Pages

Subscribe:

Ads 468x60px

Saturday, December 5, 2009

ದೇಶ ಕಾಯೋರ ಹಿತ ಕಾಯೋದಕ್ಕೆ ಯಾರಿದ್ದಾರೆ?

ವೀಕೆಂಡ್ ಬಂತೆಂದರೆ ವಾರ ಇಡೀ ಕೆಲಸ ಮಾಡಿದ್ದೀವಿ, ಎರಡು ದಿನ ಪಾರ್ಟಿ, ಶಾಪಿಂಗ್ ಅಂತ ರಿಲಾಕ್ಸ್ ಆಗೋಣ ಅಂದುಕೊಳ್ತೀವಿ. ಹೋಗಲಿ ನಾವು ಕಷ್ಟ ಪಟ್ಟು ಕೆಲಸ ಮಾಡಿದ್ದಾದ್ರೂ ಎಷ್ಟು ದಿನ? ಐದು ಅಥವಾ ಆರು. ಇನ್ನು ಎರಡು ವಾರ ರಜೆ ತೆಗೆದುಕೊಳ್ಳದೆ ಕೆಲಸ ಮಾಡಿಬಿಟ್ಟರಂತೂ ಕೇಳೋದೇ ಬೇಡ, ಪ್ರಪಂಚದ ಭಾರ ಎಲ್ಲಾ ನಮ್ಮ ತಲೆ ಮೇಲೆ ಹೊತ್ತುಕೊಂಡ ಹಾಗೆ ಆಡ್ತೀವಿ. ಆದರೆ ಅಡುಗೆ ಮಾಡೋರಿಗೆ, ದನ ಕಾಯೋರಿಗೆ ರಜೆ ಇಲ್ವಂತೆ, ಹಾಗೇನೇ ದೇಶ ಕಾಯೋರಿಗೆ. ನಾವು ಯೋಚನೆ ಮಾಡದೇ ಇರೋ, taken for granted ಯೋಧರು, ತಿಂಗಳುಗಟ್ಟಲೆ ಮನೆ ಮುಖ ನೋಡದೆ, ಯಾವಾಗ ಮೈಮರೆತರೆ ಶತ್ರುಗಳು ಕಣ್ಣು ತಪ್ಪಿಸಿ ಒಳನುಗ್ಗುತ್ತಾರೋ ಅಂತ ಕಣ್ಣು ಮುಚ್ಚದೆ ನಮ್ಮನ್ನು ಕಾಯೋ ಸೈನಿಕರು, ಅವರನ್ನು ನಾವು ನೆನಸಿಕೊಳ್ಳೋದು ನಮಗೆ ಕಷ್ಟ ಬಂದಾಗ ಮಾತ್ರ.
ದೇಶದ ಯಾವ ಯಾವುದೋ ಮೂಲೆಗಳಿಂದ, ಜಾಸ್ತಿ ಹಳ್ಳಿಗಳಿಂದ ಯಾವುದೋ ಅವಶ್ಯಕತೆಗಳಿಗೆ, ಆದರ್ಶಗಳಿಗೆ, ಅನಿವಾರ್ಯತೆಗಳಿಗೆ ತಲೆಬಾಗಿ ಸೇನೆಗೆ ಸೇರುತ್ತಾರೆ ಯುವಕರು. ನಮ್ಮಲ್ಲಿ ಎಷ್ಟು ಜನಕ್ಕೆ ಗೊತ್ತಿದೆ ಗಡಿಗಳಲ್ಲಿ ಎಷ್ಟು ಯೋಧರು ದಿನಾ ಪ್ರಾಣ ಬಿಡ್ತಾ ಇದಾರೆ ಅಂತ? ನಾವೆಷ್ಟು ಜನ ಆ ಸುದ್ದಿಗಳು ಬಂದಾಗ ಟಿವಿ ಚಾನಲ್ ಬದಲಾಯಿಸದೆ ಇರ್ತೀವಿ? ದಿನಾ ಸಾಯೋರಿಗೆ ಅಳೋರ್ಯಾರು ಅಂತ ಜನ ಸಾಮಾನ್ಯರಿಂದ ಹಿಡಿದು ಸರಕಾರದ ತನಕ ಎಲ್ಲರೂ ತೋರುವ ದಿವ್ಯ ನಿರ್ಲಕ್ಶ್ಯಕ್ಕೆ ಒಳಗಾಗಿರುವವರು ಬಹುಶ ನಮ್ಮ ಸೈನಿಕರು ಮಾತ್ರ ಅನ್ನಿಸುತ್ತಿದೆ. ಸಚಿನ್ ತೆಂಡುಲ್ಕರ್ ೨೦ ವರ್ಷ ಕ್ರಿಕೆಟ್ ಜೀವನ ಪೂರೈಸಿದ್ದಕ್ಕೆ ಅವನಿಗೆ ಪ್ರಶಂಸೆಗಳ ಸುರಿಮಳೆ ಆಯಿತು, ಐಶ್ವರ್ಯ ರೈ ಹುಟ್ಟಿದ ಹಬ್ಬದ ಬಗ್ಗೆ, ಮುಂಬೈ ದಾಳಿಯಲ್ಲಿ ಸೆರೆ ಸಿಕ್ಕ ಉಗ್ರಗಾಮಿ ಅಜ್ಮಲ್ ಕಸಬ್ ಜೈಲ್ ಒಳಗೆ ಮಟನ್ ಬಿರಿಯಾನಿ ಬೇಕು ಅಂತ ಕೇಳಿದಾಗ ಅದರ ಬಗ್ಗೆ, ಬಿರಿಯಾನಿ ಕೊಡದೆ ಇದ್ರೆ ಆಗುವ ’ಮಾನವ ಹಕ್ಕುಗಳ ಉಲ್ಲಂಘನೆ’ ಬಗ್ಗೆ ಚರ್ಚೆಗಳು ಎಲ್ಲಾ ಮಾಧ್ಯಮಗಳಲ್ಲಿ ನಡೆದವು. ಆದರೆ ನಮ್ಮ ಸೈನಿಕರು ಕಳೆದ ೬೦ ವರ್ಷಗಳಿಂದ ಪ್ರತಿಕ್ಷಣ ಹೋರಾಡ್ತಾ ಇದ್ದಾರೆ, ಬರೀ ಗಡಿಗಳಲ್ಲಿ ಮಾತ್ರ ಅಲ್ಲ, ದೇಶದ ಒಳಗೆ ನುಗ್ಗುವ ಉಗ್ರಗಾಮಿಗಳ ವಿರುದ್ಧ ಕೂಡ. ಅವರ ಬಗ್ಗೆ, ಅವರು ಮಾಡ್ತಾ ಇರೋ ಕೆಲಸಗಳ ಬಗ್ಗೆ ಯಾಕೆ ಮಾಧ್ಯಮಗಳಲ್ಲಿ ಚರ್ಚೆ ನಡೆಯಲ್ಲ? ಯುದ್ಧ ಗೆದ್ದು ಬಂದಾಗ ಯಾವ ಪಕ್ಷ ಅಧಿಕಾರದಲ್ಲಿರುತ್ತೋ ಅದು ತನ್ನ ಬೆನ್ನು ತಾನೇ ತಟ್ಟಿಕೊಳ್ಳುತ್ತೆ, ಬದುಕಿ ಉಳಿದ ಸೈನಿಕರನ್ನು ಯಾರೂ ಸನ್ಮಾನ ಮಾಡಲು ಹೋಗುವುದಿಲ್ಲ, ಸತ್ತ ಸೈನಿಕರನ್ನು ಮೆರವಣಿಗೆ ಮಾಡಿ ತಮ್ಮ ದೇಶಪ್ರೇಮ ತೋರಿಸಿಕೊಳ್ಳುತ್ತಾರೆ.
ಹೀಗೆಲ್ಲ ಅನ್ನಿಸಿದ್ದು ಸತತವಾಗಿ ಬರುತ್ತಿರುವ ವರದಿಗಳನ್ನು ಓದಿ. ಸೈನ್ಯಕ್ಕೆ ಯುವಕರು ಸೇರೋದು ತುಂಬಾ ಕಡಿಮೆಯಾಗಿದೆ. ಅದರಲ್ಲೂ ಸೇನಾಧಿಕಾರಿಗಳ ಕೊರತೆ ೧೧,೦೦೦ ದಾಟಿದೆ. ಹೋದ ವರ್ಷ ೧೫೦೦ ಜನ ಅಧಿಕಾರಿಗಳ ಸ್ಥಾನಕ್ಕೆ ಭರ್ತಿಯಾದರೆ, ೧೮೦೦ ಅಧಿಕಾರಿಗಳು ಸೇನೆ ಬಿಟ್ಟು ಹೋಗಿದ್ದಾರೆ. ಯಾರಿಗಾದ್ರೂ ಅಷ್ಟೇ. ನಮ್ಮನ್ನು ತುಂಬಾ ನಿರ್ಲಕ್ಶ್ಯ ಮಾಡ್ತಾ ಇದ್ದಾರೆ ಅನ್ನಿಸಿದಾಗ, ನಮ್ಮ ಅವಶ್ಯಕತೆಗಳಿಗೆ ಬೆಲೆ ಕೊಡ್ತಾ ಇಲ್ಲ ಅನ್ನಿಸಿದಾಗ ಆ ಕೆಲಸ ಮಾಡೋದಕ್ಕೆ ಇರೋ ಉತ್ಸಾಹ ಕಡಿಮೆ ಆಗುತ್ತೆ ಅಲ್ವಾ? ನಮ್ಮ ಸೇನೆಯ ವಿಷಯದಲ್ಲಿ ಆಗ್ತಾ ಇರೋದು ಅದೇ. ಸೇನೆಯಿಂದ ನಿವೃತ್ತಿ ತೆಗೆದುಕೊಂಡು ಬೇರೆ ಕೆಲಸಕ್ಕೆ ಸೇರುತ್ತಾ ಇರುವವರ ಸಂಖ್ಯೆ ಕೂಡ ಜಾಸ್ತಿ ಆಗ್ತಾ ಇದೆ. ಅದರಲ್ಲಿ ಅವರದೇನೂ ತಪ್ಪಿಲ್ಲ. ಈಗ ಇಂಗ್ಲಿಷ್ ಗೊತ್ತಿದ್ರೆ ಸಾವಿರಾರು ರೂಪಾಯಿ ಸಂಪಾದನೆ ಮಾಡಬಹುದು. ಹೇಗಾದ್ರೂ ಬದುಕಬಹುದು. ಆದ್ರೆ ಸೇನೆಯಲಿದ್ದವರು ಅಂತ ಹೇಳಿ, ಸೇನೆ ಸೇರೋಕೆ ಮುಂಚೆ ಯಾವ ಡಿಗ್ರೀನಾದ್ರೂ ಓದಿರಿ, ಒಂದು ಸಲ ಸೇನೆಯಿಂದ ಹೊರಗೆ ಬಂದ ಮೇಲೆ ನಿಮಗೆ ಸೆಕ್ಯುರಿಟಿ ಗಾರ್ಡ್ ಕೆಲಸ ಬಿಟ್ಟು ಬೇರೆ ಸಿಗೋದು ಕಷ್ಟ. ಇದು ನೂರಾರು ಸೈನಿಕರ ಅನುಭವ.
ಇರುವ ಸೇನಾಧಿಕಾರಿಗಳ ಕೊರತೆಯನ್ನು ತುಂಬಿಸಲು ಕೇಂದ್ರ ಸರಕಾರ, ಸೇನೆ ಸತತ ಪ್ರಯತ್ನ ಮಾಡ್ತಾ ಇವೆ. ಸೇನೆಗೆ ಸೇರಿ, ನಿಮ್ಮ ದೇಶಪ್ರೇಮ ತೋರಿಸಿ ಅಂತ ನಮ್ಮ ದೇಶದ ನಾಯಕರು ಭಾಷಣಗಳಲ್ಲಿ ಹೇಳಿ ಚಪ್ಪಾಳೆ ಗಿಟ್ಟಿಸಿಕೊಂಡರೆ ಸಾಲದು. ಯುವಕರು ಸೇನೆ ಯಾಕೆ ಸೇರಬೇಕು ಅನ್ನುವುದಕ್ಕೆ ಒಂದು valid reason ಕೊಡಬೇಕು. ಆದರ್ಶಗಳು ಹೊಟ್ಟೆ ತುಂಬಿಸುವುದಿಲ್ಲ ಅಂತ ಈಗಾಗಲೇ ಸೇನೆ ಸೇರಿ, ಅಲ್ಲಿ ಭ್ರಮನಿರಸನಗೊಂಡು ಹೊರಬಂದ ಸೈನಿಕರಿಗೆ ಗೊತ್ತು. ಸರಕಾರ ಅವರಿಗೆ ಕೊಡೋ ಸಂಬಳ, ಆಮೇಲೆ ಕೊಡೋ ನಿವೃತ್ತಿ ಹಣ ಯಾವುದಕ್ಕೂ ಸಾಲದು. ಸರಕಾರ ತುಂಬಾ ವರ್ಷಗಳ ನಂತರ 6th Pay Commission ಶಿಫಾರಸಿನ ಪ್ರಕಾರ ಸೈನಿಕರಿಗೆ ಸಂಬಳ ಜಾಸ್ತಿ ಮಾಡಿದೆ. ಆದರೆ ಆ ಸಂಬಳಕ್ಕು, ಚಳಿಯಲ್ಲಿರುವ ಸೈನಿಕರಿಗೆ ಬಟ್ಟೆ, ಆಹಾರ ಇತ್ಯಾದಿಗಳನ್ನು ಕಳುಹಿಸಲೂ ಸೇನಾಧಿಕಾರಿಗಳು bureaucrats ಹತ್ರ ಕೈಚಾಚಬೇಕು. ಸಂಬಳ ಜಾಸ್ತಿ ಮಾಡಿ ಅಂತ ವರ್ಷ ವರ್ಷ ಪ್ರತಿಭಟನೆ ಮಾಡದೆ ಇರೋ ಸರಕಾರಿ ನೌಕರರು ಅಂದರೆ ಮಿಲಿಟರಿಯವರು ಮಾತ್ರ ಅಲ್ವಾ? ಈಗ ಸೇನೆ ಸೇರುವವರು ಅಂದರೆ ತೀರಾ ಬಡವರು, ಬದುಕಲು ಇನ್ಯಾವ ದಾರಿಯು ಕಾಣದೆ ಇರುವವರು ಅನ್ನುವ ಸ್ಥಿತಿ ಬಂದಿದೆ. ನಮ್ಮ ನಾಯಕರು, ಶ್ರಿಇಮಂತರೆಲ್ಲ ಅವರವರ ಮಕ್ಕಳನ್ನು ವಿದೇಶಕ್ಕೆ ಕಳುಹಿಸಿ ಓದಿಸುತ್ತಾರೆ, ಸಾಮಾನ್ಯರು ಯಾಕೆ ಸೇನೆಯಲ್ಲಿ ಇದ್ದು ಬಂದವರು ಕೂಡ ನಮ್ಮ ಮಕ್ಕಳು ಅಲ್ಲಿದ್ದು ಅನುಭವಿಸುವುದು ಬೇಡ ಅನ್ನುತ್ತಿದ್ದಾರೆ. ಇನ್ನು ಪ್ರತಿ ಮನೆಯಲ್ಲಿ ಈಗ ಇರುವವರಾದರೂ ಎಷ್ಟು ಜನ? ಇರುವ ಒಬ್ಬರು, ಇಬ್ಬರು ಮಕ್ಕಳನ್ನು ಕಳೆದುಕೊಳ್ಳಲು ಯಾವ ತಂದೆ-ತಾಯಿಯೂ ಸಿದ್ದವಿಲ್ಲ. ೈನ್ನು ಬೇರೆ ದೇಶಗಳಲ್ಲಿ ಇರುವಂತೆ ಪ್ರತಿ 18 ವರ್ಷ ತುಂಬಿದ ಯುವಕ ಅಥವಾ ಯುವತಿ ಸೇನೆ ಸೇರುವುದು ಕಡ್ಡಾಯ ಮಾಡುವುದು ನಮ್ಮ ದೇಶದಲ್ಲಿ ಸಾಧ್ಯವಿಲ್ಲ,ಯಾಕೆಂದರೆ ಅಲ್ಲೂ ದುಡ್ಡಿರುವವರು ತಪ್ಪಿಸಿಕೊಳ್ಳುತ್ತಾರೆ, ಯಥಾಪ್ರಕಾರ ಬಡವರು ಸಿಕ್ಕಿ ಹಾಕಿಕೊಳ್ಳುತ್ತರೆ.
ಸೇನೆ ಸೇರಬೇಕು ಅನ್ನೋ ಇಚ್ಛೆ ಇರುವ ಯುವಕರಿಗೆ ಪ್ರತಿ ಜಿಲ್ಲಾ ಕೇಂದ್ರಗಳಲ್ಲಿ ಸೇನಾ ಕೇಂದ್ರಗಳನ್ನು ಆರಂಭಿಸಬೇಕು, ಸೇನೆಯ ನಿಜವಾದ ಸ್ಥಿತಿಯ ಬಗ್ಗೆ ಯುವಕರಿಗೆ ಅರಿವು ಮೂಡಿಸಲು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಎಲ್ಲಕ್ಕಿಂತ ಹೆಚ್ಚಾಗಿ ನಮ್ಮ ಪಠ್ಯಪುಸ್ತಕಗಳಲ್ಲಿ ಸೇನೆಯ ಬಗ್ಗೆ ಮಾಹಿತಿಯನ್ನು ಸೇರಿಸಬೇಕು. ಅಲ್ಲಿಗೆ ಹೋದವರೆಲ್ಲಾ ಸಾಯುತ್ತಾರೆ ಅನ್ನುವ ನಂಬಿಕೆಯ ಬಗ್ಗೆ ತಿಳುವಳಿಕೆ ಮೂಡಿಸಬೇಕು. ಎಲ್ಲಕ್ಕಿಂತ ಮೊದಲು ಹುತಾತ್ಮರಾದ ಸೈನಿಕರ ಮನೆಯವರಿಗೆ ಪಿಂಚಣಿ ಹಣ ಸರಿಯಾಗಿ ತಲುಪುತ್ತದೆ, ಅವರಿಗೆ ಅನ್ಯಾಯ ಆಗುವುದಿಲ್ಲ ಅನ್ನುವ ನಂಬಿಕೆ ಇದ್ದರೆ ಯುವಕರು ಜಾಸ್ತಿ ಸೇನೆಗೆ ಸೇರುತ್ತಾರೆ. ನಮ್ಮ ಯುವಕರಲ್ಲಿ ದೇಶಭಕ್ತಿ ಕಮ್ಮಿಯಾಗಿಲ್ಲ, ಅದನ್ನು ಕಾಪಾಡಿಕೊಂಡು ಬರುವುದು ಸರಕಾರದ, ಸಮಾಜದ ಕೈಯಲ್ಲಿದೆ. ಅವರು ಶೌರ್ಯಕ್ಕೆ ಕೊಡೋ ಮೆಡಲುಗಳು, ಹೊಗಳಿಕೆ, ಸತ್ತಮೇಲೆ ರಾಜಕಾರಣಿಗಳು ಸುರಿಸೋ ಮೊಸಳೆ ಕಣ್ಣೀರು, ಮಾಧ್ಯಮಗಳ ಮುಂದೆ ಕೊಡೋ ತಾತ್ಕಾಲಿಕ ಚೆಕ್ಕುಗಳಲ್ಲ ನಮ್ಮ ಸೈನಿಕರಿಗೆ ಬೇಕಾಗಿರೋದು. ಅವರಿಗೆ ಬೇಕಾಗಿರೋದು ಮೂರು ಹೊತ್ತು ಅನ್ನ, ನಿವೃತ್ತಿಯ ನೆಮ್ಮದಿಯ ಬಾಳಿಗೆ ಒಂದು ಅವಕಾಶ. ನಮ್ಮನ್ನು, ದೇಶವನ್ನು ಕಾಯೋರಿಗೆ ಅದೂ ಜಾಸ್ತೀನಾ?

1 comments:

Anonymous said...

V meaningful, concerned article shwetha as im about to become high school teacher i ll definitely try to inspire and guide students regarding this.
Pushpa