್ಲ, ಆರ್ಥಿಕ ಭದ್ರತೆ. ಇಲ್ಲಿಗೆ ವಾಪಾಸಾಗಲು ಬಯಸುವವರು ಮೊದಲು ಕೇಳುವುದು ಮತದಾನದ ಹಕ್ಕು, ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಲು ಅವಕಾಶಗಳನ್ನಲ್ಲ, ಕೇವಲ ಕೆಲಸವನ್ನು. ನಾನು ಮೊದಲು ಬೇರೆ ದೇಶದಲ್ಲಿ ಕೆಲಸ ಮಾಡುತ್ತಿದ್ದೆ, ಅಲ್ಲಿ ಡಾಲರ್ ಗಳಲ್ಲಿ ಸಂಪಾದನೆ ಮಾಡುತ್ತಿದ್ದೆ ಅಂದರೆ ಯಾವ ದಿನಸಿ ಅಂಗಡಿಯವನೂ ದಿನಸಿ ಕೊಡುವುದಿಲ್ಲ, ಹಾಲಿನವನು ಹಾಲು, ಪೇಪರ್ ಹುಡುಗ ಪೇಪರ್ ಕೊಡುವುದಿಲ್ಲ. ಅದಕ್ಕೆಲ್ಲ ಬೇಕಾಗಿರುವುದು ಕೇವಲ ದುಡ್ಡು. ಅದಕ್ಕೇ ಅನಿವಾಸಿ ಭಾರತೀಯರನ್ನು ನಮ್ಮ ದೇಶಕ್ಕೆ ವಾಪಸಾಗಲು ಕರೆ ಕೊಡುವ ಮುನ್ನ ಇಲ್ಲಿ ಅವರಿಗೆ ಎಲ್ಲಾ ಕ್ಷೇತ್ರಗಳಲ್ಲಿ ಅವಕಾಶ ಸೃಷ್ಟಿಯಾಗಬೇಕು. ಅವರ ಅನುಭವಕ್ಕೆ ತಕ್ಕಂತೆ, ಅಲ್ಲಿಯಷ್ಟಲ್ಲದಿದ್ದಾರೂ, ಸಂಬಳ ದೊರಕಬೇಕು. ಅದಿರಲಿ, ಈಗಲೂ ಇಲ್ಲಿರುವ ಎಷ್ಟೋ ನಿರುದ್ಯೋಗಿಗಳಿಗೆ ಕೆಲಸ ಸಿಕ್ಕಿದರೆ ಅವರು ನಮ್ಮ ದೇಶ ಬಿಟ್ಟು ಯಾಕೆ ಹೋಗುತ್ತಾರೆ? Of course, ಅನಿಷ್ಟಕ್ಕೆಲ್ಲ ಶನೀಶ್ವರನೇ ಕಾರಣ ಎನ್ನುವ ಹಾಗೆ ಭಾರತದ ಲಕ್ಷಾಂತರ ಯುವಕರ ನಿರುದ್ಯೋಗಕ್ಕೆ ಸರಕಾರ ಕಾರಣ ಅನ್ನುವುದು ಸರಿಯಲ್ಲ. ಸರಕಾರ ಎಲ್ಲರಿಗೂ ಕೆಲಸ ಕೊಡಲು ಆಗುವುದೂ ಇಲ್ಲ. ಆದರೆ ಕೆಲಸ ಸಿಗದವರಿಗೆ ಸ್ವಂತ ಕೆಲಸ ಸೃಷ್ಟಿ ಮಾಡಿಕೊಳ್ಳುವುದರಲ್ಲಿ ದಾರಿದೀಪವಾಗುವಲ್ಲಿ ಸರಕಾರದ ಪಾತ್ರ ಮಹತ್ವದ್ದು.
ಇನ್ನು ಅನಿವಾಸಿ ಭಾರತೀಯರು ಈ ದೇಶದಲ್ಲಿ ಬಂಡವಾಳ ಹೂಡುವ ವಿಚಾರಕ್ಕೆ ಬಂದರೆ, ಅವರು ಆಸಕ್ತಿ ತೋರಿಸುತ್ತಿರುವುದು ಹೆಚ್ಚಾಗಿ ಶಿಕ್ಷಣ ಮತ್ತು ವ್ಯಾಪಾರ ಕ್ಷೇತ್ರಗಳಲ್ಲಿ. ಯಾಕೆಂದರೆ ಅವೆರಡು ever-lucrative fields, ಯಾವಾಗಲೂ ಹಾಕಿದ ಬಂಡವಾಳದ ಜೊತೆಗೆ ಖಚಿತ ಲಾಭ ಬರುವ ಕ್ಷೇತ್ರಗಳು. Health tourismನ ಇತ್ತೀಚಿನ ಬೆಳವಣಿಗೆಯಿಂದಾಗಿ ಇನ್ನು ಮೇಲೆ ಅವರು ಆರೋಗ್ಯ ಕ್ಷೇತ್ರದಲ್ಲೂ ಬಂಡವಾಳ ಹೂಡಬಹುದು. ಇನ್ನು ಕೃಷಿ; the farmers in our country have failed to sustain themselves. ಎಲ್ಲರಿಗೂ ಗೊತ್ತಿರುವ ಹಾಗೆ ಕೃಷಿ ಸಾಯುತ್ತಿರುವ ಕ್ಷೇತ್ರ; ಅದರ ಸಾವಿಗೆ ನೇರ ಕಾರಣ ನಮ್ಮ ನೀರು, ವಿದ್ಯುತ್, ಬೀಜ ಸರಿಯಾಗಿ ಪೂರೈಸದ ಸರಕಾರಗಳು. ತುಂಬಾ ಜನ ಅನಿವಾಸಿ ಭಾರತೀಯರಿಗೆ ತಮ್ಮ ದೇಶದ ಅಭಿವೃದ್ಧಿಯಲ್ಲಿ ಭಾಗವಹಿಸುವ ಇಚ್ಚೆ ಇದ್ದರೂ, ಕೃಷಿ ಕ್ಷೇತ್ರಕ್ಕೆ ಅವರು ಕಾಲಿಡಬೇಕಾದರೆ ಅದರಲ್ಲಿ radical improvements ಆಗಲೇಬೇಕು. ರೈತರು ದೇಶದ ಬೆನ್ನೆಲುಬು ಅಂತ ಸರಕಾರಗಳು ಹೇಳಿಕೊಳ್ಳುವುದು ಬಿಟ್ಟು ರೈತರನ್ನು ದೇಶದ ಹೃದಯವನ್ನಾಗಿ ಮಾರ್ಪಡಿಸಬೇಕು. ಇನ್ನೇನು ಬೇಡ. ಬೇಕಾದಷ್ಟು ನೀರು, ಅಗತ್ಯವಿರುವಷ್ಟು ವಿದ್ಯುತ್ ಮತ್ತು ಹುಳ ಹಿಡಿದಿರದ ಬೀಜ ಕೊಟ್ಟರೆ ಸಾಕು, ಆಗ ಸಾಲ, ಸಬ್ಸಿಡಿ ಯಾವುದರ ಅಗತ್ಯವೂ ಇರುವುದಿಲ್ಲ, ಬೇರೆ ದೇಶಗಳಿಂದ ವಾಪಸಾಗುವ ಭಾರತೀಯರು ಮರಳಿ ನಿಜವಾಗಲೂ ಮಣ್ಣಿಗೆ ಬರಲು ಸಾಧ್ಯವಾಗುತ್ತದೆ.
ನಮ್ಮ ಪ್ರಧಾನಿಯವರು ಕೊಟ್ಟ ಆಶ್ವಾಸನೆಗಳು ನಿಜವಾದರೆ ಪ್ರತಿ ವರ್ಷ ಆಚರಿಸುವ ಪ್ರವಾಸಿ ಭಾರತೀಯ ದಿವಸ್ ಕಾರ್ಯಕ್ರಮ ನಮ್ಮ ಸ್ವಾತಂತ್ರ್ಯ ದಿನಾಚರಣೆ, ಗಣರಾಜ್ಯೋತ್ಸವ, ಮಹಾಪುರುಷರ ಜಯಂತಿಗಳ ತರ ಅನಿವಾರ್ಯ ಆಚರಣೆಯಾಗಿ ಉಳಿಯದೆ, ಒಂದು ಅರ್ಥಪೂರ್ಣ ಭವಿಷ್ಯಕ್ಕೆ ಮುನ್ನುಡಿಯಾಗುತ್ತದೆ, ಆಗಬೇಕು.

2 comments:

the social network movie said...

What a sweet and thoughtful idea! Do the people you create them for know you are doing that? Or do you just get info you’ve gathered on the site over time?

Snippet Thoughts said...

Its not collected on site. Some people know and I too have seen them first hand.