Pages

Subscribe:

Ads 468x60px

Tuesday, May 26, 2020

ಪಾಶ್ಚಾತ್ಯರ ಕಾಮಾಲೆ ಕಣ್ಣಿಗೆ ಭಾರತವೇಕೆ ಹಳದಿಯಾಗಿ ಕಾಣುತ್ತದೆ?

"ಥ್ಯಾಂಕ್‌ ಗಾಡ್‌. ಕೊರೋನಾ ವೈರಸ್‌ ಭಾರತದಲ್ಲಿ ಶುರುವಾಗಲಿಲ್ಲ, ಏಕೆಂದರೆ ಆಗ ಭಾರತದ ಆಡಳಿತ ವ್ಯವಸ್ಥೆ ಅದಕ್ಕೆ ಚೀನೀಯರಷ್ಟು ಸಮರ್ಥವಾಗಿ ಸ್ಪಂದಿಸುತ್ತಿರಲಿಲ್ಲ. ಬೇರೆಯವರಿಗೆ ಹೋಲಿಸಿದರೆ ಚೀನಾ ಯಾವ ಆಪತ್ತಿಗೂ ತಕ್ಷಣ ಪರಿಣಾಮಕಾರಿಯಾಗಿ ಸ್ಪಂದಿಸುತ್ತದೆ." ಈ ಮಾತುಗಳು ಇಡೀ ಜಗತ್ತು ಸ್ತಬ್ಧವಾಗಿ ನಿಂತಿರುವ ಈ ಘಳಿಗೆಯಲ್ಲಿ, ಅದಕ್ಕೆ ಚೀನಾ ಕಾರಣ ಎಂದು ತಿಳಿದಿರುವ ಯಾರಿಗಾದರೂ ಅಚ್ಚರಿ ಉಂಟುಮಾಡುತ್ತದೆ. ಬ್ರಿಟನ್‌ನ ಖ್ಯಾತ ಅರ್ಥಶಾಸ್ತ್ರಜ್ಞ ಜಿಮ್‍ ಓ’ನೀಲ್‌ ನಮ್ಮ ದೇಶದ ಬಗ್ಗೆ ಇಂಥ ಮಾತಾಡುವುದು ಮೊದಲೇನೂ ಅಲ್ಲ. ಅಸಾಂದರ್ಭಿಕವಾಗಿ, ಆಗುವ ಅನಾಹುತಗಳಿಗೆಲ್ಲ ಭಾರತವನ್ನು ದೂಷಿಸುವ ಪಾಶ್ಚಾತ್ಯರಲ್ಲಿ ಅವರು ಮೊದಲನೆಯವರೂ ಅಲ್ಲ. 
ಪ್ರೊಫ಼ೆಸರ್‌ ಸ್ಟೀವ್‌ ಹಾಂಕಿ ಎನ್ನುವ ಅಮೇರಿಕಾದ ಜಾನ್ಸ್‌ ಹಾಪ್ಕಿನ್ಸ್‌ ಯೂನಿವರ್ಸಿಟಿಯ ಅರ್ಥಶಾಸ್ತ್ರಜ್ಞ, ಭಾರತೀಯರು ಪ್ರತಿಭಟಿಸುವವರೆಗೂ ತಮ್ಮ ಟ್ವೀಟ್‌ಗಳನ್ನು ಕೊರೋನಾ ವೈರಸ್‌ ವಿರುದ್ಧದ ಭಾರತ ಸರ್ಕಾರದ ಕ್ರಮಗಳನ್ನು ದೂಷಿಸುವುದಕ್ಕೇ ಮೀಸಲಿಟ್ಟರು. ಮಾರ್ಚ್ ೧೬ರ ವಾರ ಅಮೇರಿಕಾ ೩೦೦ಕ್ಕೂ ಹೆಚ್ಚು ಸಾವುಗಳನ್ನು ಕಂಡರೆ, ಭಾರತದಲ್ಲಿ ಆದದ್ದು ಎರಡು ಸಾವು. ಆದರೆ ಈ ಅರ್ಥಶಾಸ್ತ್ರಜ್ಞರಿಗೆ ನಮ್ಮ ದೇಶದ ಎರಡು ಸಾವು ನಮ್ಮ ಆರೋಗ್ಯ ವ್ಯವಸ್ಥೆಯ ಅಸಮರ್ಪಕ ನಿರ್ವಹಣೆಯ ಭಯಾನಕ ಉದಾಹರಣೆಯಾಗಿ ಕಂಡಿತು. ಕೇಂದ್ರ ಸರ್ಕಾರದ ’ಆರೋಗ್ಯ ಸೇತು’ ಅಪ್ಲಿಕೇಷನ್‌ ಮೋದಿ ಜನರ ಮೇಲೆ ಬೇಹುಗಾರಿಕೆಗೆ ಇಟ್ಟ ಮೊದಲ ಹೆಜ್ಜೆಯ ತರ ಕಂಡಿತು. ಸುಮಾರು ೧೩೫ ಕೋಟಿ ಜನಸಂಖ್ಯೆ ಇರುವ ಭಾರತದಲ್ಲಿ ಇಷ್ಟು ಕಡಿಮೆ ಸೋಂಕಿತರು ಇರುವುದು ಅವರಿಗೆ ನಂಬಲು ಅಸಾಧ್ಯ. ಮಾತ್ರವಲ್ಲ, ಮೋದಿಯ ಕರೆಗೆ ಓಗೊಟ್ಟು ಜನ ಹೊಡೆದ ಚಪ್ಪಾಳೆ, ಹೊತ್ತಿಸಿದ ದೀಪ, ಊದಿದ ಶಂಖನಾದ ಹಾಸ್ಯಾಸ್ಪದವಾಗಿ ಕಂಡಿತು. ಆದರೆ ಅದೇ ಚಪ್ಪಾಳೆ ಯೂರೋಪಿಯನ್ ರಾಷ್ಟ್ರಗಳಿಂದ ಕೇಳಿದಾಗ ಅವರನ್ನು ಹೊಗಳಲು ಇವರ್ಯಾರೂ ಮರೆಯಲಿಲ್ಲ. 
ನಮ್ಮ ದೇಶ ಪಾಶ್ಚಾತ್ಯರ ಕಾಮಾಲೆ ಕಣ್ಣಿಗೆ ಹಳದಿಯಾಗಿ ಕಾಣುವುದು ಹೊಸತೇನೂ ಅಲ್ಲ. ಈಸ್ಟ್‌ ಇಂಡಿಯಾ ಕಂಪೆನಿ ಭಾರತದಲ್ಲಿ ತನ್ನ ಆಡಳಿತವನ್ನು ಸಮರ್ಥನೆ ಮಾಡಿಕೊಳ್ಳಲು ಮಾಡಿದ ಉಪಾಯಗಳಲ್ಲಿ ಬಿಳಿಯರ ಕೈಯಲ್ಲಿ ಪೂರ್ವಾಗ್ರಹಿತ ಪುಸ್ತಕಗಳನ್ನು ಬರೆಸುವುದೂ ಒಂದು. ತಾವು ಬಂದು ಅನಾಗರಿಕ ಭಾರತೀಯರನ್ನು ಹೇಗೆ ಉದ್ದಾರ ಮಾಡಿದೆವು ಅನ್ನುವುದನ್ನು ಐರೋಪ್ಯ ದೇಶಗಳಲ್ಲಿ ಸಾರುವುದಕ್ಕೋಸ್ಕರ ಬ್ರಿಟಿಷರು ಬರೆಸಿದ ಪುಸ್ತಕಗಳಲ್ಲಿ ಕ್ಯಾಥರೀನ್‌ ಮೇಯೋಳ ’ಮದರ್‌ ಇಂಡಿಯಾ’ ಮತ್ತು ಜೇಮ್ಸ್‌ ಮಿಲ್‌ನ ’ಹಿಸ್ಟರಿ ಆಫ್ ಬ್ರಿಟಿಷ್ ಇಂಡಿಯಾ’ ಪ್ರಸಿದ್ಧವಾದವು.
ಅಮೇರಿಕಾದ ಪತ್ರಕರ್ತೆ ಹಾಗೂ ಬ್ರಿಟನ್‍ ಆರಾಧಕಿಯೆಂದೇ ಖ್ಯಾತಳಾದ ಕ್ಯಾಥರೀನ್‌ ಮೇಯೋ ೧೯೨೦ರ ದಶಕದಲ್ಲಿ ’ಮದರ್‌ ಇಂಡಿಯಾ’ ಬರೆದದ್ದು ಬ್ರಿಟಿಷ್ ಸರ್ಕಾರದ ಆಧಾರವಿಲ್ಲದ ದಾಖಲೆಗಳನ್ನು ಮುಂದಿಟ್ಟುಕೊಂಡು. ಗಾಂಧೀಜಿ ಹೇಳಿದ ಹಾಗೆ ಅದೊಂದು ’ಚರಂಡಿಗಳನ್ನು ತೆಗೆದು ಅದರ ವಾಸನೆಯ ಬಗ್ಗೆ ರಂಗುರಂಗಾಗಿ ವರ್ಣಿಸಿ ಬರೆದ ವರದಿ’ ಮಾತ್ರವಲ್ಲ, ಅವಳ ಪ್ರಕಾರ ’ಭಾರತವೇ ಒಂದು ಚರಂಡಿ.’ ತನ್ನ ಜೀವನದ ಅರ್ಧಭಾಗ ಭಾರತದಲ್ಲಿ ಕಳೆದ ಆನ್ನಿ ಬೆಸೆಂಟ್, ಮೇಯೋ ವರ್ಣಿಸಿದ ಯಾವ ಭಯಾನಕ ದೃಶ್ಯಗಳನ್ನೂ ತಾನು ನೋಡಲಿಲ್ಲ ಎಂದು ಸಾರಾಸಗಟಾಗಿ ಅವಳ ಪುಸ್ತಕವನ್ನು ತಿರಸ್ಕರಿಸಿದರು. 
ಅಷ್ಟಕ್ಕೂ ಮೇಯೋ ಬರೆದದ್ದೇನು? ಇಡೀ ಪುಸ್ತಕದ ತುಂಬ ಓದಲಸಾಧ್ಯವಾದ ಅಸಹ್ಯಕರ ಸುಳ್ಳುಗಳು. ಭಾರತದ ಹಿಂದೂ ಜನ ಎಷ್ಟು ಕೊಳಕು ಎಂದರೆ, ಭಾರತ ಮಾನವ ನಾಗರಿಕತೆಯ ದೇಹದಲ್ಲಿ ಒಂದು ಕ್ಯಾನ್ಸರ್‌ನ ಗಡ್ಡೆ ಎನ್ನುವ ಅವಳ ಕಲ್ಪನೆಗಳಿಗೆ ತಕ್ಕ ಹಾಗೆ ವಿವಿಧ ಉದಾಹರಣೆಗಳು. ಭಾರತಕ್ಕೆ ೧೮೯೬ರಲ್ಲಿ ಪ್ಲೇಗ್‌ ದಾಳಿಯಿಟ್ಟ ಬಗ್ಗೆ ಬರೆಯುತ್ತಾ ಆಕೆ ನಮ್ಮ ದೇಶವೇ ಜಗತ್ತಿನ ಎಲ್ಲಾ ಸಾಂಕ್ರಾಮಿಕ ರೋಗಗಳ ಆಗರ ಎನ್ನುತ್ತಾಳೆ. ಇಡೀ ವಿಶ್ವಕ್ಕೆ ಅಪಾಯಕಾರಿಯಾದ ಹಿಂದೂಗಳನ್ನು ಬ್ರಿಟಿಷರು ಕಾಪಾಡದಿದ್ದಿದ್ದರೆ, ಉತ್ತರದ ವೀರ ಜನಾಂಗಗಳು ಅವರನ್ನು ಯಾವಾಗಲೋ ನಾಶಮಾಡಿರುತ್ತಿದ್ದವು ಎನ್ನುತ್ತಾಳೆ. 
ಇನ್ನು ಜೇಮ್ಸ್‌ ಮಿಲ್‌ ಎನ್ನುವ ಇನ್ನೊಬ್ಬ ಮಹಾನುಭಾವ ಬ್ರಿಟಿಷ್‌ ಆಳ್ವಿಕೆಯಲ್ಲಿದ್ದ ಭಾರತದ ಇತಿಹಾಸದ ಬಗ್ಗೆ ಹನ್ನೆರಡು ವರ್ಷಗಳ ಸುದೀರ್ಘ ಸಮಯ ತೆಗೆದುಕೊಂಡು ಮೂರು ಸಂಪುಟಗಳ ಬೃಹತ್‌ ಗ್ರಂಥ ಬರೆಯುತ್ತಾನೆ. ಭಾರತದ ಬಗ್ಗೆ ತಿಳಿದುಕೊಳ್ಳಲು ಆಸಕ್ತಿ ಇರುವ ಆಗಿನ ಐರೋಪ್ಯ ದೇಶದವರಿಗೆ ಅದೊಂದು ದಾರಿದೀಪವಾಗುತ್ತದೆ. ಜೇಮ್ಸ್‌ ಮಿಲ್‌ ಭಾರತದ, ಇಲ್ಲಿನ ಜನರ ಜೀವನದ, ರಾಜಕೀಯ, ಸಾಮಾಜಿಕ, ಆರ್ಥಿಕ, ಧಾರ್ಮಿಕ ವಿಷಯಗಳ ಬಗ್ಗೆ ಆತ ಅತ್ಯಂತ ನಿಕೃಷ್ಟವಾಗಿ ಬರೆದ. ವಿಪರ್ಯಾಸವೆಂದರೆ, ಅವನು ಆ ಗ್ರಂಥವನ್ನು ಬರೆದದ್ದು ಸಾವಿರಾರು ಮೈಲಿ ದೂರ ಕೂತು, ತನ್ನ ಜೀವನದಲ್ಲಿ ಒಮ್ಮೆಯೂ ಭಾರತಕ್ಕೆ ಕಾಲಿಡದೆ, ಇಲ್ಲಿನ ಸಮಾಜದ ನಾಡಿಮಿಡಿತದ ಅರಿವಿಲ್ಲದೆ, ಇಲ್ಲಿನ ಜನರನ್ನು ಮುಖತ: ಭೇಟಿಯಾಗದೆ. ಇವರಿಬ್ಬರ ಪ್ರಕಾರ ಹಿಂದೂ ನಾಗರಿಕತೆ ಯೂರೋಪಿಯನ್‌ ನಾಗರಿಕತೆಗಿಂತ ಕೆಳಸ್ತರದ್ದು, ಆದ್ದರಿಂದ ಭಾರತೀಯರು ಸ್ವರಾಜ್ಯಕ್ಕೆ ಅರ್ಹರಲ್ಲ. 
ಅವತ್ತಿನಿಂದ ಇವತ್ತಿನವರೆಗೂ ಪಾಶ್ಚಾತ್ಯರು ನಮ್ಮ ಬಗ್ಗೆ ಕೀಳಾಗಿ ಬರೆಯುವುದಕ್ಕೆ, ತಿರಸ್ಕಾರದಿಂದ ಮಾತನಾಡುವುದಕ್ಕೆ ಇರುವುದು ಒಂದೇ ಕಾರಣ. ತಮ್ಮ ಜನಾಂಗದ ಶ್ರೇಷ್ಠತೆಯ ಬಗ್ಗೆ ಅವರಿಗಿರುವ ದೃಢ ನಂಬಿಕೆ. ಒಂದು ರೀತಿಯಲ್ಲಿ ಇವರೆಲ್ಲ ನಮ್ಮ ದೇಶವನ್ನು ಪೂರ್ವಾಗ್ರಹದ ದೃಷ್ಟಿಯಿಂದ ನೋಡುವುದರಲ್ಲಿ ಆಶ್ಚರ್ಯವೇನೂ ಇಲ್ಲ. ಇಲ್ಲಿಗೆ ಬಂದ ಪಾಶ್ಚಾತ್ಯರಲ್ಲಿ ಭಾರತವನ್ನು ಇಷ್ಟಪಟ್ಟವರು, ಆರಾಧಿಸಿದವರು, ಇಲ್ಲಿನ ಸೆಳೆತಕ್ಕೆ ಒಳಗಾಗಿ ಇಲ್ಲೇ ನೆಲೆ ನಿಂತವರು ಬೇಕಾದಷ್ಟು ಜನರಿದ್ದಾರೆ. ಆದರೆ ಅವರ ಅನುಭವಗಳಿಗಿಂತ ಕೆಲವರ ನಕಾರಾತ್ಮಕ ನೋಟ, ಅಭಿಪ್ರಾಯಗಳಿಗೆ ಎಲ್ಲಾ ಕಡೆ ಮನ್ನಣೆ ದೊರೆಯುತ್ತವೆ. ಅದಕ್ಕೆ ಒಂದು ಕಾರಣ, ಇಲ್ಲಿನವರೇ ವಿದೇಶಗಳ ಅನುದಾನಗಳಿಗೆ, ಪ್ರಶಸ್ತಿಗಳಿಗೆ ಬೇಕಾದಂತೆ ಅಂಗಲಾಚುವ ಕೈಗಳ ಮತ್ತು ಖಾಲಿ ನೋಟಗಳ ಬಡಮಕ್ಕಳ, ದೈನ್ಯತೆಯ ಜೀವನದ ಫೋಟೋಗಳನ್ನು ತೆಗೆದು, ಚಲನಚಿತ್ರಗಳನ್ನು ತಯಾರಿಸಿ ಪಾಶ್ಚಾತ್ಯ ಡ್ರಾಯಿಂಗ್‌ ರೂಮ್‌ಗಳಲ್ಲಿ ತೋರಿಸಿ ಭಾರತ ಬಡದೇಶ, ಕೊಳಕು ದೇಶ, ಅಲ್ಲಿನವರಿಗೆ ಬದುಕಲು ನಿಮ್ಮ ಸಹಾಯವಿಲ್ಲದೆ ಸಾಧ್ಯವೇ ಇಲ್ಲ ಎನ್ನುವ ಭಾವ ಹುಟ್ಟಿಸಿರುವುದು. ಅಲ್ಲಿಯೂ ಸ್ಲಂಗಳಿದ್ದಾವೆ, ಬಡತನವಿದೆ, ಹಸಿವಿದೆ. ಆದರೆ ಅವರ ವೈಭವೀಕರಣ ’ಮೂರನೇ ಜಗತ್ತಿನ’ ದೇಶಗಳಿಗೆ ಮಾತ್ರ ಸೀಮಿತ.  
ಕೊರೋನಾ ವೈರಸ್‌ಗೆ ಇಲ್ಲಿಯವರೆಗೆ ಬ್ರಿಟನ್‌ನಲ್ಲಿ ೩೦,೦೦೦ಕ್ಕೂ ಹೆಚ್ಚು ಜನ ಬಲಿಯಾದರೆ, ಭಾರತದ ಸಂಖ್ಯೆ ೨,೦೦೦ದ ಆಸುಪಾಸು. ಆದರೆ ಅಲ್ಲಿನ ಪತ್ರಿಕೆಗಳಿಗೂ, ಬಿಬಿಸಿಯಂತಹ ಚಾನಲ್‌ಗಳಿಗೂ ನಮ್ಮ ದೇಶದ ಬಗ್ಗೆ ಚಿಂತೆ. ಭಾರತದಲ್ಲಿ ಕೊರೋನಾದಿಂದ ಆಗಬಹುದಾದ ಕಲ್ಪಿತ ಅನಾಹುತಗಳ ಬಗ್ಗೆ ಪದೇ ಪದೇ ಅವರ ಮಾಧ್ಯಮಗಳಲ್ಲಿ ಬರಹಗಳು, ಚರ್ಚೆಗಳು ಬರುತ್ತಿವೆ. ಇಲ್ಲಿಯವರೆಗೂ ಜಗತ್ತಿಗೆ ಒಂದೇ ಒಂದು ಸಾಂಕ್ರಾಮಿಕ ರೋಗ ಹರಡದ, ಎರಡು ಕೋಟಿಗೂ ಹೆಚ್ಚು ಜನ ಒಂದೆಡೆ ಒಮ್ಮೆಲೆ ಸೇರುವ ಮಹಾ ಕುಂಭಮೇಳದ ಮಾತ್ರವಲ್ಲದೆ ವರ್ಷವಿಡೀ ದೇಶದ ಮೂಲೆಮೂಲೆಯಲ್ಲಿ ನಾನಾ ದೇವರುಗಳ ಜಾತ್ರೆಗಳಲ್ಲಿ ಲಕ್ಷಾಂತರ ಜನ ಸೇರುವ ಅಸಾಧಾರಣ ಇತಿಹಾಸ ನಮ್ಮದು ಮಾತ್ರ. ಆದರೆ ಅವರಿಗೆ ಕಾಣುವುದು ಬರೀ ಅದರಲ್ಲಿನ ಜಟೆ ಕಟ್ಟಿದ, ವಿಭೂತಿ ಮೈಗೆ ಬಳಿದುಕೊಂಡ ಸಾಧುಗಳು, ಒಂದೇ ನೀರಿನಲ್ಲಿ ಲಕ್ಷಾಂತರ ಜನ ಒಟ್ಟಿಗೆ ಮುಳುಗಿ ಏಳುವ, ಅದರಿಂದ ರೋಗಗಳು ಹರಡಬಹುದಾದ ’ಗಂಡಾಂತರ’ಗಳು. 
ನಮ್ಮ ದೇಶದಲ್ಲಿ ಜನ ರಸ್ತೆಯಲ್ಲಿ ಉಗುಳುತ್ತಾರೆ ನಿಜ, ಕಸದ ರಾಶಿಯ ಪಕ್ಕದಲ್ಲೇ ನಾವು, ನಾಯಿಗಳು, ದನಗಳು ಸಹಜೀವನ ನಡೆಸುತ್ತೇವೆ ನಿಜ. ಪಾಶ್ಚಾತ್ಯರಿಂದ ಇಷ್ಟು ಅವಮಾನಿಸಿಕೊಂಡ ಮೇಲೂ ಸ್ವಚ್ಚತೆಯ ಅರಿವು ನಮಗೆ ಬಂದಿಲ್ಲ ಎನ್ನುವುದು ನಿಜ. ಆದರೆ ಇಲ್ಲಿಯವರೆಗೆ ’ನಾಗರಿಕ’ ದೇಶಗಳ ಹಾಗೆ ನಮ್ಮ ದೇಶದಿಂದ ಯಾವ ಸಾಂಕ್ರಾಮಿಕ ರೋಗಗಳೂ ಜಗತ್ತಿಗೆ ಹರಡಿಲ್ಲ ಅನ್ನುವುದೂ ನಿಜ. ಸ್ಪಾನಿಷ್‌ ಫ಼್ಲೂ ೧೯೧೮ರಲ್ಲಿ ಶುರುವಾದದ್ದು ಕಾನ್ಸಾಸ್, ಅಮೇರಿಕಾದಿಂದ. ಭಾರತಕ್ಕೆ ತಲುಪಿದ ಫ್ಲೂ ದೇಶದೆಲ್ಲೆಡೆ ಹಬ್ಬಿದರೂ ಬ್ರಿಟಿಷ್‍ ಸರ್ಕಾರ ತಲೆಕೆಡಿಸಿಕೊಳ್ಳಲಿಲ್ಲ. ಸಾಮಾನ್ಯ ಜನರೇ ರಾಮಕೃಷ್ಣ ಮಿಶನ್‌ ಮತ್ತಿತರ ಸೇವಾಸಂಸ್ಥೆಗಳ ಜೊತೆ ಸೇರಿ ತಮ್ಮ ಸುತ್ತಮುತ್ತ ರೋಗಕ್ಕೆ ತುತ್ತಾದವರ ಆರೈಕೆ ಮಾಡಿದರು. ಬ್ರಿಟಿಷರು ಫ್ಲೂ ಬಂದದ್ದೇ ಇಲ್ಲಿನವರ ಅಸ್ವಚ್ಚತೆಯಿಂದ ಎಂದು ದೂರುತ್ತಾ ಕಾಲಕಳೆದರು, ಮಾತ್ರವಲ್ಲ ಅವರ ವೈದ್ಯಕೀಯ ಸವಲತ್ತುಗಳು ಕೇವಲ ಇಲ್ಲಿದ್ದ ಆಂಗ್ಲರಿಗೆ, ಅವರ ಮನೆಯವರಿಗೆ ಸೀಮಿತವಾಗಿತ್ತು. ಇನ್ನು ಪಾಶ್ಚಾತ್ಯರು ಕಾಲರಾ ಭಾರತದಿಂದ ಶುರುವಾಯಿತು ಎನ್ನುತ್ತಾರೆ. ಆದರೆ ’ಸುಶ್ರುತ ಸಂಹಿತ’ದಿಂದ ಹಿಡಿದು ನಮ್ಮ ಯಾವ ಹಳೆಯ ದಾಖಲೆಗಳಲ್ಲೂ ಕಾಲರಾ ಬಗ್ಗೆ ಪ್ರಸ್ತಾಪವಿಲ್ಲ, ಬದಲಿಗೆ ನಮ್ಮ ದೇಶಕ್ಕೆ ಬಂದ ಪೋರ್ಚುಗೀಸ್‌ ಸೈನಿಕರಿಂದ ಭಾರತಕ್ಕೆ ಕಾಲರಾ ಹರಡಿರುವ ಬಗ್ಗೆ ಅವರ ವೈದ್ಯರೇ ದಾಖಲಿಸಿದ್ದಾರೆ.
ಕ್ರಿಸ್ಟೋಫರ್‌ ಕೊಲಂಬಸ್‌ ಮೊದಲು ಅಮೇರಿಕಾಗೆ ಕಾಲಿಟ್ಟಾಗ ಅವನನ್ನು ಅಲ್ಲಿನ ಸ್ಥಳೀಯ ಕಾಡು ಜನಾಂಗಗಳು ಸ್ನೇಹದಿಂದ ಬರಮಾಡಿಕೊಳ್ಳುತ್ತಾರೆ. ಆದರೆ ಸುಮಾರು ಎಂಟು ಮಿಲಿಯನ್ ಜನಸಂಖ್ಯೆಯಿದ್ದ ಅಲ್ಲಿನ ಜನಾಂಗ ಐವತ್ತು ವರ್ಷಗಳಲ್ಲಿ ೫೦೦ ಜನರಿಗೆ ಇಳಿಯುತ್ತದೆ. ಇದಕ್ಕೆ ಕಾರಣ ಯೂರೋಪಿಯನ್ನರು ತಮ್ಮ ಜೊತೆ ಬಳುವಳಿಯಾಗಿ ತಂದ ಸಿಡುಬು, ಫ್ಲೂ ಮತ್ತಿತರ ಸಾಂಕ್ರಾಮಿಕ ರೋಗಗಳು. ಸ್ಪಾನಿಷರು ಮೆಕ್ಸಿಕೋ ಕಾಡು ಜನಾಂಗಗಳಿಗೆ ತಂದ ಸಿಡುಬಿನಿಂದಾಗಿ ಸುಮಾರು ಮೂರು ಲಕ್ಷ ಜನ ಸಾಯುತ್ತಾರೆ. ಯಾರಿಂದ ಯಾವ ರೋಗ ಶುರುವಾದರೂ ಐರೋಪ್ಯರು ಮೊದಲು ದೂಷಿಸುತ್ತಿದ್ದದ್ದು ಏಷ್ಯಾ, ಆಫ್ರಿಕಾ ದೇಶಗಳನ್ನು. ಏಕೆಂದರೆ ಅಲ್ಲಿನವರ ವೇಷಭೂಷಣಗಳಲ್ಲಿ, ನಡವಳಿಕೆಯಲ್ಲಿ ’ಅನಾಗರಿಕತೆ’ ಎದ್ದು ಕಾಣುತ್ತಿತ್ತು. ಅವರ ಅನಕ್ಷರತೆ ಅವರನ್ನು ಸೂಟು-ಬೂಟು ಹಾಕಿದ ಐರೋಪ್ಯರ ಎದುರಿಗೆ ಕೀಳರಿಮೆಯಿಂದ ನಿಲ್ಲುವ ಹಾಗೆ ಮಾಡಿತು. ಕಾರಣ ಏನೇ ಇರಬಹುದು, ಈ ಕೀಳರಿಮೆಯ, ಬಿಳಿಯರನ್ನು ಮೆಚ್ಚಿಸುವ ಹಪಹಪಿ ಈಗಲೂ ಮುಂದುವರಿದಿದೆ. 
ಸೂರತ್‌ನಲ್ಲಿ ೧೯೯೪ರಲ್ಲಿ ಪ್ಲೇಗ್‌ಗೆ ೫೬ ಜನ ಬಲಿಯಾದಾಗ ನ್ಯೂಯಾರ್ಕ್‌ ಟೈಮ್ಸ್‌ ಸೂರತ್‌ ನಗರವನ್ನು ’ನಾಗರಿಕತೆಯ ರೋಗಗಳ ಕೊಪ್ಪರಿಗೆ’ ಎಂದು ಕರೆಯುತ್ತದೆ. ಅದೇ ಲಂಡನ್‌ನಲ್ಲಿ ೧೪ನೇ ಶತಮಾನದಿಂದ ಇಲ್ಲಿಯವರೆಗೆ ಮೂರು, ನಾಲ್ಕು ಸಲ ಪ್ಲೇಗ್‌ ಬಂದು ಮೂರರಿಂದ ನಾಲ್ಕು ಲಕ್ಷ ಜನ ತೀರಿಕೊಂಡರೂ ಅದೇ ಪೇಪರ್‌ಗೆ ಇನ್ನೂ ಪದೇ ಪದೇ ಲಂಡನ್‌ಗೆ ಪ್ಲೇಗ್‌ ಬಂದ ಕಾರಣ ತಿಳಿದಿಲ್ಲ. ಇಲ್ಲಿನದ್ದೇ ಬಡತನ, ಅಸ್ವಚ್ಚ ರಸ್ತೆಗಳು, ಮನೆಗಳು, ವೈಯಕ್ತಿಕ ಸ್ವಚ್ಚತೆ ಬಗ್ಗೆ ಗಮನ ಕೊಡದ ಜನರು ಆಗಿನ ಲಂಡನ್‌ ನಗರದಲ್ಲೂ ತುಂಬಿದ್ದರು. ಈಗ ಇಲ್ಲಿಂದ ಹೋಗಿ ನಾಲ್ಕು ದಿನವಿದ್ದು ಬಂದು ಅಲ್ಲಿನ ಸ್ವಚ್ಚತೆಯನ್ನು ಹೊಗಳುವ, ಆದರೆ ಇಲ್ಲಿ ಏರ್‌ಪೋರ್ಟ್‌ನಲ್ಲಿ ಇಳಿದ ತಕ್ಷಣ ಬದಿ ಹೋಗಿ ಉಗುಳುವ ನಮ್ಮ ಜನ ಪಾಶ್ಚಾತ್ಯ ದೇಶಗಳ ಈಗಿನ ಸ್ವಚ್ಚತೆ ಇಲ್ಲಿ ಬರಬೇಕಾದರೆ ಅದರಲ್ಲಿ ನಮ್ಮ ಕರ್ತವ್ಯವೂ ಸೇರಿದೆ ಎಂದು ಒಪ್ಪಿಕೊಳ್ಳಬೇಕು. ಮಾತ್ರವಲ್ಲ, ಇವತ್ತಿಗೂ ನಮ್ಮ ಜನಕ್ಕೆ ಪಾಶ್ಚಾತ್ಯರು ಪೂರ್ಣ ಆತ್ಮವಿಶ್ವಾಸದಿಂದ ಏನೇ ಹೇಳಲಿ ಅದರ ಮೇಲೆ ನಂಬಿಕೆ ಜಾಸ್ತಿ. ನಮ್ಮ ಮಾನಸಿಕ ಗುಲಾಮಗಿರಿ ಯಾವಾಗ ನಿಂತು ನಮ್ಮ ಇತಿಹಾಸದ ಮೇಲೆ, ಯಾವ ಕ್ಷೇತ್ರದಲ್ಲೂ ನಮ್ಮವರ ಪರಿಣತಿಯ ಮೇಲೆ ಅದೇ ನಂಬಿಕೆ ಬರುತ್ತದೆಯೋ ಆಗಲೇ ಹೊರಗಿನವರ ಕಣ್ಣಿಗೆ ಅಂಟಿರುವ ಹಳದಿ ಪೊರೆಯನ್ನು ನಾವು ಸ್ವಚ್ಚಮಾಡಲು ಸಾಧ್ಯ.

(Published in Udayavani dated 17-05-2020)

0 comments: